ಮುಂಡಗೋಡ: ಪ್ರಿಯ ಓದುಗರೇ, ತಮಗೆ ನಿನ್ನೆನೇ ಹೇಳಿದ್ವಿ ಅಲ್ವಾ..? ನಮ್ಮ ಮುಂಡಗೋಡ ಪೊಲೀಸ್ ಠಾಣೆಯಲ್ಲಿನ ಯುವ ಪೊಲೀಸರು ಅದೇಷ್ಟು ಸ್ಟ್ರಾಂಗ್ ಇದ್ದಾರೆ ಅಂತಾ.. ಅದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಶನಿವಾರ ಮುಂಡಗೋಡಿನಲ್ಲಿ ನಡೆದಿದ್ದ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ್ದ ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ ಖದೀಮರ ಸುಳಿವು ಬಹುತೇಕ ಸಿಕ್ಕಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಬಲಿಷ್ಟ ಟೀಂ ಒಂದು ಹಂತದಲ್ಲಿ ಮಹತ್ವದ ಸುಳಿವು ಹೆಕ್ಕಿ ತೆಗೆದಿದೆ. ಇನ್ನೇನು ಕನ್ಪರ್ಮ್ ಅಂತಾ ಆದರೇ ಆರೋಪಿಗಳನ್ನ ಹೆಡೆಮುರಿ ಕಟ್ಟೋದೊಂದೇ ಬಾಕಿ ಇದೆ ಎನ್ನುವ ಮಾಹಿತಿ ಇದೆ.
“ಇಲ್ಲ” ಗಳ ನಡುವೆ..!
ಅಸಲು, ನಿನ್ನೆ ಶನಿವಾರ ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕಿಗೆ ಆಘಾತ ಕಾದಿತ್ತು. ಶಿಕ್ಷಕಿಯ ಮಾಂಗಲ್ಯ ಸರವನ್ನು ಹಾಡಹಗಲೇ ಕಿತ್ತುಕೊಂಡು ಪರಾರಿಯಾಗಿದ್ದ ಖತರ್ನಾಕ ಖದೀಮರು ಇಡೀ ಮುಂಡಗೋಡಿಗರನ್ನೇ ಒಂದುಕ್ಷಣ ಬೆಚ್ಚಿ ಬೀಳುವಂತೆ ಮಾಡಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡಿದ್ದ ನಮ್ಮ ಪೊಲೀಸು ಸಾಹೇಬರುಗಳು, ತಕ್ಷಣವೇ ತಮ್ಮ ಪಡೆಗೆ ಕೆಲಸ ವಹಿಸಿದ್ದರು, ಹೇಗೋ ಗೊತ್ತಿಲ್ಲ ಮೊದಲು ಈ ಕೇಸ್ ಟ್ರೇಸ್ ಮಾಡಲೇಬೇಕು ಅಂತಾ ಕಟ್ಟಪ್ಪಣೆ ಕೊಟ್ಟಿದ್ರು. ತಕ್ಷಣವೇ ಫಿಲ್ಡಿಗಿಳಿದ ನಮ್ಮ ಹೆಮ್ಮೆಯ ಯುವ ಖಾಕಿಗಳು, ಖದೀಮರ ಜಾಡು ಹಿಡಿದಿದೆ. ಅಂದಹಾಗೆ, ಮುಂಡಗೋಡಿನಲ್ಲಿ ಇಂತಹ ಘಟನೆಗಳು ನಡೆದ್ರೆ ಈಜಿಯಾಗಿ ಸಹಾಯವಾಗುವ CCTV ಗಳು ಬೆರಳೆಣಿಕೆಯಷ್ಟು ಮಾತ್ರ. ಹೀಗಿದ್ದಾಗಲೂ, “ಇಲ್ಲ”ಗಳ ನಡುವೆಯೂ ಹೇಗೋ ಗೊತ್ತಿಲ್ಲ ಒಟ್ನಲ್ಲಿ ಕೇಸಿಗೆ ಒಂದು ಹಂತದ ರೂಪ ತಂದಿಟ್ಟಿದ್ದಾರೆ.
ಗುಂತಕಲ್ ಗುಮ್ಮಗಳಾ..?
