ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ, ನಾವು ಅಂದುಕೊಂಡಂಗಿಲ್ಲ ಲೆಕ್ಕ..! ಅಸಲೀಯತ್ತು ಬೇರೆಯದ್ದೇ ಇದೆ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಆದ್ರೆ, ಈಗಲೇ ಸೇರ್ತಾರಾ ಅಥವಾ ಲೇಟಾಗತ್ತಾ ಅನ್ನೊ ಹಲವು ಪ್ರಶ್ನೆಗಳು ಇಡೀ ಕ್ಷೇತ್ರದಾದ್ಯಂತ ಚರ್ಚೆಗೆ ಕಾರಣವಾಗಿವೆ. ಅಸಲು, ಅದೇನೇ ಚರ್ಚೆ ನಡೆದ್ರೂ, ಅದೇನೇ ಊಹಾಪೋಹಗಳು ಜಾರಿಯಲ್ಲಿದ್ರೂ, ಹೆಬ್ಬಾರ್ ಸಾಹೇಬ್ರು ಮಾತ್ರ ಡೋಂಟ್ ಕೇರ್ ಅನ್ನೊ ಮನಸ್ಥಿತಿಯಲ್ಲಿದ್ದಾರೆ. ಯಾಕಂದ್ರೆ, ಅವ್ರ ಆಂತರಿಕ ಲೆಕ್ಕಾಚಾರಗಳೇ ಬೇರೆಯದ್ದಿದೆ.

ಭಾಗಾಕಾರ, ಗುಣಾಕಾರಗಳೇ ಬೇರೆ..!
ಅಂದಹಾಗೆ, ಸದ್ಯ ಹರಡಾಡ್ತಿರೋ ಕಾಂಗ್ರೆಸ್ ಸೇರೋ ಬಣ್ಣ ಬಣ್ಣದ ರೂಮರ್ರುಗಳಿಗೆ ಹೆಬ್ಬಾರ್ ಪಡೆಯ ಅಂಗಳದಲ್ಲಿ ನಾಜೂಕಿನ ಪ್ರತ್ಯುತ್ತರಗಳು ಸಿಗುತ್ತಿವೆ. ಇಂತಹದ್ದೊಂದು ರೂಮರ್ರುಗಳು ಹೆಚ್ಚೆಚ್ಚು ಹರಡಿದಷ್ಟು ಹೆಬ್ಬಾರ್ ಪಡೆಗೆ ಕ್ಷೇತ್ರದ ಜನರ ಮನಸ್ಥಿತಿ ಅರಿಯಲು ಸಾಧನವಾಗುವಂತಿದೆ ಅಷ್ಟೆ. ಆದ್ರೆ, ಅದರಾಚೆಗಿನ ಹಕೀಕತ್ತುಗಳು, ಲಾಭ ನಷ್ಟಗಳ ಗುಣಾಕಾರಗಳು, ಭಾಗಾಕಾರಗಳು ಒಳಗೊಳಗೇ ಸಮೀಕರಣಗೊಳ್ಳುತ್ತಿವೆ. ರಾಜಕೀಯ ಚಾಣಾಕ್ಷತೆಯಲ್ಲಿ ಲೆಕ್ಕ ಹಾಕ್ತಿರೋ ಶಿವರಾಮ್ ಹೆಬ್ಬಾರ್ ತಮ್ಮದೇ ಆದ ದಾರಿಯಲ್ಲಿ ಈಗಾಗಲೇ ಎಲ್ಲ ಮಜಲುಗಳ ಬ್ಲ್ಯೂ ಪ್ರಿಂಟ್ ರೆಡಿ ಮಾಡಿಕೊಂಡು ಆಗಿದೆಯಂತೆ.

ಡಿಸೆಂಬರ್ ಹೊತ್ತಿಗೆ ರಾಜೀನಾಮೆ..?
ಸದ್ಯ ಎಲ್ರೂ ಅಂದುಕೊಂಡಂತೆ, ಶಿವರಾಮ್ ಹೆಬ್ಬಾರರು ರಾಜೀನಾಮೆ ಕೊಟ್ಟೇ ಬಿಡ್ತಾರೆ ಅನ್ನೋ ಮಾತುಗಳು ಹರಿದಾಡ್ತಿತ್ತು. ಆದ್ರೆ, ಆ ರೂಮರು ಒಂದರ್ಥದಲ್ಲಿ ರಾಜಕೀಯ ಗಿಮ್ಮಿಕ್ಕು ಅನ್ನೋ ಖಚಿತ ಮಾಹಿತಿ ಇದೆ. ಅವರಂದುಕೊಂಡಂತೆ ಎಲ್ಲಾ ಲೆಕ್ಕಗಳೂ ತಾಳೆಯಾದ್ರೆ, ಬಹುತೇಕ ಡಿಸೆಂಬರ್ ಕೊನೆವಾರ, ಅಥವಾ ಜನೆವರಿ ಮೊದಲ ವಾರದಲ್ಲಿ ಬಿಜೆಪಿ ತೊರಿಯೋದು ಪಕ್ಕಾ ಎನ್ನಲಾಗ್ತಿದೆ. ಈಗಲೇ ರಾಜೀನಾಮೆ ಕೊಟ್ರೆ, ಮುಂದಿನ ದಾರಿಯ ಹೆಜ್ಜೆಗಳು ಒಂದಿಷ್ಟು ಕಠಿಣವಾಗುವ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ ಹೆಬ್ಬಾರ್ ಯೋಚಿಸಿಯೇ ಹೆಜ್ಜೆ ಇಡ್ತಿದಾರೆ ಎನ್ನಲಾಗ್ತಿದೆ. ಬಹುತೇಕ ತಾಪಂ, ಜಿಪಂ ಚುನಾವಣೆ ಹೊತ್ತಿಗೆ ಬಿಜೆಪಿಗೆ “ಕೈ” ಕೊಡೋದು ಫಿಕ್ಸ್ ಆದಂತಾಗಿದೆ.

