ಕಾಂಗ್ರೆಸ್ ಸೇರೋ ಹಿಂದಿದೆಯಾ ಮಹಾ ಪ್ಲ್ಯಾನ್..? ಲೋಕಲ್ ಬಿಟ್ಟು ಲೋಕಸಭೆಗೆ ಜಿಗಿತಾರಾ ಶಿವರಾಮ್ ಹೆಬ್ಬಾರ್..? ಕೈ ಅಂಗಳದಲ್ಲಿ ಚರ್ಚೆ ಆಗ್ತಿರೋದಾದ್ರೂ ಏನು..?

ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸು ಎಂಬುವ ಮಾಹಿತಿ ಲಭ್ಯವಾಗ್ತಿದೆ. ಆದ್ರೆ, ಈ ಬಗ್ಗೆ ಶಾಸಕ ಹೆಬ್ಬಾರರು ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಬದಲಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂಗೆ ಮಾತಾಡ್ತಿದಾರೆ. ಸತ್ಯ ಅಂದ್ರೆ, ಹೆಬ್ಬಾರ್ ಸಾಹೇಬ್ರ ಲೆಕ್ಕಾಚಾರ ಬೇರೇಯದ್ದೇ ಇದೆಯಾ..? ಈಗಾಗಲೇ ಕೇಸರಿ ಅಂಗಳದಿಂದ ಒಂದು ಹೆಜ್ಜೆ ಹೊರಗೆ ಇಟ್ಟು ಆಗಿದೆಯಾ..? ಅಷ್ಟಕ್ಕೂ, ಕಾಂಗ್ರೆಸ್ “ಕೈ” ಹಿಡಿಯಲು ಇಟ್ಟಿರೋ ಬೇಡಿಕೆಗಳಾದ್ರೂ ಏನು..? ಅಸಲು, ಕಾಂಗ್ರೆಸ್ ಹೈಕಮಾಂಡ್ ಹೆಬ್ಬಾರ್ ಸಾಹೇಬ್ರ ಬೇಡಿಕೆಗಳನ್ನ ಒಪ್ಪಿಕೊಳ್ಳತ್ತಾ..? ಹಾಗಿದ್ರೆ, ಬರುವ ಲೋಕಸಭಾ ಚುನಾವಣೆ ಹೊತ್ತಿಗೆ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಬಿಡತ್ತಾ..? ಒಳಗೊಳಗಿನ ಬಾತ್ಮಿಗಳು ಏನಿದೆ..? ಇದೇಲ್ಲದರ ಕುರಿತಾಗಿ ವರದಿ ಇದು.

ಭವಿಷ್ಯದ ಚಿಂತೆಯಾ..?
ಯಸ್, ಸದ್ಯ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಶುರುವಾಗಿದೆ. ತಮ್ಮ ಜೊತೆ, ತಮ್ಮ ಸುಪುತ್ರನ ರಾಜಕೀಯ ಕಣ ಹದಗೊಳಿಸುವ ಯೋಚನೆ ತಲೆ ಹೊಕ್ಕಿದೆ. ಹೀಗಾಗಿನೇ ಬಹುತೇಕ ಬಿಜೆಪಿ ತೊರೆಯುವ ತೀರ್ಮಾನಕ್ಕೆ ಬಂದಿದ್ದಾರೆ ಅನ್ನೋ ಬಾತ್ಮಿಗಳು ಸಿಗುತ್ತಿವೆ. ಈ ಕಾರಣಕ್ಕಾಗಿಯೇ ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆಯೂ ನಡೆದು ಆಗಿದೆ ಅನ್ನೋ ಮಾಹಿತಿ ಇದೆ. ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಹೆಬ್ಬಾರರವರ ಒಂದು ಹಂತದ ಮಾತುಕತೆ ಆಗಿದೆಯಂತೆ. ಅದ್ರಲ್ಲಿ, ಶಿವರಾಮ್ ಹೆಬ್ಬಾರ್ ಇಟ್ಟಿರೋ ಬೇಡಿಕೆಯಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡತ್ತಾ..? ಅದೇ ಸದ್ಯ ಯಕ್ಷ ಪ್ರಶ್ನೆಯಾಗಿದೆ. ಆದ್ರೆ, ಹೇಗಾದ್ರೂ ಸರಿ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 20 ಕ್ಷೇತ್ರದಲ್ಲಿ ಗೆಲ್ಲಲೇಬೇಕು ಅಂತಾ ಜಿದ್ದಿಗೆ ಬಿದ್ದಿರೋ ಕೈ ಪಡೆ, ಗೆಲ್ಲುವ ಕುದುರೆಗಳಿಗಾಗಿ ತಲಾಶ್ ನಲ್ಲಿದೆ. ಅದಕ್ಕಾಗಿ ಏನ್ ಬೇಕಾದ್ರೂ ಮಾಡೋಕೆ ರೆಡಿಯಾಗಿದೆ.

