ಮುಂಡಗೋಡ: ಆತ ಮುಂಡಗೋಡಿನ ಹಳ್ಳಿಯಿಂದ ಸಿಟಿಗೆ ದುಡಿಯೋಕೆ ಹೋಗಿದ್ದ. ಕಟ್ಟಡ ಕೆಲಸಕ್ಕೆಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೋಗಿದ್ದ ಯುವಕ ನಾಳೆ ಹಬ್ಬಕ್ಕೆ ಊರಿಗೆ ಬರಬೇಕಿತ್ತು. ತಂದೆ ತಾಯಿ ಹಬ್ಬ ಮಾಡಲಿ ಅಂತಾ ಮನೆಗೆ ನಿನ್ನೆ ದುಡ್ಡು ಕೂಡಾ ಹಾಕಿದ್ದ. ಇನ್ನೇನು ಕೆಲಸ ಮುಗಿಸಿ ಹಬ್ಬಕ್ಕೆ ಬರಬೇಕೆಂದವ ಮಲಗಿದ್ದಲ್ಲೇ ಕೊಲೆಯಾಗಿದ್ದಾನೆ. ತಾನು ಕೆಲಸ ಮಾಡ್ತಿದ್ದ ಕಟ್ಟಡದಲ್ಲಿಯೇ ಆತ ಹೆಣವಾಗಿ ಬಿದ್ದಿದ್ದಾನೆ. ದುಷ್ಕರ್ಮಿಗಳು ಎಲ್ಲೆಂದರಲ್ಲಿ ಇರಿದು ಯುವಕನ ಕೊಲೆ ಮಾಡಿದ್ದಾರೆ. ಕಟ್ಟಡ ಕೆಲಸ ಮಾಡ್ತಿದ್ದ ಕಾರ್ಮಿಕ ಮಲಗಿದಲ್ಲೆಯೇ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಕಟ್ಟಡ ಕಾರ್ಮಿಕನ ಕೊಲೆ ಸುದ್ದಿ ಕೇಳಿ ಅಲ್ಲಿನ ಜನ ಬೆಚ್ಚಿಬಿದ್ದಿದ್ದಾರೆ.
ಹೌದು, ಒಂದು ಕಡೆ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟ ಕಾರ್ಮಿಕ. ಇನ್ನೊಂದು ಕಡೆ ನಿರ್ಮಾಣ ಹಂತದ ಕಟ್ಟಡದಲ್ಲಿ ಪೊಲೀಸ ಕಮೀಷನರ್ ಪರಿಶೀಲನೆ. ಮತ್ತೊಂದು ಕಡೆ ಅಣ್ಣನ ಕಳೆದುಕೊಂಡ ತಮ್ಮನ ಕಣ್ಣೀರು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.. ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ. ಬೆಳಗಿನ ಜಾವ ಉತ್ತರ ಕನ್ನಡ ಜಿಲ್ಲೆಯಿಂದ ಹುಬ್ಬಳ್ಳಿಗೆ ಕಟ್ಟಡ ಕೆಲಸಕ್ಕೆ ಬಂದಿದ್ದ ಯುವಕನ ಬರ್ಬರ ಕೊಲೆಯಾಗಿದೆ. ಹುಬ್ಬಳ್ಳಿಯ ವೆಂಕಟೇಶ್ವರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ 24 ವರ್ಷದ ಮೌಲಾಲಿ ಹೆಣವಾಗಿ ಬಿದ್ದಿದ್ದಾನೆ.
ಮರಗಡಿಯವ..!
ಅಂದಹಾಗೆ, ಕೊಲೆಯಾದ ಮೌಲಾಲಿ ಮುಂಡಗೋಡ ತಾಲೂಕಿನ ಮರಗಡಿ ನಿವಾಸಿ. ಕಳೆದ ಒಂದು ತಿಂಗಳಿಂದ ಕಟ್ಟಡ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ. ಸ್ನೇಹಿತರು, ಮನೆಯವರ ಜೊತೆ ಸೇರಿ ಕಟ್ಟಡ ಕೆಲಸ ಮಾಡ್ತಿದ್ದ ಮೌಲಾಲಿಯನ್ನ ನಸುಕಿನ ಜಾವ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೌಲಾಲಿ ನಿರ್ಮಾಣ ಹಂತದ ಮನೆಯಲ್ಲಿ ವಾಸವಾಗಿದ್ದ ಮಲಗಿದ್ದ ವೇಳೆ ಯಾರೋ ದುಷ್ಕರ್ಮಿಗಳು ಎಲ್ಲೆಂದರಲ್ಲಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಬ್ಬಕ್ಕಾಗಿ ಹಣ ಹಾಕಿದ್ದ..!
ನಿನ್ನೆ ಮೌಲಾಲಿ ಜೊತೆ ಕೆಲಸ ಮಾಡೋ ಹುಡುಗರು ಊರಿಗೆ ಹೋಗಿದ್ರು,ಇವತ್ತು ಮೌಲಾಲಿ ಕೂಡಾ ಕೆಲಸ ಮುಗಿಸಿ ಈದ್ ಮಿಲಾದ್ ಹಬ್ಬಕ್ಕೆ ಊರಿಗೆ ಬರಬೇಕಿತ್ತು.ಊರಿಗೆ ಬರಲೆಂದು ಮೌಲಾಲಿ ಬ್ಯಾಗ್ ಕೂಡಾ ರೆಡಿ ಮಾಡಿದ್ದ, ನಿನ್ನೆ ಮನೆಯವರಿಗೆ ಮೌಲಾಲಿ ತಾನು ದುಡಿದ ಸಂಬಳ ಕೂಡಾ ಹಾಕಿದ್ದಾನೆ. ಮನೆಯಲ್ಲಿ ಖುಷಿಯಿಂದ ಹಬ್ಬ ಮಾಡಲಿ ಅಂತಾ ಹಣ ಕೊಟ್ಟು ನಾಳೆ ಊರಿಗೆ ಬರಬೇಕು ಅಂತಾ ಮೌಲಾಲಿ ಅಂದುಕೊಂಡಿದ್ದ. ಆದ್ರೆ ಇಂದು ನಸುಕಿನ ಜಾವ ಮಲಗಿದಲ್ಲಿಯೇ ಮೌಲಾಲಿ ಹೆಣವಾಗಿದ್ದಾನೆ.
ನಿಗೂಢವಾಗಿದೆ..!
ಮೌಲಾಲಿ ಕೊಲೆಗೆ ಕಾರಣ ಇನ್ನು ನಿಗೂಢವಾಗಿದೆ. ಮೌಲಾಲಿ ಜೊತೆ ಕೆಲಸ ಮಾಡೋ ಇನ್ನೊಬ್ಬ ಕಾರ್ಮಿಕ ಬೆಳಗಿನ ಜಾವ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಮೌಲಾಲಿ ಕೊಲೆ ಕಂಡು ಕೆಲಸಗಾರ ಬೆಚ್ಚಿ ಬಿದ್ದು ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ.ಕೂಡಲೇ ಮೌಲಾಲಿ ಪೋಷಕರಿಗೆ ವಿಷಯ ತಿಳಸಿದ್ದು, ಸ್ಥಳಕ್ಕೆ ಬಂದು ಪೋಷಕರು ಮಗನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ.
ಮದುವೆ ಫಿಕ್ಸ್ ಆಗಿತ್ತು..!
