ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ 1 ರ ಟಿಬೇಟಿಗರ ಮನೆಯೊಂದರಲ್ಲಿ 2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮುಂಡಗೋಡಿನ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೋಳಂಕಿ ಮತ್ತು ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ ಎಂಬುವವರಿಗೆ ಶಿಕ್ಷೆಯಾಗಿದೆ.
2019 ರ ಜನವರಿಯಲ್ಲಿ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರಲ್ಲಿ ಜಾಂಜ್‌ಚುಪ್ ರಾಚನ್ ತೇಂಜಿಂಗ್ ಎಂಬುವವರ ಮನೆಗೆ ರಾತ್ರಿ ನುಗ್ಗಿದ ನಾಲ್ವರು ಮನೆಯ ಯಜಮಾನ ಹಾಗೂ ಮಹಿಳೆಯ ಕೈ, ಬಾಯಿಗಳನ್ನು ಕಟ್ಟಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದರು.
ಜಾಂಜ್‌ಚುಪ್ ರಾಚನ್ ತೇಂಜಿಂಗ್ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ 6 ಲಕ್ಷ ರೂ.ನಗದು, ಎರಡು ಐಫೋನ್, ಒಪ್ಪೊ ಕಂಪನಿಯ ಮೊಬೈಲ್, ಟ್ಯಾಬ್, ಸಿಸಿ ಟಿವಿಯ ಪ್ರೊಜೆಕ್ಟರ್, 3 ಬಂಗಾರದ ಚೈನ್, 2 ಬ್ರೆಸ್‌ಲೆಟ್, 4 ಬಂಗಾರದ ಉಂಗುರ ಹಾಗೂ 3 ಕಿವಿಯ ಓಲೆಗಳನ್ನು ಕದ್ದೊಯ್ದಿದ್ದರು. ದಾಖಲೆ ನಾಶಕ್ಕಾಗಿ ಸಿಸಿ ಟಿವಿಯ ಡಿವಿಆರ್ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಐ ಶಿವಾನಂದ ಚಲುವಾದಿ ನಾಲ್ವರನ್ನು ಬಂಧಿಸಿ, ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಹೀಗಾಗಿ, ಶಿರಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ವಾದ ಮಂಡಿಸಿದರು.