ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯೋರ್ವರ ಬಂಗಾರದ ಚೈನ್ ಎಗರಿಸಿದ್ದಾರೆ ಕಳ್ಳರು. ಬೈಕ್ ಮೇಲೆ ಬಂದಿದ್ದ ಇಬ್ಬರು ಏಕಾಏಕಿ ಶಿಕ್ಷಕಿಯ ಕೊರಳಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಘಟನೆಯಲ್ಲಿ, ಶಿಕ್ಷಕಿಯ ಮೂಕ ರೋಧನವಷ್ಟೇ ಬಾಕಿ ಉಳಿದಿದೆ.

ಮಟ ಮಟ ಮದ್ಯಾಹ್ನವೇ..!
ಅಂದಹಾಗೆ, ಶನಿವಾರ ಮದ್ಯಾಹ್ನ ಸರಿಸುಮಾರು 12- 40 ಗಂಟೆಯ ಹೊತ್ತಲ್ಲಿ, ಮಾದರಿ ಶಾಲೆಯ ದೈಹಿಕ ಶಿಕ್ಷಕಿ ಸರೋಜಾ ಮಹೇಶ್ ಬೈಂದೂರ್ ಶಾಲೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಯಲ್ಲೇ ಹೊರಟಿದ್ದರು. ಈ ವೇಳೆ, ಹೊಸಓಣಿಯ ವಿ.ಎಸ್. ಕೊಣಸಾಲಿಯವರ ಮನೆ ಹತ್ತಿರ ಶಿಕ್ಷಕಿಯ ಹಿಂದಿನಿಂದ ಬೈಕಿನಲ್ಲಿ ಬಂದ ಕಳ್ಳರು ಕೃತ್ಯ ಎಸಗಿದ್ದಾರೆ. ಬೈಕ್ ಹಿಂದುಗಡೆ ಕುಳಿತ ವ್ಯಕ್ತಿ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಏಕಾ ಏಕಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಸುಮಾರು 85 ಸಾವಿರ ರೂ.‌ ಮೌಲ್ಯದ 22 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶಿಕ್ಷಕಿ ಗಾಬರಿಗೊಂಡು ಚೀರಾಡಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಚಾಲಾಕಿ ಕಳ್ಳರು ಬೈಕ್ ಮೇಲೆ ಪರಾರಿಯಾಗಿದ್ದಾರೆ.

ಕೆಂಪು ಬಣ್ಣದ ಶರ್ಟ್ ಹಾಕಿದ್ದ..!
ಇನ್ನು ಬೈಕ್‌ಮೇಲೆ ಬಂದು ಕಳ್ಳತನ ಮಾಡಿ ಹೋಗಿರೋ‌ ಖದೀಮರಲ್ಲಿ,ಬೈಕ್ ಓಡಿಸುತ್ತಿದ್ದವನು ಕೆಂಪು ಬಣ್ಣದ ಶರ್ಟ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಹಾಗೆನೇ, ಹಿಂದೆ ಕುಳಿತವನು ಕಪ್ಪು ಬಣ್ಣದ ಶರ್ಟ ಹಾಗೂ ನೀಲಿ ಜಿನ್ಸ್ ಪ್ಯಾಂಟ್‌ನ್ನು ಹಾಕಿಕೊಂಡಿದ್ದನಂತೆ, ಅವರಿಗೆ ದಾಡಿ ಹಾಗೂ ಕಪ್ಪು ಬಣ್ಣದ ಉದ್ದನೆಯ ತಲೆ ಕೂದಲು ಇತ್ತಂತೆ, ಹಾಗಂತ ಶಿಕ್ಷಕಿ ಕಳ್ಳರ ಬಗ್ಗೆ ಗುರ್ತು ಹೇಳುತ್ತಿದ್ದಾರೆ.

ದೂರು ದಾಖಲು..!
ಯಾವಾಗ, ತನ್ನ ಚಿನ್ನದ ಮಾಂಗಲ್ಯಸರ ಕಳ್ಳತನ ಆಯ್ತೋ ಆವಾಗಲೇ ಆ ಶಿಕ್ಷಕಿ ಮುಂಡಗೋಡ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರೋ ಪೊಲೀಸರು ಹಲವು ಕಡೆ CCTV ದೃಷ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.

