ಮುಂಡಗೋಡ: ಬಸ್ಸಿನಲ್ಲಿ 50 ಸಾವಿರ ಮೌಲ್ಯದ ಬಳೆ ಇದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಗೆ ಪೊಲೀಸರ ಮೂಲಕ ವಾಪಸ್ ನೀಡಲಾಗಿದೆ. ಮುಂಡಗೋಡಿನ ಆಟೋ ಚಾಲಕನ ಸಮಯ ಪ್ರಜ್ಞೆ ಹಾಗೂ ಪ್ರಮಾಣಿಕತೆಯಿಂದ ಒಂದೊಳ್ಳೆ ಕೆಲಸವಾಗಿದೆ.
ಅಂದಹಾಗೆ, ನಿನ್ನೆ ಶನಿವಾರ ಬನವಾಸಿಯ
ಶಾರದಾ ಪಕ್ಕೀರಪ್ಪ ಬಜಂತ್ರಿ, ಎಂಬುವವರು ಬಸ್ಸಿನಲ್ಲಿ ತಮ್ಮ ಚೀಲವನ್ನು ಕಳೆದುಕೊಂಡಿದ್ದರು. ಹಾಗೆ ಕಳೆದುಕೊಂಡಿದ್ದ ಚೀಲದಲ್ಲಿ ಬರೋಬ್ಬರಿ 50 ಸಾವಿರ ರೂ. ಮೌಲ್ಯದ ಬಳೆ ಇತ್ತು. ಮುಂಡಗೋಡಿನ ಪಟ್ಟಣ ಪಂಚಾಯತಿ ಎದುರು ಅದ್ಯಾರೋ ಏನೋ ಆ ಚೀಲವನ್ನು ಇಳಿಸಿ ಬಿಟ್ಟಿದ್ದರು. ಹೀಗಾಗಿ, ಆ ಮಹಿಳೆಗೆ ಮಳಗಿಗೆ ಹೋದ ನಂತರ ತನ್ನ ಚೀಲ ಕಳೆದುಕೊಂಡಿದ್ದರ ಬಗ್ಗೆ ಗಮನಕ್ಕೆ ಬಂದಿದೆ.
ಆಟೋ ಚಾಲಕನ ನಿಯತ್ತು..!
ಅಸಲು, ಹಾಗೆ ಅನಾಥವಾಗಿ ಬಿದ್ದಿದ್ದ ಚೀಲ ಮುಂಡಗೋಡಿನ ಆಟೋ ಚಾಲಕ ಬಸವರಾಜ್ ನಿಡಗುಂದಿ ಎಂಬುವರ ಕಣ್ಣಿಗೆ ಬಿದ್ದಿದೆ. ಇದೇನು ಇರಬಹುದು ಅಂತಾ ಚೀಲ ತೆರೆದು ನೋಡಿದಾಗ ಅದ್ರಲ್ಲಿ ಬಳೆಗಳು ಇರೋದು ತಿಳಿದಿದೆ. ತಕ್ಷಣವೇ ಆ ಚೀಲದಲ್ಲಿ ತಡಕಾಡಿದ ಆಟೋ ಚಾಲಕನಿಗೆ ಸಂಬಂಧಪಟ್ಟ ಮಾಲೀಕರ ಮೊಬೈಲ್ ನಂಬರ್ ಸಿಕ್ಕಿದೆ. ತಕ್ಷಣವೇ ಮೊಬೈಲ್ ನಂಬರ್ ಗೆ ಕಾಲ್ ಮಾಡಿ ತಮ್ಮ ಚೀಲ ನಮ್ಮ ಬಳಿ ಇದೆ ತೆಗೆದುಕೊಂಡು ಹೋಗಿ ಅಂತಾ ತಿಳಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ಅಲ್ಲದೇ ತಮಗೆ ಸಿಕ್ಕ ಬಳೆಯ ಚೀಲದ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಪೊಲೀಸರ ಸಾಥ್..!
ನಂತರ, ಬಳೆಯ ಚೀಲ ಕಳೆದುಕೊಂಡಿದ್ದ ಮಹಿಳೆ ಮುಂಡಗೋಡಿಗೆ ವಾಪಸ್ ಬಂದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ತಮಗೆ ಕಾಲ್ ಬಂದಿದ್ದ ಮೊಬೈಲ್ ನಂಬರ್ ನೀಡಿದ್ದಾರೆ. ಆಟೋ ಚಾಲಕನಿಗೆ ಮಾಹಿತಿ ನೀಡಿದಾಗ ಆಟೋ ಚಾಲಕ ಬಸವರಾಜ್ ನಿಡಗುಂದಿ ಪೊಲೀಸ್ ಠಾಣೆಗೆ ಬಂದು ಬಳೆಯ ಚೀಲವನ್ನು ಮಹಿಳೆಗೆ ಪೊಲೀಸರ ಸಮಕ್ಷಮವೇ ಒಪ್ಪಿಸಿದ್ದಾರೆ. ಈ ವೇಳೆ ಸಿಪಿಐ ಬರಮಪ್ಪ ಲೋಕಾಪುರ್, ಕ್ರೈಂ ಪಿಎಸ್ಐ ಹನ್ಮಂತಪ್ಪ ಕುಡುಗುಂಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.