ಮುಂಡಗೋಡ ಠಾಣೆಯಲ್ಲಿ “ಮಂತ್ಲಿ” ಬಾಬತ್ತಿಗಾಗಿ ಬರಗೆಟ್ಟವನ ಕಳ್ಳಾಟಗಳು ಒಂದಾ..? ಎರಡಾ..? ಪಿಐ ಬರಮಪ್ಪ ಸಾಹೇಬ್ರೆ ಕೊಂಚ ಗಮನಿಸಿ..!

ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಐ ಆಗಿ ಬರಮಪ್ಪ ಲೋಕಾಪುರ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ತಮ್ಮ ಹೊಸ ಠಾಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದ್ರೊಂದಿಗೆ ಮುಂಡಗೋಡಿಗರು ಮತ್ತೊಮ್ಮೆ ಮೂಟೆ ಮೂಟೆಗಳಷ್ಟು ಭರವಸೆ ಹೊತ್ತು, ಬೆರಗುಗಣ್ಣಿನಿಂದ ಹೊಸ ಅಧಿಕಾರಿಯತ್ತ ನೋಡುತ್ತಿದ್ದಾರೆ. ಯಾಕಂದ್ರೆ, ಇತ್ತಿತ್ತಲಾಗಿ ನಮ್ಮ‌ ಮುಂಡಗೋಡ ಪೊಲೀಸ್ ಠಾಣೆ ಅನ್ನೋದು ಅದ್ಯಾರ್ಯಾರದ್ದೋ “ರಾಜೀ” ಲೆಕ್ಕಗಳ ಅಡ್ಡೆಯಾದಂತಾಗಿತ್ತು. ಹಾಗಂತ, ನಾವು ಹೇಳ್ತಿಲ್ಲ, ಅದನ್ನೇಲ್ಲ ಕಣ್ಣಾರೆ ಕಂಡಿದ್ದ ಸಾರ್ವಜನಿಕರ ಬಹುದೊಡ್ಡ ಆರೋಪವಾಗಿತ್ತು. ಹಾಗಿದ್ರೆ ಅದೀಗ, ಬದಲಾಗತ್ತಾ..? ಬದಲಾಗಬೇಕಾದ್ರೆ ಸದ್ಯ ಮುಂಡಗೋಡ ಠಾಣೆಯಲ್ಲಿ ಏನೇನು ಬದಲಾವಣೆ ಆಗಬೇಕು..? ಇದೇಲ್ಲ ನೂತನ ಪಿಐ ಸಾಹೇಬ್ರು ಗಮನಿಸಲೇಬೇಕಿದೆ.

ಇದು FIR..!
ಬರಮಪ್ಪ ಲೋಕಾಪುರ, ಈಗಷ್ಟೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಿಕೊಂಡು ಬಂದಿರೋ ಪಿಐ. ಸದ್ಯ ಮುಂಡಗೋಡಿಗೆ ವರ್ಗವಾಗಿ ಬಂದಿದ್ದಾರೆ. ಹೀಗಾಗಿ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡ ಸಾಹೇಬ್ರಿಗೆ ಇಲ್ಲಿನ ಕೆಲವೊಂದಿಷ್ಟು ಒಳ ಹೊರಗಿನ ಮಾಹಿತಿಗಳನ್ನು ನೀಡಲೇ ಬೇಕಿದೆ. ತಾಲೂಕಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೂತನ ಪಿಐ ಸಾಹೇಬ್ರು ಒಂದಿಷ್ಟು ಮಹತ್ತರ ಹೆಜ್ಜೆಗಳನ್ನು ಇಡಲೇಬೇಕಿದೆ. ಹಾಗಾಗಿ, ಇದು ಪಬ್ಲಿಕ್ ಫಸ್ಟ್ ನ್ಯೂಸ್ ನೀಡ್ತಿರೋ First information report..!