ಕಳ್ಳರಿಗೆ ಹದವಾದ ವಾತಾವರಣ‌..?
ಅಸಲು, ಮುಂಡಗೋಡಿನಲ್ಲಿ ಕಳ್ಳಕಾಕರಿಗೆ ಸದ್ಯ ಹೇಳಿ ಮಾಡಿಸಿದ ವಾತಾವರಣ ನಿರ್ಮಾಣ ಆಗಿದೆಯಾ..? ಹೀಗಾಗಿನೇ, ಹಾಡಹಗಲೇ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿಕೊಂಡು ಹೋಗ್ತಿದಾರೆ. ಹೀಗೆ ಮಹಿಳೆಯರ ಚಿನ್ನದ ವಡವೆಗಳನ್ನು ದೋಚಿಕೊಂಡು ಪರಾರಿಯಾಗ್ತಿದಾರೆ. ಕಾಲೇಜಿಗೆ ಕುಡಿದ ನಶೆಯಲ್ಲಿ ನುಗ್ಗಿ ವಿದ್ಯಾರ್ಥಿನಿಯರಿಗೆ ಅವಾಜ್ ಹಾಕುವ ಮಟ್ಟಿಗೆ ಬೆಳಿತಿದಾರೆ. ಆದರೂ, ಪೊಲೀಸರಿಗೆ ಏನೂ ಮಾಡಲು ಸಾಧ್ಯವಾಗ್ತಿಲ್ಲವಾ..?

ಬಲಿಷ್ಟ ಕ್ರೈಂ ಟೀಂ..!
ನಿಜ ಅಂದ್ರೆ ನಮ್ಮ‌ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕ್ರೈಂ ಟೀಂ ಬಲಿಷ್ಟವಾಗಿದೆ. ನೆಲ ಗುದ್ದಿ ನೀರು ತರಿಸಬಲ್ಲ ಹುಡುಗರು ಕ್ರೈಂ ಟೀಂ ಸೇರಿದಂತೆ ಇಡೀ ಠಾಣೆಯಲ್ಲಿ ಅಲರ್ಟ್ ಆಗಿಯೇ ಇರ್ತಾರೆ. ಆದ್ರೆ, ಇಂತಹ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಬೇಕಾದ ಪೂರಕ ವ್ಯವಸ್ಥೆಗಳೇ ಇವ್ರಿಗಿಲ್ಲ. ಹೀಗಾಗಿ, ಅದೇಷ್ಟೋ ಪ್ರಕರಣಗಳು ಬಯಲು ಮಾಡಲು ಕಷ್ಟಸಾಧ್ಯ ಆಗ್ತಿದೆ.

CCTVಗಳೇ ಇಲ್ಲ..!
ಬಹುಶಃ, ಮುಂಡಗೋಡ ಪಟ್ಟಣದಲ್ಲಿ ಕಳ್ಳಕಾಕರಿಗೆ ಕಳ್ಳತನ ಮಾಡಲು ರೆಡ್ ಕಾರ್ಪೆಟ್ ಹಾಸಿ ಕರೆಯುವಂತಹ ವಾತಾವರಣ ಇದೆ. ಹಾಡಹಗಲೇ ದೋಚಿಕೊಂಡು ಹೋದ್ರೂ ಅವ್ರನ್ನ ಹಿಡಿಯಲು ಪೂರಕವಾದ ವ್ಯವಸ್ಥೆಗಳೇ ಇಲ್ಲ. ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷದಿಂದ ಕಂಗಾವಲಾಗಿರಬೇಕಿದ್ದ ಸಿಸಿಟಿವಿಗಳು ಇವತ್ತಿಗೂ ಕಣ್ಣು ಬಿಟ್ಟಿಲ್ಲ. ಗಲ್ಲಿ ಗಲ್ಲಿಗಳಲ್ಲಿ ಕಣ್ಗಾವಲಾಗಿರಬೇಕಿದ್ದ CCTV ಗಳನ್ನು ಅಳವಡಿಸಬೇಕಿದ್ದ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಇದ್ಯಾವುದರ ಪರಿವೇ ಇಲ್ಲ. ಹೀಗಾಗಿ, ಕ್ರೈಂ ಗಳನ್ನು ಬೆನ್ನಟ್ಟಿ ದಗಾಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರಿಗೆ ಭಾರೀ ಹಿನ್ನಡೆಯಾಗ್ತಿದೆ.

