ಚಿಕ್ಕೋಡಿ: ಜುಲೈ 6 ರಿಂದ ನಾಪತ್ತೆಯಾಗಿದ್ದ
ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾಗಿದೆ ಅನ್ನೋ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಹತ್ಯೆ ಕೇಸಿನಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿರೋ ಬೆಳಗಾವಿ ಪೊಲೀಸರು, ಜೈನ ಮುನಿಯ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಅದು ನಂದಿ ಪರ್ವತ ಆಶ್ರಮ..!
ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ಸದ್ಯ ನೀರವಮೌನ ಆವರಿಸಿದೆ. ಜೈನ ಮುನಿಯ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಆಶ್ರಮದತ್ತ ಧಾವಿಸಿ ಬರುತ್ತಿದ್ದಾರೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕೊಟ್ಟ ಹಣ ಕೇಳಿದ್ದಕ್ಕಾ..?
ಅಸಲು, ಆಶ್ರಮದಿಂದ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನ ಮುನಿಯ ಹತ್ಯೆ ಮಾಡಿದ್ದೇವೆ ಅಂತಾ ಆರೋಪಿಗಳು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಅಂತಾ ಬೆಳಗಾವಿ ಎಸ್ಪಿ ಡಾ.ಸಂದೀಪ ಪಾಟೀಲ್ ಹೇಳಿದ್ದಾರೆ. ಸದ್ಯ ಆರೋಪಿಗಳು ಮೃತದೇಹ ಎಲ್ಲಿ ಎಸೆದಿದ್ದಾರೆ ಅನ್ನೋ ಮಾಹಿತಿಯ ಬೆನ್ನು ಬಿದ್ದಿದ್ದಾರೆ ಪೊಲೀಸ್ರು.
ಮುನಿಯ ಮೃತದೇಹಕ್ಕೆ ಶೋಧ..!
ಸದ್ಯ ಪೊಲೀಸರ ವಶದಲ್ಲಿರೋ ಆರೋಪಿಗಳ ಹೇಳಿಕೆ ಪ್ರಕಾರ, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜೆಸಿಬಿಗಳ ಸಹಾಯದಿಂದ ಖಟಕಬಾವಿ – ಮುಗಳಖೋಡ ರಸ್ತೆಯ ಪಕ್ಕದ ಗದ್ದೆಯಲ್ಲಿ ಶೋಧ ನಡೆಸಲಾಗ್ತಿದೆ.
ಜುಲೈ 6ರಿಂದ ಹಿರೇಕೋಡಿಯ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ, ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು, ಪತ್ತೆಯಾಗಿರಲಿಲ್ಲ. ಹೀಗಾಗಿ, ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿ ನಾಪತ್ತೆ ಬಗ್ಗೆ ಭಕ್ತರಿಂದ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹತ್ಯೆ ಕೇಸ್ ಬಯಲು..!
ಕೇಸ್ ಗೆ ಸಂಬಂಧಿಸಿದಂತೆ ದೂರು ಪಡೆದು ತನಿಖೆಗಿಳಿದ ಪೊಲೀಸರು, ಕೇವಲ ನಾಲ್ಕು ಗಂಟೆಯಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜೈನಮುನಿ ಹತ್ಯೆ ಪ್ರಕರಣ ಬಯಲಾಗಿದೆ. ಆರೋಪಿಗೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಿದ್ದೇವೆ ಅಂತಾ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆಶ್ರಮದಲ್ಲಿ ಹತ್ಯೆ ಮಾಡಿ ಖಟಕಬಾವಿ ಗದ್ದೆಯಲ್ಲಿರೋ ತೆರೆದ ಕೊಳವೆ ಬಾವಿಯಲ್ಲಿ ಮೃತದೇಹ ಎಸೆದಿದ್ದೇವೆ ಅಂತಾ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಆರೋಪಿಗಳ ಮಾಹಿತಿ ಮೇರೆಗೆ ಪೊಲೀಸರು ಶೋಧಕಾರ್ಯ ನಡೆಸ್ತಿದಾರೆ.