ನೂತನ ಸಿಪಿಐ ಬಿ.ಎಸ್.ಲೋಕಾಪುರ್

ಅವನ ಬಗ್ಗೆ ಇರಲಿ ಗಮನ..!
ಅಸಲು, ಸದ್ಯ ಮುಂಡಗೋಡ ಠಾಣೆಯಲ್ಲಿ ಅವನೊಬ್ಬ ವಿಶೇಷ ಪಿಸಿ, ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿದ್ದಾನೆ. ಈತ ಬಾಯಿ ತೆಗೆದ್ರೆ ಸಾಕು, ಥೇಟು ಭಗವದ್ಗೀತೆಯ ಸಾರವೇ ಹರಿದು ಬರತ್ತೆ. ಆದ್ರೆ, ಈತನ ಕಸುಬು ಮಾತ್ರ ಇಡೀ ಪೊಲೀಸ್ ವ್ಯವಸ್ಥೆಗೇ ನಾಚಿಗ್ಗೇಡು. ಹಾಗೆ ನೋಡಿದ್ರೆ, ಈಯಪ್ಪ ಈಗ ಅಕ್ಷರಶಃ ಚಕ್ಕಂಬಕ್ಕಳ ಹಾಕ್ಕೊಂಡು ಅಮೇದ್ಯ ಮೇಯಲು ಕುಳಿತು ಬಿಟ್ಟಿದ್ದಾನೆ ಅನ್ನೋ ಆರೋಪಗಳಿವೆ. ತಿಂಗಳಿಗೆ ಕನಿಷ್ಟವೆಂದರೂ ಲಕ್ಷದ ಲೆಕ್ಕದಲ್ಲಿ ಈತನ ಜೇಬಿಗೆ ಸೇರ್ತಿದೆಯಂತೆ ಹಡಬಿಟ್ಟಿ ದುಡ್ಡು. ಮಾನ್ಯ ಎಸ್ಪಿಯವರಿಗೆ ನಿಯತ್ತಾಗಿ ಇರಬೇಕಿದ್ದ ಈ ಅಸಾಮಿ ಇವಾಗ ಮಾಡ್ತಿರೋದೇಲ್ಲ ಬರೀ “ಪೀಕಾ”ಟಗಳೇ. ದಿನಬೆಳಗಾದ್ರೆ ಸಾಕು ಬರೀ ಡೀಲುಗಳಲ್ಲೇ ಕಾಲ ಕಳಿಯೋ ಈತ, ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಮಾವನ ಕಡೆ ಅನ್ನೋ ಜಾಯಮಾನದವನು. ಹೀಗಾಗಿ, ಇಡೀ ಠಾಣೆಯಲ್ಲಿ ಈತನ ಎತ್ತುವಳಿ ದಂಧೆಯಿಂದ ಖುದ್ದು ಪೊಲೀಸರಿಗೇ ದಿಗಿಲು ಹುಟ್ಟಿದೆ. ಹೀಗಾಗಿ, ಮುಂಡಗೋಡ ಠಾಣೆಯ ಬಗ್ಗೆ ಸಾರ್ವಜನಿಕರಿಗೆ ಕಿಂಚಿತ್ತಾದ್ರೂ ಗೌರವ ಉಳಿಬೇಕಾದ್ರೆ ಆತನನ್ನ ತಕ್ಷಣವೇ ಎಲ್ಲಿಡಬೇಕೋ ಅಲ್ಲಿಟ್ರೆ ಬಹುಶಃ ಒಳ್ಳೆಯದು. ಇಲ್ಲವಾದಲ್ಲಿ ಕೆಲವೇ ದಿನಗಳಲ್ಲಿ ಅಕ್ರಮ ದಂಧೆಗಳ “ಆಟ” ತಾಲೂಕಿನ ಗಲ್ಲಿಗಲ್ಲಿಗಳಲ್ಲಿ ಹೆಜ್ಜೆಗೊಂದರಂತೆ ಹುಟ್ಟಿಕೊಳ್ಳೊದು ಗ್ಯಾರಂಟಿ. ಈ ಬಗ್ಗೆ ಸ್ವಲ್ಪ ಯೋಚಿಸಿ ಪಿಐ ಸಾಹೇಬ್ರೆ. ಇಲ್ಲವಾದಲ್ಲಿ ಈತನ ಕಳ್ಳಾಟಗಳ ಪಿನ್ ಟೂ ಪಿನ್ ಮಾಹಿತಿಗಳು ಜಗಜ್ಜಾಹೀರಾಗೋ ದಿನ ದೂರವಿಲ್ಲ.

