ಮುಂಡಗೋಡ: ಪಟ್ಟಣದಲ್ಲಿ ಶನಿವಾರ ಮದ್ಯಾಹ್ನ ನಡೆದಿದ್ದ ದರೋಡೆ ಕೇಸ್ ಕೊನೆಗೂ ಬಟಾಬಯಲಾಗಿದೆ. ಮುಂಡಗೋಡಿನ ಯುವ ಪೊಲೀಸ್ ಪಡೆ ಘಟನೆ ನಡೆದ ಗಳಿಗೆಯಿಂದಲೇ ಕಾರ್ಯಾಚರಣೆಗಿಳಿದು ಇಬ್ಬರು ಅಸಲೀ ಆರೋಪಿಗಳನ್ನು ಎಳೆದು ತಂದಿದ್ದಾರೆ.
ಇವ್ರೇ ಆರೋಪಿಗಳು..!
ಅಂದಹಾಗೆ, ಶಿಕ್ಷಕಿಯ ಮಾಂಗಲ್ಯ ಸರ ಎಗರಿಸಿಕೊಂಡು ಪರಾರಿಯಾಗಿದ್ದ ಅಸಲೀ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿ ಜಿಲ್ಲೆ ಸವಣೂರಿನ ನಿಂಬೆಹಣ್ಣಿನ ವ್ಯಾಪಾರಿ ಅಫ್ಜಲ್ ಖಾದರಗೌಸ್ ಗವಾಲಿ(31), ಆಟೋ ಚಾಲಕ ದಾದಾಪೀರ ಅಲಿಯಾಸ್ ಖಲಂದರ್ ಮಹಮ್ಮದ್ ಹನೀಪ್ ಮಿರ್ಜಿ(23) ಎಂಬುವ ಇಬ್ಬರು ಆರೋಪಿಗಳನ್ನು ಎಳೆದು ತಂದಿದ್ದಾರೆ. ಇಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದ್ದ ಕೇಸ್, ಪೊಲೀಸರ ತನಿಖೆಯಲ್ಲಿ ಭಾರೀ ಕುತೂಹಲಗಳಿಗೆ ಕಾರಣವಾಗಿತ್ತು. ಮೊದ ಮೊದಲು ಬೇರೆಯದ್ದೇ ದಿಕ್ಕು ಕಂಡಿದ್ದ ಆರೋಪಿಗಳ ಜಾಡು ಸದ್ಯ ಹಾವೇರಿ ಜಿಲ್ಲೆಯಡೆಗೆ ವಾಲಿಕೊಂಡು ಯಶಸ್ಸು ಕಂಡಿದೆ.
ಅವ್ರಲ್ಲ, ಇವ್ರು..!
ಅಂದಹಾಗೆ, ಘಟನೆ ನಡೆದ ಕೆಲವೇ ಹೊತ್ತಲ್ಲಿ ತನಿಖೆಗಿಳಿದಿದ್ದ ಮುಂಡಗೋಡ ಪೊಲೀಸರಿಗೆ, ಮೊದ ಮೊದಲು ಈ ದರೋಡೆ ಕೇಸಿನಲ್ಲಿ ಯಾರೋ ಪ್ರೊಫೇಶನಲ್ ಕಳ್ಳರದ್ದೇ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ, ಸಾಕಷ್ಟು ಆಯಾಮಗಳಲ್ಲಿ ತನಿಖೆಗಿಳಿದಿದ್ದ ಪೊಲೀಸರು ತಮಗೆ ಮೊದಲು ಸಿಕ್ಕಿದ್ದ ಚಹರೆಯನ್ನೇ ಮುಂದಿಟ್ಟುಕೊಂಡು ಹೊರಟಿದ್ದರು. ಈ ದರೋಡೆ ಕೇಸಲ್ಲಿ ಆ ಗ್ಯಾಂಗ್ ನ ಅವನೊಬ್ಬನದ್ದೇ ಕೈವಾಡ ಇದೆ ಅಂತಾ ಬಲವಾಗಿ ಅಂದಾಜಿಸಿದ್ದರಂತೆ. ಆದ್ರೆ, ಕಡೆ ಗಳಿಗೆಯಲ್ಲಿ ಪೊಲೀಸರ ಚಾಣಾಕ್ಷತೆಯಿಂದ ನೈಜ ಆರೋಪಿಗಳ ಸುಳಿವು ಸಿಕ್ಕಿದೆ. ಹೀಗಾಗಿ, ಇಡಿ ತನಿಖೆಯ ದಿಕ್ಕೆ ಸವಣೂರಿನ ಕಡೆ ಮಗ್ಗಲು ಬದಲಿಸಿದೆ. ಪರಿಣಾಮ ಅಸಲೀ ಆರೋಪಿಗಳು ಅಂದರ್ ಆಗಿದ್ದಾರೆ.
ಮುಂಡಗೋಡ to ಸವಣೂರು..!
