ಹುನಗುಂದ ಗ್ರಾಮಸಭೆಯಲ್ಲಿ ಕೋಲಾಹಲ, ಅಸಂಬದ್ಧ ಉತ್ತರಿಸಿದ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆ..!



ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಇಂದು ಮಂಗಳವಾರ ಗ್ರಾಮ ಸಭೆ ಆಯೋಜಿಸಲಾಗಿತ್ತು. ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಹುತೇಕ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಸಂಬದ್ಧ ಉತ್ತರಗಳಿಂದ ಭಾರೀ ಕೋಲಾಹಲಕ್ಕೆ ಕಾರಣವಾಯ್ತು. ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾ ಮುಗ್ಗಾ ಜಾಡಿಸಿದ್ರು.

ಅದು 75 ಲಕ್ಷದ ಕಾಮಗಾರಿ..!
ಅಸಲು, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಜಲಾಶಯದ ಕಾಲುವೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬಂದಿದೆ‌. ಜಲಾಶಯದ ಅಡಿಯಲ್ಲಿ ಬರುವ ಅತ್ತಿವೇರಿ, ಹುನಗುಂದ, ಅಗಡಿ ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸುವ ಕಾಲುವೆ ಕಾಮಗಾರಿ ಅಕ್ಷರಶಃ ಕಳಪೆಯಾಗಿದ್ದು, ಬರೋಬ್ಬರಿ 75 ಲಕ್ಷ ರೂ. ವೆಚ್ಚದ ಕಾಮಗಾರಿ ಹಳ್ಳ ಹಿಡಿದಿದೆ. ಈ ಕುರಿತು ಗ್ರಾಮಸ್ಥರು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಮರ್ಪಕ ಉತ್ತರ ನೀಡಬೇಕಿದ್ದ ಅಧಿಕಾರಿ, ಅದನ್ನೇಲ್ಲ ಈಗ್ಯಾಕೇ ಕೇಳ್ತಿದ್ದಿರಿ..? ಅವಾಗ ನೀವು ಎಲ್ಲಿ ಹೋಗಿದ್ರಿ..? ಅವಾಗ್ಲೇ ಕೇಳಬೇಕಿತ್ತು ಅಂತಾ ಗ್ರಾಮಸ್ಥರನ್ನೇ ಪ್ರಶ್ನಿಸಿದ್ರು. ಅಲ್ಲದೇ ಅಸಂಬದ್ದವಾಗಿ ಉತ್ತರಿಸಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ರು.

ಹೀಗಾಗಿ, ಅಧಿಕಾರಿಯ ವರ್ತನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ರೈತರು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ‌. ಈ ವೇಳೆ ರೈತರು ಹಾಗೂ ಅಧಿಕಾರಿಯ ನಡುವೆ ಭಾರೀ ವಾಗ್ವಾದಗಳು ನಡೆದಿದೆ. ನಂತರ ಇನ್ನುಳಿದ ಅಧಿಕಾರಿಗಳು ರೈತರು ಹಾಗೂ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.

ಲಂಚ ಕೇಳುವ ಲೈನ್ ಮೆನ್..!
ಇನ್ನು, ಹುನಗುಂದ ಭಾಗದಲ್ಲಿ ಹೆಸ್ಕಾಂ ನಿಂದ ಕಾರ್ಯ ನಿರ್ವಹಿಸ್ತಿರೋ ಲೈನ್ ಮೆನ್ ನಾಗೇಶ್ ಎಂಬುವವರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು. ಟ್ರಾನ್ಸಫಾರ್ಮರ್ ಅಳವಡಿಸಲು ಎರಡರಿಂದ ಮೂರು ಸಾವಿರ ರೂ. ಲಂಚ ಕೇಳ್ತಾರೆ. ಕೊಡದೆ ಇದ್ರೆ ಕೆಲಸ ಮಾಡಿಕೊಡಲ್ಲ ಅಂತಾ ಲೈನ್ ಮೆನ್ ನಾಗೇಶ್ ವಿರುದ್ಧ ರೈತರು ಆರೋಪಿಸಿದ್ರು. ಹೀಗಾಗಿ, ಆ ಲೈನ್ ಮೆನ್ ನಾಗೇಶ್ ಹುನಗುಂದ ಗ್ರಾಮಕ್ಕೆ ಬೇಡ, ಅವ್ರನ್ನು ಬೇರೆಡೆ ವರ್ಗಾಯಿಸಿ ಅಂತಾ ಗ್ರಾಮ ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.

ಒಟ್ನಲ್ಲಿ, ಹುನಗುಂದ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ನಡೆದ ಗ್ರಾಮಸಭೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳಿಗೆ ಖಡಕ್ಕಾದ ಪ್ರಶ್ನೆ ಕೇಳಿ, ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಗ್ರಾಮಸ್ಥರು, ರೈತರು ಕೆಲವೊಂದಿಷ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

error: Content is protected !!