ಶಿಗ್ಗಾವಿ ತಾಲೂಕಿನ ತಡಸ ಸಮೀಪದ ರಾ.ಹೆದ್ದಾರಿ 4 ರ ನೀರಲಗಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ, ಅಪಘಾತದಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4 ನ್ನು ತಡೆದು ಪ್ರತಿಭಟನೆ ನಡೆಸ್ತಿದಾರೆ.
ಎನ್ ಎಮ್ ತಡಸ್ ನೀರಲಗಿ ಗ್ರಾಮದ ಚಿದಾನಂದ ನಿಂಗಪ್ಪ ಶೆರೆವಾಡ (55) ವಿರೂಪಾಕ್ಷಪ್ಪ ಕಾಳೆ(60) ಸ್ಥಳದಲ್ಲೇ ಸಾವು ಕಂಡ ದುರ್ದೈವಿಗಳಾಗಿದ್ದಾರೆ. ತಮ್ಮ ಗ್ರಾಮದಿಂದ ಬೆಳಿಗ್ಗೆ ಶಿಗ್ಗಾವಿಗೆ ತೆರಳಲು ಬಸ್ ಗಾಗಿ ಕಾಯುತ್ತ ನಿಂತಿದ್ದ ವೇಳೆ, ಹುಬ್ಬಳ್ಳಿ ಕಡೆಯಿಂದ ಬಂದ KA 22 MB 8197 ನೋಂದಣಿ ಸಂಖ್ಯೆಯ ಕಾರ್ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ. ಇಬ್ಬರೂ ಅಮಾಯಕರು ದುರಂತ ಸಾವು ಕಂಡಿದ್ದಾರೆ.
ರಸ್ತೆ ತಡೆದು ಪ್ರತಿಭಟನೆ..!
ಇನ್ನು ಈ ಘಟನೆ ಖಂಡಿಸಿ ಎನ್ ಎಂ ತಡಸ ನೀರಲಗಿ ಕ್ರಾಸ್ ಬಳಿ ಯುವ ಕರವೇ ಜಿಲ್ಲಾಧ್ಯಕ್ಷ ಸಂತೋಷ್ ಚಾಕಲಬ್ಬಿ ಸೇರಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪ್ಲೈ ಓವರ್ ನಿರ್ಮಿಸಿ..!
ಇನ್ನು ನೀರಲಗಿ ಗ್ರಾಮದ ಸಂಚಾರಕ್ಕಾಗಿ ಇಲ್ಲಿ ಒಂದು ಫ್ಲೈ ಓವರ್ ರಸ್ತೆ ನಿರ್ಮಾಣ ಆಗಬೇಕು ಅಂತ ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ಲೈ ಓವರ್ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.