ಲೋಕಸಭೆಗೆ ಸ್ಪರ್ಧಿಸಲ್ಲ..!
ಅಸಲು, ಸದ್ಯ ಹರಡಿರೋ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಗೆ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಅನ್ನೋದು ಬಹುತೇಕ ಕಟ್ಟು ಕತೆಗಳಾ..? ಹೌದು, ಅಂತಿವೆ ಬಲ್ಲ ಮೂಲಗಳು. ಯಾಕಂದ್ರೆ, ಲೋಕಸಭೆ ಚುನಾವಣೆಗೆ ಹೆಬ್ಬಾರ್ ಸ್ಪರ್ಧಿಸೋಕೆ ಸಾಧ್ಯವೇ ಇಲ್ಲವಂತೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ರೆ, ಮೋದಿ ಅಲೆಯ ಮುಂದೆ ಗೆಲುವು ಕಷ್ಟ ಕಷ್ಟ ಅನ್ನೋ “ಗ್ಯಾರಂಟಿ” ಇದೆ. ಅಲ್ಲದೇ, ಬಿಜೆಪಿಯಲ್ಲಿ ಅದೇನೇ ತಿಪ್ಪರಲಾಗ ಹಾಕಿದ್ರೂ, ಅದೇನೇ ಮಾತುಗಳು ಜಾರಿಯಲ್ಲಿದ್ರೂ ಅನಂತಕುಮಾರ್ ಹೆಗಡೆಯವರೇ ಲೋಕಸಭೆಯ ಅಭ್ಯರ್ಥಿಯಾಗೋದು ನಿಶ್ಚಿತವಾಗಿದೆ. ಈಗ ನಾನು ಲೋಕಸಭೆಗೆ ಸ್ಪರ್ಧಿಸಲ್ಲ ಅಂತಾ ಅನಂತಣ್ಣ ಹೇಳಿದ್ರೂ, ಹೈಕಮಾಂಡ್ ಕೊನೆ ಕ್ಷಣದಲ್ಲಿ ಅವ್ರನ್ನೇ ಮನವೊಲಿಸಿ ಅಭ್ಯರ್ಥಿಯನ್ನಾಗಿಸೋದು ಗ್ಯಾರಂಟಿ. ಹೀಗಾಗಿ, ಆ ಹೊತ್ತಲ್ಲಿ ಅನಂತಣ್ಣನ ಎದುರು ಸ್ಪರ್ಧಿಸೋಕೆ ಹೆಬ್ಬಾರ್ ಸಾಹೇಬ್ರು ಖಂಡಿತ ಒಪ್ಪಿಕೊಳ್ಳೊಕೆ ಸಾಧ್ಯವೇ ಇಲ್ಲ. ಇನ್ನು ಪುತ್ರ ವಿವೇಕ್ ಗೂ ಕೂಡ ಟಿಕೆಟ್ ಕೊಡಿಸಿ ಅದೃಷ್ಟ ಪರೀಕ್ಷೆಗೆ ಅಣಿಯಾಗೋಕೆ ಒಪ್ಪೋದು ಡೌಟು. ಒಂದುವೇಳೆ ಅನಂತಣ್ಣನ ಹೊರತಾಗಿ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ “ಲೋಕ” ಅಭ್ಯರ್ಥಿಯಾದ್ರೆ, “ವಿವೇಕ” ದ ಆಟ ಆಡುವ ಯೋಚನೆಯಲ್ಲಿದ್ದಾರಂತೆ ಹೆಬ್ಬಾರರು.. ಬಿಟ್ರೆ, ತಾವೇ ಲೋಕಸಭೆಯ ಕಾಂಗ್ರೆಸ್ ಆಭ್ಯರ್ಥಿಯಾಗೋ ಯಾವೊಂದೂ ಯೋಚನೆಯೂ ಇಲ್ಲ ಅಂತಿದೆ ಬಲ್ಲ ಮೂಲ. ಹೀಗಾಗಿನೇ ಅಳೆದೂ ತೂಗಿ ರಾಜೀನಾಮೆಯ ದಿನಾಂಕ ನಿಗದಿಗೊಳಿಸೋ ಸಾಧ್ಯತೆ ನಿಚ್ಚಳವಾಗಿದೆ.

ಮೋದಿ ಭಯ..?
ಹಾಗೆ ನೋಡಿದ್ರೆ, ಶಿವರಾಮ್ ಹೆಬ್ಬಾರ್ ಸದ್ಯ ರಾಜೀನಾಮೆ ನೀಡದೇ ಡಿಸೆಂಬರ್ ಹೊತ್ತಿಗೆ ಅಥವಾ ಜನೆವರಿಯಲ್ಲಿ ರಾಜೀನಾಮೆ ನೀಡುವ ಲೆಕ್ಕದ ಹಿಂದೆ, ಅದೊಂದು ಭಯ ಇದೆಯಂತೆ. ಒಂದುವೇಳೆ ಈಗಲೇ ರಾಜೀನಾಮೆ ನೀಡಿದ್ರೆ, ಉಪಚುನಾವಣೆ ನಡಿಯೋದು ಲೋಕಸಭಾ ಚುನಾವಣೆಯ ಜೊತೆಗೇ ಆಗತ್ತೆ. ಹಾಗೆ ಲೋಕಸಭಾ ಚುನಾವಣೆಯ ಜೊತೆಯೇ ಉಪಚುನಾವಣೆ ನಡೆದ್ರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲೋದೂ ಕೂಡ ಕಷ್ಟವಾಗತ್ತೆ. “ಲೋಕ” ಚುನಾವಣೆಯಲ್ಲಿ ಮೋದಿ ಅಲೆಯ ಎಫೆಕ್ಟ್ ವಿಧಾನಸಭಾ ಉಪ ಚುನಾವಣೆಗೂ ತಾಗೋ ಭಯ ಹೆಬ್ಬಾರ್ ಅಂಗಳದಲ್ಲಿ ಚರ್ಚೆಯಾಗಿದೆ.‌ ಹೀಗಾಗಿ, ಡಿಸೆಂಬರ್ ಅಥವಾ ಜನೆವರಿ ಹೊತ್ತಿಗೆ ರಾಜೀನಾಮೆ ನೀಡಿದ್ರೆ, ಬಹುತೇಕ ಲೋಕಸಭೆ ಚುನಾವಣೆ ಮುಗಿದ ನಂತರ ಉಪಚುನಾವಣೆ ನಡೆಯತ್ತೆ. ಅವಾಗ ಆಡಳಿತಾರೂಢ ಪಕ್ಷದ “ಹವಾ” ದ ಮೇಲೆ ಸುಲಭದ ಜಯ ದಾಖಲಿಸಬಹುದು ಅನ್ನೋ ಲೆಕ್ಕಾಚಾರವಿದೆ.