ಪೊಲೀಸಿಂಗ್ ವ್ಯವಸ್ಥೆ..!
ನಿಜ ಅಂದ್ರೆ ಸದ್ಯದ ಮಟ್ಟಿಗೆ ಮುಂಡಗೋಡ ಠಾಣೆಯಲ್ಲಿ ಪೊಲೀಸಿಂಗ್ ಅನ್ನೋದನ್ನ ಕೇಳೋದೇ ಬೇಡ. ಹದಗೆಟ್ಟು ಹಳ್ಳ ಹಿಡಿದು ಆಗಿದೆಯಂತೆ. ಅಸಲು, ಮುಂಡಗೋಡ ಠಾಣೆಯಲ್ಲಿ ಉತ್ಸಾಹಿ ಯುವಕರಿದ್ದಾರೆ. ಬೆಟ್ಟವನ್ನು ಪುಡಿ ಮಾಡಿ ತರಬಲ್ಲ ಬಿಸಿ ರಕ್ತದ ಹುಡುಗರಿದ್ದಾರೆ. ಆದ್ರೆ, ಇಂತವರಿಗೇಲ್ಲ ಪಾಪ ತಾವು ಪೊಲೀಸ್ ಠಾಣೆಯಲ್ಲಿ ಡ್ಯೂಟಿ ಮಾಡ್ತಿದ್ದಿವಾ ಅನ್ನೋ ಅನುಮಾನ ಶುರುವಾಗಿದೆಯಂತೆ. ಯಾಕಂದ್ರೆ, ಅಂತಹದ್ದೊಂದು ಖಡಕ್ ಕ್ರಮಗಳು, ಆದೇಶಗಳು ಇವ್ರಿಗೆ ಬರುತ್ತಲೇ ಇಲ್ಲ. ಅದೇನೇ ಆದ್ರೂ “ರಾಜೀ” ಹಕೀಕತ್ತುಗಳ ನಡುವೆ ಕರಗಿ ಹೋಗ್ತಿವೆ ಅನ್ನೋದು ಇಲ್ಲಿನ ಬಹುತೇಕರ ಅಳಲು. ದಯವಿಟ್ಟು ಇದನ್ನಷ್ಟು ಗಮನಿಸಿ ಸಾಹೇಬ್ರೆ.

ಏಜೆಂಟರುಗಳ ಹಾವಳಿ..!
ಇನ್ನು, ಮುಂಡಗೋಡ ಪೊಲೀಸ್ ಠಾಣೆಯ ಅಂಗಳಕ್ಕೆ ಬಂದ್ರೆ ಬರೀ ಏಜೆಂಟರುಗಳದ್ದೇ ಆಟಾಟೋಪಗಳು ತಾಂಡವವಾಡ್ತಿದೆ. ಹಾಗಂತ ಖುದ್ದು ಅಲ್ಲಿನ ಪೊಲೀಸರಿಗೆ ಇದು ವಾಕರಿಕೆ ತರಿಸಿ ಬಿಟ್ಟಿದೆ. ಸಣ್ಣದೊಂದು ಕೇಸು ಇದ್ರೂ ನೋಣಗಳಂತೆ ಮುಗಿ ಬೀಳುವ ಏಜೆಂಟರುಗಳು, ಸಾಹೇಬ್ರ ಹತ್ರ ನಾನು ಮಾತಾಡಿ ಎಲ್ಲಾ ಸರಿ ಮಾಡಿಸ್ತಿನಿ ಅಂತಾ ಠಾಣೆಯ ಅಂಗಳದಲ್ಲೇ ಡೀಲಿಗೆ ಕುಳಿತು ಬಿಡ್ತಾರಂತೆ. ಅಸಲು, ಇದೇಲ್ಲ ಪಾಪ ಯಾವೊಬ್ಬ ಸಾಹೇಬನಿಗೂ ಗೊತ್ತೇ ಇರಲ್ಲ. ಆದ್ರೆ, ಅವ್ರ ಹೆಸರಲ್ಲೇ ಹಣ ಪೀಕಿ ಜೇಬಿಗಿಳಿಸಿಕೊಂಡು ಹೋಗ್ತಾರಂತೆ ಏಜೆಂಟರುಗಳು. ಹೀಗಾಗಿ, ಇದ್ರಿಂದ ಯಾರೋ ತಿಂದು ಇನ್ಯಾರದ್ದೋ ಮುಖಕ್ಕೆ ಮುಸುರಿ ಒರೆಸಿ ಹೋದಂಗೆ ಆಗ್ತಿದೆ. ಹೀಗಾಗಿ, ಇದರ ಬಗ್ಗೆಯೂ ನೂತನ ಸಾಹೇಬ್ರು ಗಮನ ಹರಿಸೋ ಜರೂರತ್ತು ಇದೆ. ಏನೇ ಕೇಸು ಇದ್ರೂ ಏಜೆಂಟರುಗಳ ನೆರಳು ಸೋಕದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ.

