ಮುಂಡಗೋಡ ಗೊಟಗೋಡಿಕೊಪ್ಪದಲ್ಲಿ ಹಾಡಹಗಲೇ ತಾಯಿ ಮಗಳ‌ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ..!

ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆಯಾಗಿದೆ. ಖುದ್ದು ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ‌ ಮಾರಣಾಂತಿಕವಾಗಿ ಎರ್ರಾಬಿರ್ರಿ ಕೊಚ್ಚಿದ್ದಾನೆ ಅನ್ನೋ ಅರೋಪ ಕೇಳಿ ಬಂದಿದೆ, ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೋಟಗೋಡಿಕೊಪ್ಪದ ಹೊನ್ನಮ್ಮ ಬಸವರಾಜ್ ಚಿನ್ನಳ್ಳಿ ಹಾಗೂ ಮಗಳು ಅನ್ನಪೂರ್ಣ ಎಂಬುವವರೇ ಕುಡುಗೋಲಿನಿಂದ ಹಲ್ಲೆಗೆ ಒಳಗಾದವರಾಗಿದ್ದಾರೆ.

ಘಟನೆ ಏನು..?
ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪದಲ್ಲಿ ಅನ್ನಪೂರ್ಣ ಎಂಬುವ ಯುವತಿಯನ್ನು ಅದೇ ಗ್ರಾಮದ ನಾಗರಾಜ್ ವಡಲಣ್ಣವರ್ ಎಂಬುವ ಯುವಕನಿಗೆ ಕಳೆದ 10 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಮದುವೆ ಆದಾಗಿನಿಂದ ಗಂಡನ ಕಿರುಕುಳ ವಿಪರೀತವಾಗಿತ್ತಂತೆ. ನಿತ್ಯವೂ ಕುಡಿದು ಬಂದು ಪತ್ನಿಯನ್ನು ಹೊಡೆಯುವ ಹೀನ ಚಾಳಿಯಿತ್ತಂತೆ. ಇದರ ನಡುವೆಯೇ ಅದು ಹೇಗೋ ಹೊಂದಿಕೊಂಡು ಸಂಸಾರ ಮಾಡಿದ್ದರ ಫಲವಾಗಿ ಇಬ್ಬರು ಮುದ್ದಾದ ಗಂಡು ಮಕ್ಕಳು ಹುಟ್ಟಿದ್ದಾರೆ. ಆದ್ರೆ, ಇದರ ಮೇಲೆಯೂ ಗಂಡನ ಕಿರುಕುಳ ನಿರಂತರವಾಗಿಯೇ ಇತ್ತು ಅನ್ನೋ ಆರೋಪ ಕೇಳಿ ಬಂದಿದೆ.

ತವರು ಮನೆ ಸೇರಿಕೊಂಡಳು..!
ಈ ಕಾರಣಕ್ಕಾಗೇ ಗಂಡ ನಾಗರಾಜನ ಉಪಟಳ ತಡೆಯಲಾಗದೇ ಪತ್ನಿ ಅನ್ನಪೂರ್ಣ ಕಳೆದ ಒಂದೂವರೇ ತಿಂಗಳ ಹಿಂದೆ, ಅಲ್ಲಿಯೇ ಇದ್ದ ತನ್ನ ತವರು ಮನೆಯಲ್ಲಿ ಬಂದು ಕುಳಿತಿದ್ದಳು ಎನ್ನಲಾಗಿದೆ. ಇಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ತಾಯಿ ಜೊತೆಗೆ ಜೀವನ ನಡೆಸುತ್ತಿದ್ದಳಂತೆ. ಗಂಡನ ಜೊತೆಗೆ ಅದೇಷ್ಟೇ ಕರೆದ್ರೂ ಹೋಗಿರಲಿಲ್ಲವಂತೆ.

ಬೆಳ್ಳಂ ಬೆಳಿಗ್ಗೆ ಕೃತ್ಯ..!
ಹೀಗಾಗಿ, ಮದುವೆಯಾದಾಗಿನಿಂದ ಗಂಡನ ಕಿರುಕುಳದಿಂದ ಬೇಸತ್ತಿದ್ದ, ಪತ್ನಿ ಅದೇಷ್ಟೇ ರಾಜೀ ಪಂಚಾಯತಿ ಆದ್ರೂ ಆತನ ಜೊತೆ ಬಾಳ್ವೆ ಮಾಡಲು ಸುತಾರಾಂ ಇಷ್ಟ ಇಲ್ಲ ಅಂತ ಸ್ಪಷ್ಟ ಪಡಿಸಿದ್ದಳಂತೆ. ಹೀಗಾಗಿ, ಗಂಡ ನಾಗರಾಜ್ ವಡಲಣ್ಣವರ್ ಇವತ್ತು ಬೆಳ್ಳಂ ಬೆಳಿಗ್ಗೆ ಶುಂಠಿ ಗದ್ದೆಯಲ್ಲಿ ಕೆಲಸಕ್ಕೆಂದು ಹೊರಟಿದ್ದ ವೇಳೆ, ಗ್ರಾಮದ ಶಿಬಾರ್ ಗಟ್ಟಿ ಹತ್ತಿರ ಇಂತಹ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ಸ್ಥಳೀಯರು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ತಾಯಿಯ ಸ್ಥಿತಿ ಸ್ಥಿರವಾಗಿದ್ದು, ಅನ್ನಪೂರ್ಣಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಆರೋಪಿ ಪತಿ

ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

error: Content is protected !!