ಇದು ಕೈ ರಣತಂತ್ರ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಿಂದಿನಂತಿಲ್ಲ. ಇಲ್ಲಿ, ಅನಂತಕುಮಾರ್ ಹೆಗಡೆ ಸದ್ಯ ಸೈಲೆಂಟ್ ಆಗಿದ್ದಾರೆ. ರಾಜಕೀಯದ ಮಾತೇ ಬೇಡ ಅಂತಾ ಮೌನವಾಗಿದ್ದಾರೆ. ಅಲ್ದೇ ಬರುವ “ಲೋಕ” ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಅಂತಾ ಈಗಾಗಲೇ ಹೇಳಿದ್ದಾರೆ. ಹೀಗಾಗಿ, ಅದರ ಎಫೆಕ್ಟ್ ಲೋಕಸಭೆ ಚುನಾವಣೆ ಮೇಲೆ ಖಂಡಿತ ಬಿದ್ದೇ ಬೀಳತ್ತೆ. ಅಷ್ಟಕ್ಕೂ, ಅನಂತಣ್ಣನ ಬಿಟ್ರೆ ಉತ್ತರ ಕನ್ನಡ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿಯಾಗೋರು ಯಾರು..? ಒಂದುವೇಳೆ ಕಾಗೇರಿ ಅಥವಾ ಶಶಿಭೂಷಣ್ ಹೆಗಡೆಯವರಿಗೆ ಟಿಕೆಟ್ ನೀಡಿದ್ರೆ ಕ್ಷೇತ್ರ ಉಳಿಸಿಕೊಳ್ಳೊಕೆ ಬಿಜೆಪಿಗೆ ಸಾಧ್ಯವಾ..? ಹಾಗಿದ್ರೆ, ಕಾಗೇರಿಯವರನ್ನೇ ಕಣಕ್ಕಿಳಿಸೋ ಯೋಚನೆಯಲ್ಲಿರೋ ಬಿಜೆಪಿಗೆ, ಸೆಡ್ಡು ಹೊಡೆಯಬಲ್ಲ ಸಮರ್ಥ ಅಭ್ಯರ್ಥಿ ಕಾಂಗ್ರೆಸ್ ನಲ್ಲಿ ಯಾರಿದ್ದಾರೆ..? ಇದೇಲ್ಲ ಚರ್ಚೆಯಲ್ಲಿರುವಾಗಲೇ ಕೈ ಪಡೆಗೆ ಶಿವರಾಮ್ ಹೆಬ್ಬಾರ್ “ಫಿಟ್” ಅನ್ನೋ ಯೋಚನೆ ಬಂದಿದೆಯಂತೆ. ಈ ಕಾರಣಕ್ಕಾಗೇ ಶಿವರಾಮ್ ಹೆಬ್ಬಾರ್ ಜೊತೆ ಮಾತುಕತೆ ನಡೆದಿದೆ ಎನ್ನಲಾಗ್ತಿದೆ.

ಹಾಗಿದ್ರೆ ಬೇಡಿಕೆಯೇನು..?