CCTV ಗಳ ಬಗ್ಗೆ..
ಹಾಗೆ ನೋಡಿದ್ರೆ, ಇಡೀ ಜಿಲ್ಲೆಯಲ್ಲಿ ಮುಂಡಗೋಡ ತಾಲೂಕು ಮಾತ್ರ ಕಳ್ಳಕಾಕರ ಪಾಲಿಗೆ ಹಾಟ್ ಸ್ಪಾಟ್ ಆಗ್ತಿದೆ. ಇದಕ್ಕೇಲ್ಲ ಕಾರಣ ಪಟ್ಟಣದಲ್ಲಿ ಎಲ್ಲೂ CCTV ಗಳೇ ಇಲ್ಲ. ಹೀಗಾಗಿ, ಸಂಬಂಧಪಟ್ಟವರಿಗೆ ಗಮನ ಸೆಳೆದು CCTV ಗಳ ಕಣ್ಗಾವಲು ಆಗುವಂತೆ ಮಾಡಬೇಕಿದೆ. ಅಂದಾಗ, ಮಾತ್ರ ಒಂದಿಷ್ಟು ಕ್ರೈಮುಗಳು ಕಂಟ್ರೊಲ್ ಆಗಬಹುದು. ಜೊತೆಗೆ ತಾಲೂಕಿನಲ್ಲಿ ಬೈಕ್ ಅಪಘಾತಗಳ ಸಂಖ್ಯೆ ನಿಜಕ್ಕೂ ಗಣನೀಯವಾಗಿದೆ. ಬಹುತೇಕ ಅಪಘಾತಗಳಲ್ಲಿ ಯುವಕರೇ ಬಲಿಯಾಗ್ತಿದಾರೆ. ಇದಕ್ಕೇಲ್ಲ ಒಂದಿಷ್ಟು ಜಾಗ್ರತಿ‌ ಮೂಡಿಸುವ ಕಾರ್ಯ ಇಲಾಖೆಯಿಂದ ಆಗಬೇಕಿದೆ. ಅದ್ರ ಜೊತೆ ಯುವತಿಯರ ನಾಪತ್ತೆ ಕೇಸುಗಳೂ ಮಿತಿ ಮೀರುತ್ತಿವೆ. ಇದಕ್ಕೇಲ್ಲ ಕಾರಣವಾದ್ರೂ ಏನು..? ಇದರ ಬಗ್ಗೆ ಪೋಷಕರು ಅನುಸರಿಸಬೇಕಾದ ಜಾಗ್ರತೆಗಳಾದ್ರೂ ಏನು ಅನ್ನೋದರ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ.

ಒಟ್ನಲ್ಲಿ, ಮುಂಡಗೋಡ ತಾಲೂಕಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರೋ ಪಿಐ ಸಾಹೇಬ್ರ ಎದುರು ಒಂದಿಷ್ಟು ಸವಾಲುಗಳಿವೆ. ಆದ್ರೂ ಅದನ್ನೇಲ್ಲ ಮೀರಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನ ಮತ್ತೆ ಜಾರಿಗೊಳಿಸುವ ಕಾರ್ಯವಾಗಬೇಕಿದೆ.

error: Content is protected !!