ಹಾವೇರಿ : ನಗರಕ್ಕೆ ಸಮೀಪದ ಅಲದಕಟ್ಟಿ ಗ್ರಾಮದಲ್ಲಿನ ಪಟಾಕಿ ದಾಸ್ತಾನು ಮಾಡಿದ್ದ ಗೋದಾಮಿಗೆ ಬೆಂಕಿ ತಗಲಿ ಭಾರೀ ಅನಾಹುತ ಸಂಭವಿಸಿದೆ. ಈ ವೇಳೆ ಮೂರು ಅಮೂಲ್ಯ ಜೀವಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.
ಈಗ್ಗೆ ಕೆಲವೇ ಹೊತ್ತಿನಲ್ಲಿ ಸಂಜೆ 5 ಗಂಟೆ ವೇಳೆಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಪರಿಶೀಲಿಸುವ ವೇಳೆ ಶೆಟರ್‍ಸ್ ಬಳಿ ಮೂವರ ಶವ ಕಂಡು ಬಂದಿವೆ. ಗೋದಾಮಿನಲ್ಲಿ ರ್‍ಯಾಕ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅದರ ಒಳಗೆ ಇನ್ನು ಹಲವರ ಶವಗಳು ಇರಬಹುದು ಎಂದು ಶಂಕಿಸಲಾಗಿದೆ. ಪರಿಶೀಲನೆಯ ಕಾರ್ಯ ಮುಂದುವರೆದಿದ್ದು, ಗೋದಾಮಿನ ಒಳಗಡೆ ನಾಲ್ವರ ಇದ್ದರೆಂದು ಹೇಳಲಾಗುತ್ತಿದೆ.
ಭೀಕರ ಘಟನೆಯಲ್ಲಿ ಸಾವನ್ನಪ್ಪಿದವರನ್ನು ತಾಲೂಕಿನ ಕಾಟೇನಹಳ್ಳಿ ಗ್ರಾಮದ ಕಾರ್ಮಿಕರೆಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರ ಶೋಕಸಾಗರದಲ್ಲಿದ್ದಾರೆ. ಮೂವರ ಶವಗಳನ್ನು ಸದ್ಯಕ್ಕೆ ಹಾವೇರಿಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಗೋದಾಮಿನ ಪೂರ್ಣಪ್ರಮಾಣದ ಪರಿಶೀನೆ ಮುಕ್ತಾಯದ ನಂತರ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಎನ್ನುವ ಮಾಹಿತಿ ದೊರೆಯಲಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.