ಮುಂಡಗೋಡ ಜೂನಿಯರ್ ಕಾಲೇಜಿನಲ್ಲಿ  ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

ಮುಂಡಗೋಡ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಬಿಸಿ ಸಾಂಬಾರ್ ಬಿದ್ದು ತೀವ್ರ ಗಾಯಗೊಂಡಿದ್ದ ಬಿಸಿಯೂಟದ ಅಡುಗೆ ಸಹಾಯಕಿ ಮೃತಪಟ್ಟಿದ್ದಾಳೆ. ಕಳೆದ ಶನಿವಾರ ನಡೆದಿದ್ದ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ,ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ ಅಂತಾ ಮಾಹಿತಿ ಲಭ್ಯವಾಗಿದೆ.

ಅಂದಹಾಗೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ(49) ಸುಟ್ಟು ಗಾಯಗೊಂಡು ಸದ್ಯ ಮೃತಪಟ್ಟಿರೋ ಮಹಿಳೆಯಾಗಿದ್ದಾಳೆ. ಕಳೆದ ಶನಿವಾರ ಬಿಸಿಯೂಟದ ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ ಬಡಿಸಲು ಅಣಿಯಾಗಿದ್ದಳು. ಆ ಹೊತ್ತಲ್ಲಿ ಮತ್ತೋರ್ವ ಅಡುಗೆ ಸಹಾಯಕಿ ಪಾರ್ವತಿ ಎಂಬುವರ ಜೊತೆ ಸೇರಿ ಸಾಂಬಾರ ಪಾತ್ರೆ ತರುವಾಗ ಅನ್ನಪೂರ್ಣ ಕಾಲು ಜಾರಿ ಬಿದ್ದಿದ್ದಳು. ಹೀಗಾಗಿ, ಬಿಸಿ ಸಾಂಬಾರ ಅವರ ಮೈ ಮೇಲೆ ಬಿದ್ದಿತ್ತು. ಪರಿಣಾಮ, ಅವರ ದೇಹವು ತೀವ್ರ ಸುಟ್ಟು ಗಾಯವಾಗಿತ್ತು. ತಕ್ಷಣವೇ ಗಾಯಗೊಂಡ ಅಡುಗೆ ಸಹಾಯಕಿಯನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಕಿಮ್ಸ್ ನಲ್ಲಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ.

ಮೃತ ಅನ್ನಪೂರ್ಣ

ಶನಿವಾರ ಸಾಂಬಾರ್ ಹೇಗೆ..?
ಅಷ್ಟಕ್ಕೂ, ಬಿಸಿಯೂಟದ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಅಡುಗೆ ಸಹಾಯಕಿ ಬಲಿಯಾಗಿದ್ದು ನಿಜಕ್ಕೂ ದುರಂತವೇ ಸರಿ. ಆದ್ರೆ, ಇಲ್ಲಿ ಬಿಸಿಯೂಟದ ಮೆನು ಪ್ರಕಾರ, ಪ್ರತೀ ಶನಿವಾರ ವಿದ್ಯಾರ್ಥಿಗಳಿಗೆ ಫಲಾವ್, ಅಥವಾ ಉಪ್ಪಿಟ್ಟು ಮಾಡಿ ನೀಡಲಾಗುತ್ತದೆ. ಆದ್ರೆ, ಇಲ್ಲಿ ಮಾತ್ರ ಶನಿವಾರವೂ ಜಸ್ಟ್ ಅನ್ನ ಸಾಂಬಾರ್ ಯಾಕೆ ನೀಡಲಾಗ್ತಿದೆ..? ಅಷ್ಟಕ್ಕೂ, ಇಲ್ಲಿನ ವ್ಯವಸ್ಥಾಪಕರು ಫಲಾವ್ ಮಾಡಲು ತಗಲುವ ವೆಚ್ಚ ಭರಿಸಲಾಗದೇ ಕೇವಲ ಅನ್ನ ಸಾಂಬಾರ್ ಗಷ್ಟೇ ಸೀಮಿತವಾಗಿದ್ರಾ..? ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಿಸಬೇಕಿದೆ.

ಪರಿಹಾರವೇನು..?
ಇನ್ನು, ಬಿಸಿಯೂಟದ ಅಡುಗೆ ಸಹಾಯಕಿ ಇಂತಹದ್ದೊಂದು ದುರಂತದಲ್ಲಿ ಸಾವನ್ನಪ್ಪಿದ್ದು ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಆ ಬಡಕುಟುಂಬ ತನ್ನ ಮನೆಯ ಯಜಮಾನಿಯನ್ನು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿದೆ. ಹೀಗಾಗಿ, ನೊಂದ ಕುಟುಂಬಕ್ಕೆ ಸಾಂತ್ವನದ ಜೊತೆ ಪರಿಹಾರ ನೀಡುವ ಜರೂರತ್ತು ಇದೆ. ಶಿಕ್ಷಣ ಇಲಾಖೆ ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕಿದೆ.

error: Content is protected !!