ಹಾಗೆ ನೋಡಿದ್ರೆ, CCTV ಗಳ ದೃಷ್ಯಗಳನ್ನು ಬೆನ್ನಟ್ಟಿ ಹೊರಟಿದ್ದ ಖಾಕಿ ಟೀಂ ಗೆ, ಪುಣ್ಯಕ್ಕೆ ಅದೊಂದು ಕಡೆ ದರೋಡೇಕೋರರ ಸಣ್ಣದೊಂದು ಸುಳಿವು ಸಿಕ್ಕಿದೆ ಎನ್ನಲಾಗಿದೆ. ಆದ್ರೆ, ಆ CCTV ಯಲ್ಲಿ ಇರೋ ಖತರ್ನಾಕ ಖದೀಮರು ಯಾರು..? ಎಲ್ಲಿಯವರು..? ಅನ್ನೋ ಪತ್ತೆಗೆ ಮುಂದಾಗಿದ್ದಾಗ, ಬಹುಶಃ ಹುಬ್ಬಳ್ಳಿ ಕಡೆಯವರಾ..? ಸಾಗರ ಕಡೆಯವರಾ ಅನ್ನೋ ಸಾಕಷ್ಟು ದಿಗಿಲುಗಳು ಹುಟ್ಟಿಕೊಂಡಿದ್ದವು. ಆದ್ರೆ, ಕೊನೆ ಕೊನೆಗೆ ಮಾಂಗಲ್ಯ ಸರ ದೋಚಿದ್ದ ಕ್ರಿಮಿಗಳು ತೆಲಗು ರಾಜ್ಯದವರಾ..? ಇಂತಹದ್ದೊಂದು ಸಣ್ಣ ಸುಳಿವು ಸಿಕ್ಕಿರೋ ಮಾಹಿತಿ ಇದೆ. ಹೀಗಾಗಿ, ಸದ್ಯ ಅಲರ್ಟ್ ಆಗಿರೋ ಯುವ ಟೀಂ ಇನ್ನೇನು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಎಳೆದು ತರೋದು ಪಕ್ಕಾ ಅನ್ನೋ ಮಾಹಿತಿ ಇದೆ.
ಅವರು ಖತರ್ನಾಕ..!
ಅಂದಹಾಗೆ, ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಗುಟ್ಟಿ ತಾಲೂಕಿನಲ್ಲಿದೆ ಅದೊಂದು ಭಯಾನಕ ರಾಬರಿ ಪಡೆ. ಗುಂತಕಲ್ ಅನ್ನೋ ಪ್ರದೇಶದಲ್ಲಿದ್ದುಕೊಂಡೇ ರಾಜ್ಯ ಹೊರ ರಾಜ್ಯಗಳಿಗೆ ಸ್ಕೆಚ್ ಹಾಕುವ ಖದೀಮರು ಅಲ್ಲಿದ್ದಾರಂತೆ. ಅಸಲು, ಅವ್ರೇಲ್ಲ ಪ್ರೊಫೇಶನಲ್ ಕಳ್ಳರು. ಅವ್ರ ದಂಧೆಯೇ ಕಳ್ಳತನವಂತೆ. ಸಣ್ಣ ಸಣ್ಣ ಹಳೆಯ ಸ್ಕೂಟಿ ಮೇಲೆ ಬಂದು ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಆಭರಣ ದೋಚಿ, ಆ ಕ್ಷಣವೇ ಅಲ್ಲಿಂದ ಪರಾರಿಯಾಗೋದು ಇವ್ರ ನಿತ್ಯದ ಸ್ಕೀಮು.
ಕದ್ದ ಬೈಕಲ್ಲೇ..?
ಹಾಗೆ ನೋಡಿದ್ರೆ, ಈ ಖದೀಮರು ಅಲ್ಲಿಂದ ಟ್ರೇನ್ ಗೋ ಅಥವಾ ಬಸ್ ನಲ್ಲೋ ಹುಬ್ಬಳ್ಳಿಗೆ ಬಂದಿರ್ತಾರೆ. ಅಸಲು, ಗುಂತಕಲ್ ನಿಂದ ಹುಬ್ಬಳ್ಳಿಗೆ ಯಾವುದೇ ಮಾರ್ಗದಲ್ಲೂ ಬಂದ್ರೂ ಕೇವಲ 5 ಗಂಟೆಗಳ ಜರ್ನಿ. ಹೀಗಾಗಿ, ಒಂದಿಷ್ಟು ಗುಂಪುಗಳನ್ನು ಮಾಡಿಕೊಂಡು ಬರುವ ಖತರ್ನಾಕ ಖದೀಮರು. ಬಂದಲ್ಲಿಯೇ ಸ್ಕೂಟಿ, ಹಳೆಯ ಬೈಕ್ ಗಳನ್ನು ಮೊದಲು ಕದಿಯೋ ಚಾಳಿ ಇಟ್ಕೊಂಡಿರ್ತಾರಂತೆ. ಆ ನಂತರ ಅದೇ ಸ್ಕೂಟಿ, ಬೈಕುಗಳ ಮೂಲಕವೇ ಬಂಗಾರ ದೋಚಿಕೊಂಡು ಅಥವಾ ದರೋಡೇ ಮಾಡಿಕೊಂಡು ಪರಾರಿಯಾಗ್ತಾರೆ. ಹಾಗೆ ಮೊದಲು ಎಗರಿಸಿಕೊಂಡಿದ್ದ ಬೈಕುಗಳನ್ನು ಗುಜರಿ ಅಂಗಡಿಗೋ ಅಥವಾ ಎಲ್ಲೆಂದರಲ್ಲಿ ಬಿಟ್ಟು ಹೋಗುವ ಚಾಳಿಯೂ ಇದೆ. ಹೀಗಾಗಿ, ಇಂತಹ ಖತರ್ನಾಕ ಖದೀಮರನ್ನ ಹಿಡಿಯೋದು ಅಂದ್ರೆ ಸುಲಭದ ಮಾತಲ್ಲ. ಯಾಕಂದ್ರೆ, ಇವ್ರಿಗೆ ಗಟ್ಟಿಯಾದ ನೆಲೆಗಳೇ ಇಲ್ಲ. ಅವಾಗೊಮ್ಮ ಇವಾಗೊಮ್ಮೆ ಊರಿಗೆ ಮರಳುವ ಈ ಖದೀಮರು, ರಾಜ್ಯಗಳನ್ನ ಸುತ್ತುತ್ತಿರುತ್ತಾರಂತೆ. ಹಾಗಿದ್ರೆ, ಇದೇ ಗ್ಯಾಂಗಿನ ಸದಸ್ಯರೇ ಮುಂಡಗೋಡಿನಲ್ಲಿ ಶಿಕ್ಷಕಿಯ ಆಭರಣ ದೋಚಿದ್ರಾ..? ಗೊತ್ತಿಲ್ಲ. ತನಿಖೆ ನಡೀತಿದೆ.
ಬನವಾಸಿ ಕೇಸ್ ಗೂ..!
ನೆನಪಿರಲಿ, ಕಳೆದ 15 ದಿನಗಳ ಹಿಂದೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತದ್ದೇ ಒಂದು ಘಟನೆ ನಡೆದಿತ್ತು. ರಸ್ತೆಯಲ್ಲಿ ಬರುತ್ತಿದ್ದ ಬೊಲೆರೋ ವಾಹನ ತಡೆದು ಶಿರಸಿಯ ಅಡಿಕೆ ವ್ಯಾಪಾರಿಯೊಬ್ಬನಿಂದ ಅನಾಮತ್ತಾಗಿ 5 ಲಕ್ಷ ಹಣ ಎಗರಿಸಿಕೊಂಡು ಪರಾರಿಯಾಗಿದ್ದರು ಖದೀಮರು. ಬಹುಶಃ, ಆ ಕೃತ್ಯದಲ್ಲೂ ಇಂತದ್ದೇ ಗ್ಯಾಂಗ್ ನ ಖದೀಮರು ಭಾಗಿಯಾಗಿರೋ ಸಾಧ್ಯತೆ ಇದೆ. ಹೀಗಾಗಿ, ಮುಂಡಗೋಡಿನ ಕೇಸು ಖುಲ್ಲಂ ಖುಲ್ಲಾ ಆದ್ರೆ ಬನವಾಸಿ ಪೊಲೀಸರಿಗೂ ಕಳ್ಳರ ಜಾಡು ಸಿಗಲಿದೆ ಅನ್ನೋದು ಸದ್ಯದ ಮಾಹಿತಿ.
ಅದೇನೇ ಆಗಲಿ, ಮಾಂಗಲ್ಯ ಸರ ದೋಚಿದವ್ರು ಅದ್ಯಾವ ಸೀಮೆಯವರೇ ಇರಲಿ, ನಮ್ಮ ಪೊಲೀಸರಿಗೆ ಸಣ್ಣದೊಂದು ಸುಳಿವು ಸಿಕ್ಕಾಗಿದೆ. ಇನ್ನೇನು ಎಳೆದು ತರೋದಷ್ಟೇ ಬಾಕಿಯಿದೆ ಎಂಬ ಬಾತ್ಮಿ ಇದೆ. ನಮ್ಮ ಯುವ ಪೊಲೀಸರ ಕಾರ್ಯ ಯಶಸ್ವಿಯಾಗಲಿ. ಮುಂದೆ ಇಂತಹ ಕೃತ್ಯಗಳು ನಡೆಯದಿರಲಿ. ಇದಷ್ಟೇ ಸದ್ಯದ ಆಶಯ.