ಕ್ಷೇತ್ರದಲ್ಲಿ ಆಂತರಿಕ ಸರ್ವೆ..?
ಇನ್ನು, ಹೆಬ್ಬಾರರು ಬಹುತೇಕ ಒಂದು ಕಾಲು ಕಾಂಗ್ರೆಸ್ ನಲ್ಲಿ ಇಟ್ಟಿರೋ ಸೂಚನೆಗಳು ಸಿಕ್ಕುತ್ತಿವೆ. ಈ ಕಾರಣಕ್ಕಾಗೇ ಕ್ಷೇತ್ರದಲ್ಲಿ ಮತದಾರನ ಮನಸು ಅರಿಯುವ ಕಾರ್ಯವೂ ಕೂಡ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಗೆ ಜಂಪಿಂಗ್ ಆದ್ರೆ ತಮ್ಮ ಜೊತೆಗಿದ್ದ ಮುಖಂಡರು ಯಾರ್ಯಾರು ಹಿಂಬಾಲಿಸಲಿದ್ದಾರೆ..? ಯಾರ್ಯಾರು ಕೈ ಕೊಡಲಿದ್ದಾರೆ ಅನ್ನೋ ಸಂಪೂರ್ಣ ಹಕೀಕತ್ತುಗಳನ್ನು ಅರಿಯಲು ಹೆಬ್ಬಾರರ ಅದೊಂದು ಪಡೆ ಸದ್ಯ ಫಿಲ್ಡಿನಲ್ಲಿದೆ. ಜೊತೆಗೆ, ಸಾದಕ ಬಾದಕಗಳ ಸಂಪೂರ್ಣತೆ ಅರಿಯಲು ತಮ್ಮದೇ ಟೀಂ ರಚಿಸಿದ್ದಾರೆ ಸಾಹೇಬ್ರು.

ತಾಪಂ ಜಿಪಂ ಚುನಾವಣೆ ಲೆಕ್ಕ..?
ಜೊತೆಗೆ, ಇನ್ನೇನು ಕೆಲವೇ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡೆಯಲಿದೆ. ಆ ವೇಳೆ ಇಡೀ ಕ್ಷೇತ್ರದಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಲು ರಣತಂತ್ರ ಹೆಣೆಯುತ್ತಿದ್ದಾರಂತೆ. ಈ ಮೂಲಕ ತಮ್ಮ ಜೊತೆಗಿರೋ ಲೋಕಲ್ ನಾಯಕರುಗಳನ್ನೂ ಕೂಡ ತಮ್ಮ ಜೊತೆಗೇ ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ರೂಪಿಸಿದ್ದಾರಂತೆ‌. ತಮ್ಮ ಲೋಕಲ್ ವೀರರಿಗೆ ಸರಿಹೊಂದುವ ಮೀಸಲಾತಿಗಳನ್ನು ಪಡೆಯಲು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರಂತೆ. ಇದೇಲ್ಲವೂ ವ್ಯವಸ್ಥಿತ ಪ್ಲ್ಯಾನ್ ಗಳ‌ ಮೂಲಕವೇ ಜಾರಿಯಾಗಲಿದೆ ಅನ್ನೋದು ಅವ್ರ ಆಪ್ತ ವಲಯದ ಮಾತು.

ಲೋಕಲ್ ಲೀಡರ್ಸ್ ಕತೆಯೇನು..?
ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಹೆಬ್ಬಾರ್ ಜೊತೆ, ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿಬಂದಿದ್ದ ಬಹುತೇಕ‌ ಲೋಕಲ್ ಲೀಡರುಗಳು ಈ ಕ್ಷಣಕ್ಕೂ ಹೆಬ್ಬಾರ್ ಜೊತೆಗೆ ಹೆಜ್ಜೆಯ ಮೇಲೊಂದ್ ಹೆಜ್ಜೆಯನ್ನಿಟ್ಟು, ನೀವೇಲ್ಲೋ ನಾವಲ್ಲೇ ಅಂತಿದಾರೆ. ಆದ್ರೆ, ಬಿಜೆಪಿಯಲ್ಲೇ ಇದ್ದು ಹೆಬ್ಬಾರ್ ಸಾಹೇಬ್ರ ಜೊತೆ ಗಳಸ್ಯ ಕಂಠಸ್ಯವಾಗಿದ್ದ ಬಿಜೆಪಿಯ ಕೆಲ ಮೂಲ ಕುಳಗಳೇಲ್ಲ ಮತ್ತೆ ಸಾಹೇಬ್ರ ಜೊತೆ ಹೆಜ್ಜೆ ಹಾಕ್ತಾರಾ..? ಈ ಪ್ರಶ್ನೆ ಖುದ್ದು ಹೆಬ್ಬಾರರಿಗೂ ಕಾಡ್ತಿದೆ. ಯಾಕಂದ್ರೆ, ಇಡೀ ಕ್ಷೇತ್ರದಲ್ಲಿ ಮೂಲ ಬಿಜೆಪಿಗರು ಯಾವತ್ತೂ ಹೆಬ್ಬಾರರನ್ನು ಅಪ್ಪಿಕೊಂಡೇ ಇಲ್ಲ. ಆದ್ರೆ, ಅದರ ನಡುವೆಯೂ ಕೆಲವ್ರು ಹೆಬ್ಬಾರರ ಜೊತೆ ಹೆಜ್ಜೆಯಿಟ್ಟು ಗೆಲುವಿಗೆ ಶ್ರಮಿಸಿದ್ದರು. ಆದ್ರೆ, ಅಂತವರಿಗೆ ಗೆಲುವಿನ ನಂತರ ಹೆಬ್ಬಾರರ ಈ ಪಕ್ಷಾಂತರ ತೀರ್ಮಾನ ಬಹುತೇಕ ಶಾಕ್ ನೀಡಿದೆ. ಹೀಗಾಗಿ ಅವ್ರ ದಾರಿ ಯಾವುದು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಒಟ್ನಲ್ಲಿ, ಹೆಬ್ಬಾರ್ ಸಾಹೇಬರ ಪಕ್ಷಾಂತರದ ರೋಚಕ ಕಹಾನಿ ಸದ್ಯ ಕ್ಷೇತ್ರದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸಾರ್ವಜನಿಕ ವಲಯದಲ್ಲಿನ ಚರ್ಚೆಗಳೇ ಬೇರೆಯಾದ್ರೆ, ಅಸಲೀ ಆಟಗಳ ರೂಪುರೇಷೆಗಳು ತೆರೆಮರೆಯಲ್ಲಿ ತನ್ನದೇ ಆದ ಲೆಕ್ಕಾಚಾರದ ಗೆಣಕಿ ಹಾಕ್ತಿವೆ. ಕೆಲವೇ ದಿನಗಳಲ್ಲಿ ಅಸಲೀ ಪಿಚ್ಚರ್ ತೆರೆಗೆ ಬರೋದಂತೂ ಪಕ್ಕಾ..! ಅಲ್ಲಿವರೆಗೂ ಕಾಯಬೇಕಷ್ಟೆ.

* ಸಂತೋಷ ಶೆಟ್ಟೆಪ್ಪನವರ್

error: Content is protected !!