ಒಂದು ಮೂಲಗಳ ಮಾಹಿತಿ ಪ್ರಕಾರ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ನಡೆದ ಮಾತುಕತೆಯಲ್ಲಿ, ಶಿವರಾಮ್ ಹೆಬ್ಬಾರ್ ಒಂದಿಷ್ಟು ಬೇಡಿಕೆ ಇಟ್ಟಿದ್ದಾರಂತೆ. ಬರುವ ಲೋಕಸಭಾ ಚುನಾವಣೆಯಲ್ಲಿ, ತಮಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವುದಾದರೆ, ನಂತರ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಸುಪುತ್ರ ವಿವೇಕ್ ಹೆಬ್ಬಾರ್ ಗೆ ಟಿಕೆಟ್ ನೀಡಬೇಕು ಅನ್ನೋ ಬೇಡಿಕೆ ಮುಂದಿಟ್ಟು ಕೂತಿದ್ದಾರಂತೆ. ಆದ್ರೆ, ಇದಕ್ಕೆ ಡಿಕೆಎಸ್ ಬಹುತೇಕ ಸಾಧ್ಯವಿಲ್ಲ ಅಂತಾ ಹೇಳಿದ್ದು, ಲೋಕಸಭಾ ಕ್ಷೇತ್ರದ ಟಿಕೆಟ್ ನಿಮಗೆ ಕೊಡ್ತಿವಿ, ಆದ್ರೆ ಈಗ ಸದ್ಯ ಯಲ್ಲಾಪುರ ಕ್ಷೇತ್ರದ ಟಿಕೆಟ್ ತಮ್ಮ ಪುತ್ರನಿಗೆ ಕೊಡೋಕೆ ಸಾಧ್ಯವಿಲ್ಲ. ಮುಂದಿನ ಚುನಾವಣೆಗೆ ನೋಡೋಣ ಅಂದಿದ್ದಾರಂತೆ. ಆದ್ರೂ, ಕೂಡ ಹೈಕಮಾಂಡ ಅಂಗಳದಲ್ಲಿ ತಮ್ಮ ಈ ಬೇಡಿಕೆಯನ್ನು ತೆರೆದಿಡೋದಾಗಿ ಹೇಳಿದ್ದಾರಂತೆ ಹೀಗಾಗಿ, ಹೈಕಮಾಂಡ್ ಏನಾದ್ರೂ ಹೆಬ್ಬಾರ್ ಸಾಹೇಬ್ರ ಬೇಡಿಕೆಗೆ ಅಸ್ತು ಅನ್ನತ್ತಾ ಅಂತಾ ಕಾದು ನೋಡ್ತಿದಾರೆ ಅನ್ನೊ ಮಾತುಗಳು ಹರಿದಾಡ್ತಿವೆ.

ಸಿಎಂ ಒಪ್ಪಿಲ್ಲ..!
ಅಸಲು, ಶಿವರಾಮ್ ಹೆಬ್ಬಾರ್ ಸಾಹೇಬರ ಬೇಡಿಕೆಯ ವಿಷಯ ತಿಳಿದ ಸಿಎಂ ಸಿದ್ದರಾಮಯ್ಯ ಅದೇಲ್ಲ ಸಾಧ್ಯವಿಲ್ಲ ಅನ್ನೋ ಮಾತು ಹೇಳಿದ್ದಾರಂತೆ. ನಿಮಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡ್ತಿವಿ ಬೇಕಿದ್ರೆ ಬನ್ನಿ ಅಂತಾ ಹೇಳಿದ್ದಾರಂತೆ. ಹೀಗಾಗಿ, ಹೆಬ್ಬಾರ್ ಸಾಹೇಬ್ರು ಒಂದಿಷ್ಟು ಯೋಚಿಸಿ ತೀರ್ಮಾನಕ್ಕೆ ಬರುವ ಮಾತು ಹೇಳಿದ್ದಾರಂತೆ.
ಇದು ಒಂದು ಭಾಗ..

ಒಳಗೊಳಗಿನ ಬೇಗುದಿಯಾ..?