ಚಾರ್ಲಿ ಚಮಕ್..!
ಹಾಗೆ ನೋಡಿದ್ರೆ, ನಾನು ಮೊದಲೇ ಹೇಳಿರೋ ಹಾಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಸದ್ಯ ಬಿಸಿ ರಕ್ತದ ಉತ್ಸಾಹಿ ಯುವ ಪೊಲೀಸರಿದ್ದಾರೆ. ಏನಾದ್ರೂ ಸಾಧನೆ ಮಾಡಲೇ ಬೇಕು ಅಂತಾ ಖಾಕಿ ತೊಟ್ಟು ಬಂದವರಿದ್ದಾರೆ. ಆದ್ರೆ, ಅದ್ರಂತೆ ಠಾಣೆಯ ಹಿರಿಯ ಅಧಿಕಾರಿಗಳು ಅದ್ಯಾಕೋ ಏನೋ ಇಡೀ ಠಾಣೆಯನ್ನೇ ನಿರ್ಲಿಪ್ತತೆಗೆ ದೂಕಿದ್ದಾರೆ ಅನ್ನೊ ಕೊರಗು ಹಲವು ಪೊಲೀಸರಿಗೆ ಜೀವ ಹಿಂಡುತ್ತಿದೆ. ಇಲ್ಲಿ ಏನಂದ್ರೆ ಏನೂ ಸಂಭವಿಸುತ್ತಿಲ್ಲ. ಯಾರ್ಯಾರದ್ದೋ ಬಿಡೆಯಲ್ಲಿ, ಬರೀ ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಗಿದೆ ಅನ್ನೋ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ. ಹೀಗಿದ್ದಾಗ ಇಲ್ಲಿ ನ್ಯಾಯ ಅನ್ನೋದು ಹೇಗೆ..? ಯಾರಿಗೂ ಅರ್ಥವಾಗ್ತಿಲ್ಲ.

ಅಷ್ಟಕ್ಕೂ ಪಿಎಸ್ಐ ಯಾರು..?
ನಿಜ, ಮುಂಡಗೋಡಿನಲ್ಲಿ ಈ ಹಿಂದೆ ಪಿಎಸ್ಐ ಆಗಿ ಇಲ್ಲಿಂದ ವರ್ಗಾವಣೆಗೊಂಡಿರೋ ಬಸವರಾಜ್ ಮಬನೂರು, ಎನ್.ಡಿ.ಜಕ್ಕಣ್ಣವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇವತ್ತಿಗೂ ನೆನಪಿದೆ. ಆದ್ರೆ, ಅವ್ರೇಲ್ಲ ವರ್ಗವಾಗಿ ಹೋದ ನಂತರ ಮುಂಡಗೋಡಿಗೆ ಹೊಸದಾಗಿ ಬಂದಿರೋ ಪಿಎಸ್ಐ ಯಾರು..? ಇನ್ನೂ ಬಹುತೇಕ ಯಾರಿಗೂ ಗೊತ್ತಿಲ್ಲ. ಬಹುಶಃ, ಜನಮಾನಸದಲ್ಲಿ ಈ ಕ್ಷಣಕ್ಕೂ ಮುಂಡಗೋಡಿಗೆ ಬೇರೊಬ್ಬ ಪಿಎಸ್ಐ ಸಾಹೇಬ್ರು ಬಂದಿದ್ದಾರೆ ಅಂತಾ ಗೊತ್ತೇ ಆಗಿಲ್ಲವೆನೋ..?

