ಹುನಗುಂದ ಗ್ರಾಪಂ ಅಧ್ಯಕ್ಷರ ಚುನಾವಣೆ: “ಕೈ” ಕಲಹದಲ್ಲಿ ಅರಳತ್ತಾ ಕಮಲ..? ಅಷ್ಟಕ್ಕೂ “ಅಂದರ್-ಬಾಹರ್” ಆಟದಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ..?

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿಗೆ ನಾಳೆ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಹುತೇಕ ಹುನಗುಂದ ಗ್ರಾಮ ಪಂಚಾಯತಿಯ ಅಧ್ಯಕ್ಷ ಗಾದಿಯಲ್ಲಿ ಅಚ್ಚರಿಯ ಅಭ್ಯರ್ಥಿ ಖುರ್ಚಿ ಏರುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ.

“ಅ” ವರ್ಗಕ್ಕೆ ಮೀಸಲು..!
ಅಂದಹಾಗೆ, ಕಾಂಗ್ರೆಸ್ ಬೆಂಬಲಿತ 8 ಸದಸ್ಯರನ್ನು ಹೊಂದಿರೋ ಹುನಗುಂದ ಗ್ರಾಮ ಪಂಚಾಯತಿಯಲ್ಲಿ, ಬಿಜೆಪಿ ಬೆಂಬಲಿತ 6 ಜನ ಸದಸ್ಯರಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಯಲ್ಲಮ್ಮ ಇಟ್ಲಾಪುರ ಅಧ್ಯಕ್ಷರಾಗಿದ್ದರು. ಆದ್ರೆ, ಇವಾಗ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಒಳ ಏಟುಗಳ ಹೊಡೆತ ಬೀಳುವ ಎಲ್ಲಾ ಸಾಧ್ಯತೆ ಇದ್ದು ಈ ಬಾರಿ ಅಚ್ಚರಿಯ ಫಲಿತಾಂಶದ ನಿರೀಕ್ಷೆ ಇದೆ. “ಅ” ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ಘೋಷಣೆಯಾಗಿದ್ದು, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಪದವಿ ಮೀಸಲಾಗಿದೆ. ಹೀಗಾಗಿ, ಕಾಂಗ್ರೆಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ತೀವ್ರ ಜಿದ್ದಾಜಿದ್ದು ಏರ್ಪಟ್ಟಿದ್ದು ಇವರೀರ್ವರ ಗುದ್ದಾಟದಲ್ಲಿ ಮೂರನೇ ಅಭ್ಯರ್ಥಿ ಗೆ ಪಟ್ಟ ಒಲಿಯೊ ಸಾಧ್ಯತೆ ಇದೆ. ಆದ್ರೆ, ಆ ಅಭ್ಯರ್ಥಿ ಮಾತ್ರ ಕಾಂಗ್ರೆಸ್ ಬೆಂಬಲಿಗ ಸದಸ್ಯರಲ್ಲ. ಬದಲಾಗಿ, ಬಿಜೆಪಿ ಬೆಂಬಲಿತ ಸದಸ್ಯನಿಗೆ ಅದೃಷ್ಟ ಖುಲಾಯಿಸೋ ಎಲ್ಲಾ ಲಕ್ಷಣ ಗೋಚರಿಸ್ತಿದೆ.

ಒಳ ಏಟು ಫಿಕ್ಸಾ..?
ಅಸಲು, ಹುನಗುಂದ ಗ್ರಾಮ ಪಂಚಾಯತಿ, ಅಗಡಿ, ಅತ್ತಿವೇರಿ ಗ್ರಾಮಗಳನ್ನು ಒಳಗೊಂಡಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಬೆಂಬಲಿತರಲ್ಲಿ ಅತ್ತಿವೇರಿಯ ಓರ್ವ ಸದಸ್ಯೆ ಹಾಗೂ ಹುನಗುಂದದ ಓರ್ವ ಸದಸ್ಯೆಯ ನಡುವೆ ಅಧ್ಯಕ್ಷ ಗಾದಿಗಾಗಿ ಗುದುಮುರುಗಿ ಬಿದ್ದಿದೆ. ಇಲ್ಲಿ, ಕಾಂಗ್ರೆಸ್ ಬಳಗದಲ್ಲಿ ಒಳಗುದಿಯ ಕಾರಣಕ್ಕೆ ಇಡೀ ಫಲಿತಾಂಶದ ದಿಕ್ಕನ್ನೇ ಬದಲಿಸುವ ಎಲ್ಲಾ ಸಾಧ್ಯತೆ ಇದೆ. ಅಗಡಿ ಗ್ರಾಮದ ಬಿಜೆಪಿ ಬೆಂಬಲಿತ ಓರ್ವ ಸದಸ್ಯನಿಗೆ ಪಟ್ಟ ಕಟ್ಟಲು ಒಂದು ಹಂತದ “ಅಂದರ್” ಕೀ ಮಸಲತ್ತುಗಳು ಜಾರಿಯಲ್ಲಿವೆ. ಬಹುತೇಕ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬಹುಪರಾಕ್ ಅನ್ನುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಹೀಗಾಗಿ, ಬಹುತೇಕ ಬಿಜೆಪಿ ಬೆಂಬಲಿತ ಅದೊಬ್ಬ ಸದಸ್ಯ ಅಧ್ಯಕ್ಷರಾಗೋದು ಬಹುತೇಕ ಫಿಕ್ಸ್ ಎನ್ನುವಂತಾಗಿದೆ.

“ಕೈ” ಕೆಸರು..!
ಅಷ್ಟಕ್ಕೂ, ನಿಚ್ಚಳ ಬಹುಮತವಿದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಳಗೊಳಗೆ ಕುದಿಯುತ್ತಿದ್ದಾರೆ. ಮೀಸಲಾತಿ ಪ್ರಕಟವಾದ ಗಳಿಗೆಯಿಂದ ಬಹುತೇಕರು ನಿರುತ್ಸಾಹ ತೋರುತ್ತಿದ್ದಾರೆ. ಹೀಗಾಗಿ, ಇದನ್ನೇ ಎನ್ ಕ್ಯಾಶ್ ಮಾಡಿಕೊಂಡಿರೋ ಬಿಜೆಪಿ ಬಳಗ ಬಹುತೇಕ ತನ್ನ ದಾರಿ ಸುಗಮ‌ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರೋ ಸಾಧ್ಯತೆ ಕಂಡು ಬರ್ತಿದೆ. ಏನೇ ಆಗಲಿ ಬುಧವಾರ ಮದ್ಯಾಹ್ನದಷ್ಟೊತ್ತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿರತ್ತೆ. ಸದ್ಯ ಇರೋ ಕಾಂಗ್ರೆಸ್ ಬೆಂಬಲಿತ ಮಹಿಳೆಯರಲ್ಲೇ ಯಾರಾದ್ರೂ ಅಧ್ಯಕ್ಷರಾಗ್ತಾರಾ..? ಅಥವಾ ಅಗಡಿ ಗ್ರಾಮದ ಅದೊಬ್ಬ ಬಿಜೆಪಿ ಬೆಂಬಲಿತ ಸದಸ್ಯ ಪಟ್ಟಕ್ಕೆ ಏರ್ತಾರಾ..? ಕುತೂಹಲಕ್ಕೆ ನಾಳೆಯೇ ತೆರೆ ಬೀಳಲಿದೆ.

error: Content is protected !!