ಎಚ್ಚರ..! ಎಚ್ಚರ..! ಮುಂಡಗೋಡ ಸಮೀಪದ ಸ್ಮಶಾನದ ಆಸುಪಾಸು ಚಿರತೆ ಬಂದಿದ್ದು ನಿಜ..! ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು, ಪರಿಶೀಲನೆ..!



ಮುಂಡಗೋಡ ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮುಸ್ಲಿಂ ಸಮಾಜ ಬಾಂಧವರ ಸ್ಮಶಾನದ ಆಸು ಪಾಸಿನಲ್ಲೇ ಕಳೆದ ಹಲವು ದಿನಗಳಿಂದ ಚಿರತೆಯ ಹೆಜ್ಜೆಗಳು ದಾಖಲಾಗಿವೆ. ಅದ್ರಲ್ಲೂ ನಿನ್ನೆ ಶನಿವಾರ ಸಂಜೆ ಸ್ಮಶಾನದ ಕಂಪೌಂಡಿನ ಮೇಲೆ ಚಿರತೆಯು ಸಂಚರಿಸಿದ್ದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಸದ್ಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. RFO ಸುರೇಶ್ ಕುಲ್ಲೊಳ್ಳಿ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಶನಿವಾರ ಸಂಜೆ..!
ಅಂದಹಾಗೆ, ಶನಿವಾರ ಸಂಜೆ ಚಿರತೆ ಕಂಪೌಂಡಿನ ಮೇಲೆ ಸಂಚರಿಸ್ತಿರೋದನ್ನು ಅಲ್ಲಿನ ರೈತರು ಹಾಗೂ ದಾರಿಹೋಕರು ಕಣ್ಣಾರೆ ಕಂಡಿದ್ದಾರೆ. ತಕ್ಷಣವೇ ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಚಿರತೆಯ ದೃಷ್ಯ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಆದ್ರೆ, ಇದು ಎಲ್ಲಿಯದು..? ಅಷ್ಟಕ್ಕೂ ಇದು ಮುಂಡಗೋಡಿನದ್ದೇ ವಿಡಿಯೋನಾ ಅನ್ನೋ ಸಾಕಷ್ಟು ಅನುಮಾನಗಳಿದ್ದವು. ಹೀಗಾಗಿ, ಪಬ್ಲಿಕ್ ಫಸ್ಟ್ ಸ್ಥಳಕ್ಕೆ ಭೇಟಿ ನೀಡಿದಾಗ ಚಿರತೆ ಬಂದಿರೋದಕ್ಕೆ ಪೂರಕವಾದ ಸಾಕ್ಷಿಗಳು ಸಿಕ್ಕಂತಾಗಿದೆ. ಅಲ್ಲದೇ ಆ ವಿಡಿಯೋದಲ್ಲಿದ್ದ ಪ್ರದೇಶ ಮುಂಡಗೋಡಿನದ್ದೇ ಅನ್ನೋದು ಖಾತ್ರಿಯಾಗಿದೆ.

ಆತಂಕದಲ್ಲಿ ರೈತರು..!
ಅಸಲು, ಚಿರತೆ ಬಂದಿದೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ರೈತರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ನಿತ್ಯವೂ ತಮ್ಮ ಕೃಷಿ ಕಾರ್ಯದ ನಿಮಿತ್ತ ಗದ್ದೆಗೆ ತೆರಳುವ ರೈತರಿಗೆ ಭಾರಿ ಆತಂಕ ಶುರುವಾಗಿದ್ದು ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಗದ್ದೆಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು ನಿತ್ಯವೂ ಇಲ್ಲಿ ಚಿರತೆ ಸಂಚರಿಸ್ತಿದೆ ಅನ್ನೋದಕ್ಕೆ ಪುಷ್ಟಿ ನೀಡಿದೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿರೋ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗೋ ಸಾಧ್ಯತೆ ಇದೆ.


RFO ಹೇಳಿದ್ದಿಷ್ಟು..!
ಇನ್ನು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮುಂಡಗೋಡ RFO ಸುರೇಶ್ ಕುಲ್ಲೊಳ್ಳಿ, ಚಿರತೆ ಬಂದಿರೋದು ನಿಜ. ನಿನ್ನೆ ಸಂಜೆ ಚಿರತೆ ಕಂಡು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಅದರ ಆಧಾರದಲ್ಲಿ ಸ್ಥಳಪರಿಶೀಲನೆ ಮಾಡಿದಾಗ, ಈ ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತು ಸೇರಿದಂತೆ, ಚಿರತೆ ಸಂಚರಿಸಿರುವ ಕುರುಹುಗಳು ಕಂಡುಬಂದಿವೆ. ಈ ಕಾರಣಕ್ಕಾಗಿ, ಅರಣ್ಯ ಇಲಾಖೆಯಿಂದ ತಂಡಗಳನ್ನು ರಚಿಸುತ್ತೇವೆ. ಚಿರತೆ ಎಲ್ಲಿದೆ, ಎಲ್ಲಿಂದ ಬಂದಿದೆ, ಮುಂದೆ ಎಲ್ಲಿಗೆ ಹೋಗಿದೆ ಇದೇಲ್ಲದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡುತ್ತೇವೆ ಅಂತಾ ತಿಳಿಸಿದ್ರು.
ಅಲ್ದೆ, ಸಾರ್ವಜನಿಕರು, ರೈತರು, ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕು. ಇಲಾಖೆ ತಕ್ಷಣವೇ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮಾಡುವುದಾಗಿ ಹೇಳಿದ್ದಾರೆ. ತಕ್ಷಣವೇ ಚಿರತೆ ಸೆರೆಗೆ ಬೋನು ಇಟ್ಟು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

error: Content is protected !!