ಹಾಗೆ ನೋಡಿದ್ರೆ, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಗಳಿಗೆಯಿಂದಲೂ ಯಲ್ಲಾಪುರ ಕ್ಷೇತ್ರದಲ್ಲಿ ಅವರ ವಿರುದ್ಧ ಮೂಲ ಬಿಜೆಪಿಗರ ಕೆಂಗಣ್ಣು ಕೆಂಡವಾಗುತ್ತಲೇ ಇತ್ತು. ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲೇ ಬೇಕು ಅಂತಾ ಜಿದ್ದಿಗೆ ಬಿದ್ದಿದ್ದ ಮೂಲ ಬಿಜೆಪಿಗರ ವಿರುದ್ಧ ಈಗಾಗಲೇ ಹೆಬ್ಬಾರ್ ಕಿಡಿಕಾರಿದ್ದಾರೆ. ಜೊತೆಗೆ, ಅಂತವರ ವಿರುದ್ಧ ದೂರು ನೀಡಿದ್ರೂ ಯಾವೊಂದೂ ಕ್ರಮಗಳೇ ಆಗಿಲ್ಲ ಅನ್ನೋ ನೋವೂ ಕೂಡ ಹೊರಹಾಕಿದ್ದಾರೆ‌. ಆದ್ರೆ ಇದೇಲ್ಲ ಅಸಲು ಕಾರಣವೆ ಅಲ್ಲ ಅಂತಾ ಮೇಲ್ನೋಟಕ್ಕೆ ಅನಿಸ್ತಿದೆ. ಎಲ್ಲೊ ಒಂದುಕಡೆ ಬಿಜೆಪಿ ತೊರೆಯಲು ಇದೊಂದು ನೆಪವಷ್ಟೇ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಆದ್ರೆ, ಕ್ಷೇತ್ರದ ಬಿಜೆಪಿಯಲ್ಲಿ ಹೆಬ್ಬಾರ್ ಹಣಿಯಲು ಸನ್ನದ್ದವಾಗಿ ಕೂತಿರೋ ಬಹುದೊಡ್ಡ ಪಡೆಯೇ ಇದೆ ಅನ್ನೋದು ಮಾತ್ರ ಸತ್ಯ.

ಭವಿಷ್ಯವಿಲ್ವಾ..?
ಬಹುಶಃ ಬಿಜೆಪಿಯಲ್ಲೇ ಮುಂದುವರೆದ್ರೆ ಭವಿಷ್ಯ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದ್ರಾ ಹೆಬ್ಬಾರ್..? ಈ ಪ್ರಶ್ನೆ ಬಹುತೇಕ ಮುಂಚೂಣಿಯಲ್ಲಿದೆ. ಯಾಕಂದ್ರೆ, ಸದ್ಯ ಹೆಬ್ಬಾರ್ ಸಾಹೇಬ್ರಿಗೆ ತಮ್ಮ ಜೊತೆ ತಮ್ಮ ಸುಪುತ್ರ ವಿವೇಕ್ ಹೆಬ್ಬಾರ್ ರಾಜಕೀಯ ಭವಿಷ್ಯದ ಬಗ್ಗೆಯೂ ಸಾಕಷ್ಟು ಕನಸುಗಳಿವೆ. ಒಂದುವೇಳೆ, ಬಿಜೆಪಿಯಲ್ಲಿ ಮುಂದುವರೆದ್ರೆ ಮುಂದಿನ ಚುನಾವಣೆಯಲ್ಲಿ ವಯಸ್ಸಿನ ಕಾರಣಕ್ಕೆ ತಮಗೆ ಬಿಜೆಪಿ ಟಿಕೆಟ್ ಸಿಕ್ಕೊದು ಬಲುಕಷ್ಟ. ಯಾಕಂದ್ರೆ, ಈಗಾಗಲೆ 66 ರ ಗಡಿಯಲ್ಲಿರೋ ಹೆಬ್ಬಾರ್, ಮುಂದಿನ ಚುನಾವಣೆ ಹೊತ್ತಿಗೆ 70 ರ ಗಡಿ ದಾಟಿರ್ತಾರೆ. ಹೀಗಾಗಿ, ಬಿಜೆಪಿ ಟಿಕೆಟ್ ಸಿಗೋದಕ್ಕೆ ಒಂದಿಷ್ಟು ಹೆಚ್ಚಿನ ಟೆನ್ಶೆನ್ ಇರತ್ತೆ. ಇನ್ನು, ತಮ್ಮ ಪುತ್ರನಿಗಾದ್ರೂ ಟಿಕೆಟ್ ಸಿಗತ್ತಾ ಅಂತಾ ಕೇಳಿದ್ರೆ ನಮ್ಮಲ್ಲಿ‌ ಕುಟುಂಬ ರಾಜಕಾರಣಕ್ಕೆ ಜಾಗವೇ ಇಲ್ಲ ಅನ್ನತ್ತೆ ಬಿಜೆಪಿ. ಹೀಗಾಗಿ, ತಮ್ಮ ಇಡೀ ಭವಿಷ್ಯದ ಸಲುವಾಗಿ ಬಿಜೆಪಿ ತೊರೆಯಲು ನಿರ್ಧರಿಸಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇದು ಪ್ಲ್ಯಾನ್..?