ಹೀಗಾಗಿ, ಯಾವಾಗ ಅಸಲೀ ಆರೋಪಿಗಳ ಸುಳಿವು ಪಕ್ಕಾ ಆಯ್ತೋ ಆ ಕ್ಷಣವೇ, ಹಾವೇರಿ ಜಿಲ್ಲೆಯ ಸವಣೂರಿನೆಡೆ ಹೆಜ್ಜೆ ಹಾಕಿದ್ರು ಪೊಲೀಸ್ರು. ಈ ವೇಳೆ ಸವಣೂರಿನಲ್ಲಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದ ಅವನೊಬ್ಬ ತಗಲಾಕ್ಕೊಂಡಿದ್ದ. ಈ ಕಾರಣಕ್ಕಾಗಿ ಥೇಟು ಗುಂತಕಲ್ ಗ್ಯಾಂಗ್ ನ ಖದೀಮನ ಹಾಗೆ ಕಾಣುವ ಆರೋಪಿಯನ್ನ ನೋಡಿ ಯುವ ಖಾಕಿಗಳು ಒಂದು ಕ್ಷಣ ಬೆಕ್ಕಸ ಬೆರಗಾಗಿದ್ದರಂತೆ.
ಎಂಗೇಜ್ಮೆಂಟ್ ಕಹಾನಿ..!
ಅಸಲು, ಸದ್ಯ ಅರೆಸ್ಟ್ ಆಗಿರೋ ಇಬ್ಬರು ಆರೋಪಿಗಳ ಪೈಕಿ ಓರ್ವ ಮಾತ್ರ ಒಂದಿಷ್ಟು ಕ್ರೈಮುಗಳ ಪರಿಪಾಠ ಬೆಳೆಸಿಕೊಂಡಿದ್ದವ. ಆತನ ಮೇಲೆ ಗೋವಾ ಸೇರಿದಂತೆ ಕೆಲವೆಡೆ ಹಲವು ಪ್ರಕರಣಗಳಲ್ಲಿ ಕೇಸು ದಾಖಲಿಸಿಕೊಂಡಿದ್ದ ಅನ್ನೋ ಬಾತ್ಮಿ ಇದೆ. ಆದ್ರೆ, ಇದೇ ಪ್ರಕರಣದಲ್ಲಿ ಬೈಕ್ ಚಾಲಕನಾಗಿದ್ದ ಆರೋಪಿಗೆ ನಿನ್ನೆಯಷ್ಟೇ ಮದುವೆಯ ನಿಶ್ಚಿತಾರ್ಥ ಆಗಿದೆಯಂತೆ. ಬಹುಶಃ ಎಂಗೇಜ್ಮೆಂಟ್ ಮಾಡಿಕೊಳ್ಳೊಕೆ ಹಣದ ಅವಶ್ಯಕತೆ ಎದುರಾಗಿ ದರೋಡೆ ಮಾಡಲು ಸಂಚು ಮಾಡಿದ್ರಾ..? ಅನ್ನೋ ಅನುಮಾನ ಇದೆ.
ಪ್ರೆಂಡ್ ಸ್ಕೂಟಿ..!
ಅಂದಹಾಗೆ, ಶನಿವಾರದ ಮಾಂಗಲ್ಯಸರ ದೋಚಿದ್ದ ಕೇಸಿನಲ್ಲಿ ಬಳಸಲಾಗಿರೋ ಸ್ಕೂಟಿ, ಆರೋಪಿಗಳು ತಮ್ಮ ಗೆಳೆಯನ ಬಳಿ ಎಲ್ಲೋ ಹೋಗಿ ಬರುವುದಾಗಿ ಹೇಳಿ ತಂದಿದ್ದರಂತೆ. ಆದ್ರೆ, ಹಾಗೆ ಬಂದವರು ನೇರವಾಗಿ ಮುಂಡಗೋಡಿಗೆ ಬಂದು ಚಿನ್ನದ ಸರ ದೋಚಿ ಹೋಗಿದ್ದರು. ಆದ್ರೆ, ನಮ್ಮ ಮುಂಡಗೋಡಿನ ಯುವ ಪೊಲೀಸ್ ಪಡೆ ಆರೋಪಿಗಳನ್ನು ಮಾಲು ಸಮೇತ ಹೆಡೆಮುರಿ ಕಟ್ಟಿ ಎಳೆದು ತಂದಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಸ್ಕೂಟಿ ಕೂಡ ವಶಕ್ಕೆ ಪಡೆಯಲಾಗಿದೆ. ಹೀಗಾಗಿ, ಮುಂಡಗೋಡಿಗರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ, ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ಐ ಹನುಮಂತ್ ಕುಡುಗುಂಟಿ, ಸಿಬ್ಬಂದಿಗಳಾದ ಮಹ್ಮದ್ ಸಲೀಂ, ಗಣಪತಿ ಹುನ್ನಳ್ಳಿ, ಅನ್ವರ್ ಖಾನ್, ಬಸವರಾಜ್ ಲಮಾಣಿ, ತಿರುಪತಿ ಚೌಡಣ್ಣವರ್, ಅಣ್ಣಪ್ಪ ಬುಡಗೇರ, ಕೊಟೇಶ್ ನಾಗರಳ್ಳಿ, ಮಹಾಂತೇಶ್ ಮುದೋಳ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು.