ಮುಂಡಗೋಡ ತಾಲೂಕಿನ ಬಸಾಪುರ, ನಂದಿಕಟ್ಟಾ, ಅಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮರಿಯೊಂದಿಗೆ ತಾಯಿ ಚಿರತೆ ಇಲ್ಲಿ ಓಡಾಡುತ್ತಿದೆ ಅನ್ನೋದು ಕನ್ಫರ್ಮ್ ಆಗಿದೆ. ಹಾಗಂತ ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಬಸಾಪುರದ ಕಾಂಡಚಿನ ಗದ್ದೆಗಳಲ್ಲಿ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶಗಳನ್ನು ಡಂಗುರದ ಮೂಲಕ ರವಾನಿಸಲಾಗುತ್ತಿದೆ.
ನಾಯಿ ಕೊಂಡೊಯ್ದ ಚಿರತೆ..!
ಅಂದಹಾಗೆ, ಕಳೆದ ನಾಲ್ಕೈದು ದಿನಗಳ ಹಿಂದೆ ಬಸಾಪುರ ಸಮೀಪದ ಕಾಡಂಚಿನ ಗದ್ದೆಯಲ್ಲಿ ಗೋವಿನಜೋಳ ಕಾಯಲು ಹೋಗಿದ್ದ ರೈತನಿಗೆ ಚಿರತೆ ಇರುವುದು ಕಂಡು ಬಂದಿದೆ. ಗದ್ದೆ ಕಾಯಲು ಜೊತೆಯಿದ್ದ ನಾಯಿಯನ್ನು ಚಿರತೆ ಎತ್ತಿಕೊಂಡು ಹೋಗಿ ತಿಂದು ಹಾಕಿತ್ತು. ನಂತರದಲ್ಲಿ, ಎಚ್ಚೆತ್ತುಕೊಂಡಿದ್ದ ಆ ಭಾಗದ ರೈತರು, ಸಾರ್ವಜನಿಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಚಿರತೆ ಹೆಜ್ಜೆ ಗುರುತು ಪತ್ತೆ..!
ಇನ್ನು, ಚಿರತೆ ಬಂದಿದೆ ಅನ್ನೋ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ಬಂದಿರೋ ಬಗ್ಗೆ ಶೋಧಕ್ಕೆ ಇಳಿದ ಇಲಾಖೆಗೆ, ಬಸಾಪುರದ ಕಾಡಂಚಿನ ಭಾಗದ ಗದ್ದೆಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಒಂದು ದೊಡ್ಡ ಹೆಜ್ಜೆಗುರುತು, ಅದರ ಜೊತೆ ಪುಟ್ಟ ಪುಟ್ಟ ಮರಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ, ಅಲರ್ಟ್ ಆಗಿರೋ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಎರಡು ತಂಡಗಳ ರಚನೆ.!
ಬಸಾಪುರ ಭಾಗದಲ್ಲಿ ಚಿರತೆ ಪತ್ಯಕ್ಷ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಎರಡು ತಂಡಗಳನ್ನು ರಚಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ನಿನ್ನೆಯಿಂದಲೂ ಆ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.
ಇಲಾಖೆಯ ಬೇಜವಾಬ್ದಾರಿ..?
ಅಸಲು, ಮುಂಡಗೋಡ ತಾಲೂಕಿನಲ್ಲಿ ಈಗಾಗಲೇ ಕಳೆದ ಹಲವು ತಿಂಗಳುಗಳಿಂದ ಚಿರತೆ ಓಡಾಟದ ನಿಚ್ಚಳತೆ ಇಲಾಖೆಗೆ ಖಾತ್ರಿಯಾಗಿದೆ. ಮುಂಡಗೋಡ ಪಟ್ಟಣದ ಹೊರವಲಯದ ಸ್ಮಶಾನದ ಬಳಿ ಚಿರತೆ ಕಾಣಿಸಿಕೊಂಡು ಆತಂಕ ಸಣ್ಣ ಸೃಷ್ಟಿಸಿತ್ತು. ಆ ಹೊತ್ತಲ್ಲಿ, ಎರಡು ಮೂರು ದಿನ ಇದೇ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗ್ರತಿ ಅದು ಇದು ಅಂತಾ ಒಂದಿಷ್ಟು ಓಡಾಡಿದ್ರು. ಆದ್ರೆ, ಆ ಹೊತ್ತಿನಲ್ಲಿ ಚಿರತೆ ಜಾಡು ಹಿಡಿಯುವಲ್ಲಿ ವಿಫಲವಾಗಿದ್ರು. ಅದು ಯಾವ ಕಡೆ ಹೋಗಿದೆ, ಯಾವ ಸ್ಥಿತಿಯಲ್ಲಿದೆ ಅನ್ನೋ ಕನಿಷ್ಟ ಖಬರೂ ಕಂಡುಹಿಡಿಯವಲ್ಲಿ ಸಫಲರಾಗಲಿಲ್ಲ ಅಧಿಕಾರಿಗಳು. ಹೀಗಾಗಿ, ಬಹುಶಃ ಅದೇ ಚಿರತೆ ಇವಾಗ ಬಸಾಪುರ ನಂದಿಕಟ್ಟಾ ಭಾಗಗಳಲ್ಲಿ ಓಡಾಡುತ್ತಿದೆಯಾ..? ಗೊತ್ತಿಲ್ಲ.
ಯಾರು ಜವಾಬ್ದಾರಿ..?
ಅಸಲು, ಚಿರತೆ ತಾಲೂಕಿನ ಹಲವು ಕಡೆ ಓಡಾಡುತ್ತಿದೆ. ರೈತರ ಶ್ವಾನಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತ್ತಿದೆ. ಪುಣ್ಯಕ್ಕೆ, ಇದುವರೆಗೂ ಮನುಷ್ಯರ ಮೇಲೆ ಚಿರತೆಯಿಂದ ಯಾವುದೇ ಅಪಾಯವಾಗಿಲ್ಲ. ಆದ್ರೆ, ಮುಂದೆಯೂ ಹೀಗೆಯೇ ಇರತ್ತೆ ಅನ್ನೋ ಗ್ಯಾರಂಟಿ ಏನು..? ಚಿರತೆಯಿಂದ ಏನಾದ್ರೂ ಅನಾಹುತ ಸಂಭವಿಸಿದ್ರೆ ಯಾರು ಜವಾಬ್ದಾರಿ..? ತಕ್ಷಣವೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಚಿರತೆ ಸೆರೆಗೆ ಮುಂದಾಗಬೇಕಿದೆ ಅನ್ನೋದು ಸಾರ್ವಜನಿಕರ ಆಗ್ರಹ..!