ಹಾಗೆ ನೋಡಿದ್ರೆ, ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಕಾಂಗ್ರೆಸ್ ಪ್ರಬಲವಾಗಿದೆ. ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆದ್ದು ಬೀಗಿದೆ. ಆದ್ರೆ, ಗೆದ್ದವರ ಪೈಕಿ ದೇಶಪಾಂಡೆಯವರನ್ನ ಹೊರತು ಪಡಿಸಿದ್ರೆ, ಯಾರೂ ಆ ಮಟ್ಟಿಗಿನ ಪ್ರಭಾವಿಗಳಿಲ್ಲ.
ಬಹುತೇಕರು ರಾಜ್ಯಮಟ್ಟದಲ್ಲಿ ಮಿಂಚುವುದಿರಲಿ, ಜಿಲ್ಲಾಮಟ್ಟದಲ್ಲೂ ತಮ್ಮ ಸಾಮರ್ಥ್ಯ ತೋರಿಸುವ ಛಾರ್ಮು ಹೊಂದಿಲ್ಲ. ಹೀಗಾಗಿ, ಸದ್ಯ ಕಾಂಗ್ರೆಸ್ ಪಡಸಾಲೆಯಲ್ಲಿ ಕಾಲಿಟ್ಟು, ಲೋಕಸಭೆಯ ಅಭ್ಯರ್ಥಿಯಾಗಿ ಗೆದ್ದುಬಂದ್ರೆ ಇಡೀ ಜಿಲ್ಲೆಯ ಕೀಲಿ ಕೈ ತಮ್ಮ ಕೈಯಲ್ಲಿ ಸಿಗತ್ತೆ ಅನ್ನೋ ಪ್ಲ್ಯಾನ್ ಇದೆ ಎನ್ನಲಾಗ್ತಿದೆ. ಅಸಲು, ಹಿರಿಯ ಮುಖಂಡ ಆರ್. ವಿ. ದೇಶಪಾಂಡೆಯವರನ್ನು ರಾಜ್ಯ ರಾಜಕಾರಣದಿಂದ ದೂರ ಇಡಲಾಗಿದೆ. ಸಚಿವ ಸ್ಥಾನ ಕೂಡ ಕೊಟ್ಟಿಲ್ಲ. ಯಾವುದೇ ಸ್ಥಾನಮಾನವೂ ಇಲ್ಲ. ಬಹುತೇಕ ದೇಶಪಾಂಡೆ ಸಾಹೇಬ್ರು ಹಳಿಯಾಳ ಕ್ಷೇತ್ರಕ್ಕಷ್ಟೇ ಸೀಮಿತ ಆದಂತಿದೆ. ಅದೂ ಕೂಡ ಮುಂದಿನ ಚುನಾವಣೆ ವರೆಗೆ ಮಾತ್ರ ಅವ್ರ ಹವಾ. ಆ ನಂತರದಲ್ಲಿ ವಯಸ್ಸಿನ ಕಾರಣಕ್ಕೆ ಅವ್ರೂ ಕೂಡ ರಾಜಕೀಯದಿಂದ ಅಷ್ಟಕ್ಕಷ್ಟೇ ಎನ್ನುವಂತಾಗತ್ತೆ. ಹೀಗಾಗಿ, ಇಡೀ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಹೆಬ್ಬಾರ್ “ಹವಾ” ಮೆಂಟೇನ್ ಮಾಡೋ ಸಾಧ್ಯತೆ ಹೆಚ್ಚಿದೆ.

ಪಾಟೀಲರ ಕತೆಯೇನು..?
ಇನ್ನು, ಬಿಜೆಪಿಯಿಂದ ಬಂದು ಕಾಂಗ್ರೆಸ್ ಕೈ ಹಿಡಿದಿರೋ ಮಾಜಿ ಶಾಸಕ ವಿ.ಎಸ್. ಪಾಟೀಲರ ಕತೆಯೇನು..? ಅನ್ನುವ ಪ್ರಶ್ನೆ ಎಲ್ಲರಿಗೂ ಕಾಡ್ತಿದೆ ಅಲ್ವಾ..? ಬಹುಶಃ ಸದ್ಯದ ಸ್ಥಿತಿ ನೋಡಿದ್ರೆ, ಹೆಬ್ಬಾರ್ ಸಾಹೇಬ್ರು ಲೋಕಸಭೆಗೆ ಹೋದ್ರೆ, ಬಹುಶಃ ಯಲ್ಲಾಪುರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್.ಪಾಟೀಲರನ್ನೇ ಪ್ರತಿಷ್ಟಾಪಿಸೋ ಪ್ಲ್ಯಾನ್ ಕಾಂಗ್ರೆಸ್ ಅಂಗಳದಲ್ಲಿ ಚರ್ಚೆ ಆಗ್ತಿದೆಯಂತೆ. ಹೀಗಾಗಿ, ಇಲ್ಲಿ ಲೋಕಸಭೆಯ ಜೊತೆ ವಿಧಾನಸಭೆಯಲ್ಲೂ ಮತ್ತೊಂದು ಸ್ಥಾನ ಪಡಿಯೋ ಯೋಚನೆ ಕೈ ಪಡಸಾಲೆಯಲ್ಲಿ ಚರ್ಚೆಯಾಗ್ತಿದೆಯಂತೆ. ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪಾಟೀಲರೂ ಕೂಡ ಕಾಂಗ್ರೆಸ್ ಗೆ ಅನಿವಾರ್ಯವೇ ಆಗಿರ್ತಾರೆ ಅನ್ನೋ ಅರಿವು ಕೈ ಪಡೆಗೆ ಅರ್ಥವಾಗಿದೆಯಂತೆ. ಈ ಕಾರಣಕ್ಕಾಗಿಯೇ ಇನ್ಮುಂದೆ ಹೆಬ್ಬಾರ್ ಹಾಗೂ ಪಾಟೀಲರು ಬಾಯಿ ಬಾಯಿ ಆಗಿ ಪಕ್ಷದ ಜವಾಬ್ದಾರಿ ಹೊರುವ ಸಾಧ್ಯತೆಯೂ ಇದೆ.

ಇದೇಲ್ಲ ಚರ್ಚೆ ಮಾತ್ರ..!
ಅಷ್ಟಕ್ಕೂ, ನಾವಿಲ್ಲಿ ದಾಖಲಿಸಿದ್ದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗ್ತಿರೋ ಸಂಗತಿಗಳನ್ನು ಮಾತ್ರ. ಇಲ್ಲಿ ಏನ್ ಬೇಕಾದ್ರೂ ನಡೀಬಹುದು. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಜಂಪಿಂಗ್ ಜಪಾಂಗು ಆಗಲೂ ಬಹುದು. ಯಾಕಂದ್ರೆ ಇದು ರಾಜಕೀಯ..! ಕಾಯಬೇಕಷ್ಟೆ.

error: Content is protected !!