ಹಾಡಹಗಲೇ ಅಂದ್ರೆ ಏನರ್ಥ..?
ನಿಜ ಅಂದ್ರೆ, ಮುಂಡಗೋಡ ತಾಲೂಕಿನಲ್ಲಿ ಈ ಹಿಂದೆ ಕ್ರೈಂ ಗಳು ನಡೆದ್ರೆ ಅದಕ್ಕೊಂದು ಬಲಿಷ್ಟ ರಕ್ಷಣಾತ್ಮಕ ಕ್ರಮಗಳು ಜಾರಿಯಾಗುತ್ತಿದ್ದವು. ಅಂತಹ ಅದೇಷ್ಟೋ ದಕ್ಷ ಅಧಿಕಾರಿಗಳ ಬೆವರು ಇವತ್ತಿಗೂ ಮುಂಡಗೋಡ ಠಾಣೆಯಲ್ಲಿ ಸುರಿದಿದೆ, ಆ ಬೆವರಿನ “ಹಸಿ” ಇನ್ನೂ ಆರಿಲ್ಲ. ಆದ್ರೆ, ಅದ್ಯಾಕೋ ಏನೋ ಇತ್ತಿಚೆಗೆ ಠಾಣೆಯ ಅಂಗಳ ಬೇರೆಯದ್ದೇ ಕತೆ ಹೇಳ್ತಿದೆ. ಹಾಗಂತ,
ಸಾರ್ವಜನಿಕರು ಕೈ ಕೈ ಹಿಚುಕಿಕೊಳ್ತಿದಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಗಾಬರಿಗೊಂಡಿದ್ದಾರೆ ಜನ. ಹಾಡಹಗಲೇ ಹೀಗೇಲ್ಲ ಕ್ರೈಂ ಗಳು ನಡಿತಿವೆ ಅಂದ್ರೆ ಅಯ್ಯೊ ನಮ್ಮ‌ ಮುಂಡಗೋಡ ಯಾವ ಮಟ್ಟಿಗೆ ಇಳಿದಿದೆ..? ಯಾವಾಗ ಸುಧಾರಿಸತ್ತೆ..? ಈ ಪ್ರಶ್ನೆಗೆ ಬಹುಶಃ ಉತ್ತರಿಸೋರು ಯಾರೂ ಇಲ್ಲವೆನೋ..? ಯಾಕಂದ್ರೆ, ಪೊಲೀಸರೆಂದ್ರೆ ಸದ್ಯ ಯಾರಂದ್ರೆ ಯಾರಿಗೂ ಭಯವಿಲ್ಲದಂತಾಗಿದೆ. ಈ ಕಾರಣಕ್ಕಾಗೇ ಇಲ್ಲಿ ಸದ್ಯ ಸೇವೆ ಸಲ್ಲಿಸ್ತಿರೋ ಅದೇಷ್ಟೋ ಬಿಸಿ ರಕ್ತದ ಉತ್ಸಾಹಿ, ಯುವ ಪೊಲೀಸರು ಬೇರೆಡೆಗೆ ವರ್ಗವಾಗಿ ಹೋದ್ರೆ ಸಾಕು ಅಂತಾ ಕನವರಿಸ್ತಿದಾರಂತೆ. ಎಸ್ಪಿ ಸಾಹೇಬ್ರ ಎದುರು ಇಲ್ಲಿನ ವಾಸ್ತವಗಳ ಬಗ್ಗೆ ಪುಂಕಾನುಪುಂಕ ದೂರುಗಳು ಮೌಕಿಕವಾಗಿ ಈಗಾಗಲೇ ಸಲ್ಲಿಕೆ ಆಗಿವೆ ಅನ್ನೋ ಮಾತೂ ಇದೆ. ಮುಂದೇನಾಗತ್ತೋ ಗೊತ್ತಿಲ್ಲ.

ಇದರ ನಡುವೆಯೇ ಸರ್ಕಾರಿ ಶಾಲೆಯ ಶಿಕ್ಷಕಿ ಪಾಪ, ತಮ್ಮ ಬೆಲೆಬಾಳುವ ಮಾಂಗಲ್ಯ ಸರವನ್ನೇ ಕಳೆದುಕೊಂಡು ಮಮ್ಮಲ ಮರಗುತ್ತಿದ್ದಾರೆ. ಅಷ್ಟಕ್ಕೂ, ಮುಂದೇನು..? ಅರ್ಥವಿಲ್ಲದ ಪ್ರಶ್ನೆ ಅನಿಸ್ತಿದೆ. ಇದು ನಮ್ಮ ದುರಂತ ಅಷ್ಟೆ..! ಯಾರನ್ನ ಕೇಳೋದು..?

error: Content is protected !!