ಇನ್ನು ಮೌಲಾಲಿ ಮಲಗಿದಲ್ಲೇ ಕೊಲೆಯಾಗಿರೋದರ ಹಿಂದೆ ಸಾಕಷ್ಟು ಅನುಮಾನ ಇದೆ. ಕೆಲಸ ನಡೆಯುತ್ತಿರೋ ಕಟ್ಟಡದಲ್ಲಿ ಮೌಲಾಲಿ ಹಾಗೂ ಇನ್ನೊಬ್ಬ ವಾಚಮನ್ ಕೂಡಾ ಇದ್ದ. ಮೌಲಾಲಿ ಕೆಲಸ ಮಾಡಿ ಅಲ್ಲಿಯೇ ಮಲಗುತ್ತಿದ್ದ. ಮನೆಯವರು ಸಹಜವಾಗಿ ವಾಚಮನ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಾಚಮನ್ ಮೇಲೆ ನಮಗೆ ಅನುಮಾನ ಇದೆ ಎಂದು ಮೌಲಾಲಿ ಕುಟುಂಬದವರ ಆರೋಪ. ಅಲ್ಲದೇ ಇನ್ನೊಂದು ಆರು ತಿಂಗಳಲ್ಲಿ ಮೌಲಾಲಿ ಮದುವೆ ಕೂಡಾ ಫಿಕ್ಸ್ ಮಾಡಲಾಗಿತ್ತು.
ಹುಡುಗಿಗಾಗಿ ಕೊಲೆಯಾ..?
ಯಾವಾಗ ನಸುಕಿನ ಜಾವ ಕೊಲೆ ಸುದ್ದಿ ಪೊಲೀಸರಿಗೆ ತಿಳಿಯಿತೋ ಗೋಕುಲ್ ರೋಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುತ್ತಲೂ ಪರಿಶೀಲನೆ ನಡೆಸಿದ್ರು. ಕೊನೆಗೆ ಹುಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಕೂಡಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ರು. ಯುವಕನ ಕೊಲೆ ಹಿಂದೆ ಸಾಕಷ್ಟು ಅನುಮಾನವೂ ಇದೆ. ಕೊಲೆ ಹಿಂದೆ ಹುಡುಗಿ ವಿಚಾರದ ವಾಸನೆಯೂ ಬಡಿತಿದೆ. ಮನೆಯವರು ಪೊಲೀಸರ ಮುಂದೆ ಹೇಳಿರೋ ಪ್ರಕಾರ ಮೌಲಾಲಿ ಹುಡುಗೀರ ವಿಷಯದಲ್ಲಿ ಸ್ವಲ್ಪ ಸರಿ ಇರಲಿಲ್ಲವಂತೆ. ಹೀಗಾಗಿ ಮೌಲಾಲಿ ಕೊಲೆ ಹಿಂದೆ ಹುಡುಗಿ ವಿಚಾರವೂ ಬರ್ತಿದೆ. ಯಾರೊಂದಿಗೂ ಜಗಳ ಮಾಡ್ತಿರಲಿಲ್ಲ, ಹಣದ ವ್ಯವಹಾರ ಇರಲಿಲ್ಲ ಅದು ಹೇಗೆ ಕೊಲೆ ಅನ್ನೋದು ಇದೀಗ ನಿಗೂಢವಾಗಿದೆ. ಪೊಲೀಸರು ಎಲ್ಲ ಕಡೆ ಪರಿಶೀಲನೆ ಮಾಡ್ತಿದ್ದು,ಕಟ್ಟಡದ ಮುಂದೆ ಇರೋ ಸಿಸಿ ಕ್ಯಾಮೆರಾ ಆದರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಬೆಳ್ಳಂಬೆಳಗ್ಗೆ ನಡೆದ ಕೊಲೆ ವಾಣಿಜ್ಯ ನಗರಿ ಜನರನ್ನು ಬೆಚ್ಚಿ ಬೀಳಿಸಿದೆ. 24 ವರ್ಷದ ಯುವಕ ಕೊಲೆಯಾಗ್ತಾನೆ ಅಂದ್ರೆ ಅದಕ್ಕೆ ಬಲವಾದ ಕಾರಣ ಇರಲೇಬೇಕು. ಹುಡುಗಿ ವಿಷಯವೇ ಕೊಲೆಗೆ ಕಾರಣಯ್ತಾ ಅಥವಾ ವಾಚಮನ್ ಕೊಲೆ ಮಾಡಿದ್ನಾ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಈಗಾಗಲೇ ಪೊಲೀಸರು,ಕಟ್ಟಡದ ಮೇಸ್ತ್ತೀ,ಹಾಗೂ ವಾಚಮನ್ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ.