ಈ ಸಾವನ್ನು ನಿಜಕ್ಕೂ ಯಾರ್ ಅಂದ್ರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೆಲವೇ ದಿನಗಳ ಹಿಂದೆ ಲವಲವಿಕೆಯಿಂದ ಕಾರ್ಯ ನಿರ್ವಹಿಸ್ತಿದ್ದ ಅರಣ್ಯ ಅಧಿಕಾರಿಯೊಬ್ಬ ಹೀಗೆ ವಯಸ್ಸಲ್ಲದ ವಯಸ್ಸಲ್ಲಿ ಜೀವ ಕಳೆದುಕೊಂಡು ಬಿದ್ದಿದ್ದಾನೆ. ಹಾಗಿದ್ರೆ, ಇದನ್ನು ಆತನ ಹಣೆಬರಹ ಅನ್ನ ಬೇಕೋ..? ಅಥವಾ ನಿರ್ಲಜ್ಜ, ಅಮಾನುಷ ವ್ಯವಸ್ಥೆಯ, ಮದವೇರಿದ ಅಧಿಕಾರಿಗಳ ನಿರ್ಲಕ್ಷ ಅನ್ನಬೇಕೋ ಒಂದೂ ಅರ್ಥವಾಗ್ತಿಲ್ಲ. ಒಟ್ನಲ್ಲಿ ದಾಂಡೇಲಿಯ ಅವನೊಬ್ಬ ಅರಣ್ಯ ಅಧಿಕಾರಿ ಸದ್ಯ ಇಂತದ್ದೇ ವ್ಯವಸ್ಥೆಗೆ ತನ್ನ ಜೀವ ಬಲಿ ಕೊಟ್ನಾ..? ಅರ್ಥವೇ ಆಗ್ತಿಲ್ಲ.
ಆತನ ಹೆಸ್ರು ಯೋಗೇಶ್..!
ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವ, ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ನಿರ್ಬಿಡೆಯ, ಪ್ರಮಾಣಿಕ ಸೇವೆ ಸಲ್ಲಿಸಿದ್ದವ. ಸದ್ಯ ವಿರ್ನೋಲಿ ವಲಯದ ,ಕುಳಗಿ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಯಲ್ಲಿದ್ದವ. ಈಗಷ್ಟೇ ಬಹುಶಃ ಮೂವತ್ತರ ಆಸುಪಾಸಿನ ಹುಡುಗ. ಮದುವೆಯಾಗಿದೆ. ಜೊತೆಗೆ ಮೂರು ವರ್ಷದ ಪುಟ್ಟ ಕಂದಮ್ಮನೂ ಇದೆ. ಹೀಗಿರೋ ಈತ ಕಳೆದ ಜೂನ್ 27 ರಂದು, ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಯಡವಟ್ಟು ಮಾಡಿಕೊಂಡನಾ..? ಅರ್ಥವೇ ಆಗ್ತಿಲ್ಲ. ಆದ್ರೆ, ಸದ್ಯ ನಿರ್ಲಿಪ್ತನಾಗಿ, ಹುಬ್ಬಳ್ಳಿ ಕಿಮ್ಸ್ ನ ಶವಾಗಾರದಲ್ಲಿ ಶವವಾಗಿ ಮಲಗಿದ್ದಾನೆ.
ಹೇಗಾಯ್ತು..?
ಅಂದಹಾಗೆ, ಅರಣ್ಯ ಇಲಾಖೆಯಲ್ಲಿ ಪ್ರತೀ ವರ್ಷ ಮಳೆಗಾಲ ಬಂತು ಅಂದ್ರೆ ಸಸ್ಯಗಳನ್ನ ನೆಟ್ಟು, ಕಾಡನ್ನು ಬೆಳೆಸುವ ಬಹುದೊಡ್ಡ ಕೆಲಸ ನಿರಂತರವಾಗಿ ನಡೀತಿದೆ. ಹಚ್ಚಿದ್ದ ಸಸಿಗಳು ನಾಲ್ಕೇ ದಿನಕ್ಕೆ ನಿರ್ನಾಮ ಆದ್ರೂ ಪ್ರತೀ ವರ್ಷ ಅದಕ್ಕಾಗೇ ಕೋಟಿಗಳ ಲೆಕ್ಕದಲ್ಲಿ ಸಸಿಗಳನ್ನು ಬೆಳೆಸುವ ಕಾರ್ಯ ನಡೆಯುತ್ತಲೇ ಇರತ್ತೆ. ಹಾಗೆ, ಸಸಿಗಳನ್ನು ನೆಡುವ ಸಲುವಾಗಿಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮಳೆ ಬಿದ್ದ ಗಳಿಗೆಯಿಂದಲೇ ರೆಡಿಯಾಗಿರ್ತಾರೆ.
ಅವತ್ತು ಜೂನ್ 27..!
ಹಾಗೆನೇ, ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ್, ತನ್ನ ಸಿಬ್ಬಂದಿಗಳ ಜೊತೆ ಕಳೆದ ಜೂನ್ 27 ರಂದು, ಕುಳಗಿಯಲ್ಲಿ ಟೀಕ್ ಬೆಡ್ (ಸಾಗವಾನಿ ಮಡಿ) ಸಿದ್ಧಪಡಿಸುತ್ತಿದ್ದರು. ನಿಮಗೆ ಗೊತ್ತಿರಲಿ, ಈ ಟೀಕ್ ಬೆಡ್ ಅಂದ್ರೆ, ಬೀಜಗಳನ್ನು ನೆಡುವ ಮುನ್ನ ತೋಡನ್ನು ತೆಗೆದು ಭೂಮಿಯೊಳಗೆ ಹದ ಮಾಡುವುದು. ನಂತರ ಅಲ್ಲಿ ಬೀಜ ನೆಟ್ಟು ಆ ಬೀಜ ಸಸಿಯಾದ ತಕ್ಷಣ ನರ್ಸರಿಗೆ ತಂದು ಚೀಲದಲ್ಲಿ ಹಾಕಿ ಗಿಡ ಮಾಡುವುದು. ಹೀಗೆ ಟೀಕ್ ಬೆಡ್ ಮಾಡಿ ಬೀಜ ಬಿತ್ತಿದ ಸಾಗವಾನಿ ಸಸಿಗಳಲ್ಲಿ ಕಳೆ ಬೆಳೆದಿರುತ್ತವೆ. ಹೀಗಾಗಿ, ಆ ಕಳೆಯನ್ನು ನಾಶಪಡಿಸಲು ಹಾಗೂ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸಲು ಕೀಟ ಮತ್ತು ಕಳೆನಾಶಕಗಳನ್ನು ಬಳಸಲಾಗುತ್ತದೆ. ಯೋಗೇಶ್ ನಾಯ್ಕ ಕೂಡ ಪ್ಯಾರಾಗ್ಯೂಟ್ ( PARAQUAT) ಎಂಬ ವಿಷಪೂರಿತ ಕೀಟ ನಾಶಕವನ್ನು ಸಾಗವಾನಿ ಮಡಿಯೊಳಗೆ ಸಿಂಪಡಿಸಿದ್ದಾರೆ. ಈ ಕೀಟನಾಶಕವನ್ನು ಸಿಂಪಡಿಸಿದ ಯೋಗೇಶ್ ನಾಯ್ಕ ಆ ನಂತರ ಕೈಯನ್ನ ಸ್ವಚ್ಛಗೊಳಿಸುವಲ್ಲಿ ಸ್ವಲ್ಪ ನಿರ್ಲಕ್ಷ ವಹಿಸಿದ್ರೆನೋ. ಹಾಗೇಯೇ ಕೈಯನ್ನು ಪ್ಯಾಂಟಿಗೆ ಒರೆಸಿಕೊಂಡು ಅದೇ ಕೈಯಿಂದ ತಂಬಾಕು ತೀಡಿ ಬಾಯಿಗೆ ಹಾಕೊಂಡಿದ್ದಾರೆ. ಮತ್ತೆ ಅದೇ ಕೈಯಿಂದ ನೀರಿನ ಬಾಟಲನ್ನು ತೆಗೆದು ನೀರು ಕುಡಿದಿದ್ದಾರೆ ಎಂಬ ಮಾಹಿತಿಯಿದೆ ಈ ಬಗ್ಗೆ ಅವರೇ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರಂತೆ.
ಆ ನಂತರ..!
ಹೀಗೆ, ಕಳೆನಾಶಕ ಸಿಂಪಡಿಸಿ ಮನೆಗೆ ಬಂದ ಒಂದು ದಿನದ ನಂತ್ರ, ಯೋಗೇಶ್ ನಾಯ್ಕ್ ಗೆ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಖಾಸಗಿ ವೈದ್ಯರಲ್ಲಿಗೆ ಹೋಗಿ ತೋರಿಸಿದಾಗ ಅವರು ಆಂಟಿಬಯಾಟಿಕ್ ಕೊಟ್ಟು ಕಳುಹಿಸಿದ್ದಾರೆ. ಆದರೆ ಅದು ಅವರಿಗೆ ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯ್ಕ ಅವರೇ ತನ್ನ ಕಾರು ತಾನೇ ಚಲಾಯಿಸಿಕೊಂಡು ತನ್ನ ಮಡದಿಯ ಜೊತೆಗೆ ಹುಬ್ಬಳ್ಳಿಯ SDM ಗೆ ಹೋಗಿ ದಾಖಲಾಗಿದ್ದಾರೆ. ದುರಂತ, ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬ ಆಗಿತ್ತಂತೆ.
ಅಂಗಾಂಗಗಳೇ ಡ್ಯಾಮೇಜ್..!
ನಂತರ ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ ಗಳು ಡ್ಯಾಮೇಜ್ ಆಗಿರುವುದು ತಿಳಿದು ಬಂದಿದೆ. ನಂತರ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೊತ್ತಿಗಾಗಲೇ, ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದ್ದ ಯೋಗೇಶ್ ನಾಯ್ಕ್ ಗೆ ಮತ್ತೊಂದು ಖಾಸಗೀ ಆಸ್ಪತ್ರೆಗೆ ರವಾನಿಸಲಾಗತ್ತೆ. ಆದ್ರೆ, ಅಲ್ಲೂ ಕೂಡ ಚಿಕಿತ್ಸೆಗೆ ಸ್ಪಂಧಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್ ಗೆ ಶಿಪ್ಟ್ ಮಾಡಲಾಗಿರತ್ತೆ. ದುರಂತ ಅಂದ್ರೆ, ಇವತ್ತು ಶುಕ್ರವಾರ ಸಂಜೆ ಯೋಗೇಶ್ ನಾಯ್ಕ್ ಎಂಬ ಯುವ ಅಧಿಕಾರಿ ತನ್ನ ಉಸಿರು ಚೆಲ್ಲಿದ್ದಾನೆ. ಹೀಗಾಗಿ, ಆತನ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ.
ಆ ವಿಷ ಅವಶ್ಯಕವಾ..?
ಅಧಿಕಾರಿಗಳೇ, ಅಷ್ಟೊಂದು ಭಯಾನಕ, ಕಾರ್ಕೋಟಕದಂತಹ ಕಳೆನಾಶಕ ಬಳಸುವ ಜರೂರತ್ತು ಇದೆಯಾ..? ಅದೂ ಕೂಡ ಅರಣ್ಯದ ಮಣ್ಣಲ್ಲಿ ಅಂತಹ ವಿಷ ಬಳಸುವ ಅವಶ್ಯಕತೆ ಇದೆಯಾ..? ಜಸ್ಟ್ ಆ ವಿಷವನ್ನು ಮುಟ್ಟಿ, ಅದರ ಒಂದು ಕಣ ದೇಹಕ್ಕೆ ಸೇರಿನೇ ಅದೊಂದು ಜೀವ ಬಲಿಯಾಗಿದೆ. ಹೀಗಿರೋವಾಗ, ಅಂತಹ ವಿಷವನ್ನು ಅರಣ್ಯದ ಮಣ್ಣಿನಲ್ಲಿ ಸೇರಿಸೋ ನಿಮಗೆ ಪರಿಸರದ ಬಗ್ಗೆ ಅರಿವೇ ಇಲ್ವಾ..? ಅರಣ್ಯದಲ್ಲಿರೋ ಅಸಂಖ್ಯ ಕಾಡು ಪ್ರಾಣಿಗಳಿಗೆ ನೀವು ಹಾಕಿರೋ ವಿಷಪೂರಿತ ಕಳೆನಾಶಕ, ಕ್ರಿಮಿನಾಶಕ ದೇಹ ಸೇರಿದ್ರೆ ಏನಾಗಬೇಡ..? ಈಗಾಗಲೇ ನಿಮ್ಮ ಕ್ರಿಮಿನಾಶಕ, ಕಳೆನಾಶಕದಿಂದ ಅದೆಷ್ಟು ಪ್ರಾಣಿಗಳನ್ನು ಬಲಿ ಪಡೆದಿದ್ದಿರಿ..? ಇದೇಲ್ಲದರ ಬಗ್ಗೆಯೂ ನಿಮಗೆ ಕಿಂಚಿತ್ತೂ ಪರಿಜ್ಞಾನವೇ ಇಲ್ಲವಾ ಅಧಿಕಾರಿಗಳೇ..? ಹಾಗಂತ ಪರಿಸರ ಪ್ರೇಮಿಗಳು ಪ್ರಶ್ನಿಸ್ತಿದಾರೆ.
“ಅರಣ್ಯ ಹುತಾತ್ಮ”
ನಿಜ ಅಂದ್ರೆ, ಈ ಪ್ರಕರಣದಲ್ಲಿ ಕರ್ತವ್ಯದಲ್ಲಿರುವಾಗಲೇ ಅವಘಡ ಸಂಭವಿಸಿ ದುರಂತ ಅಂತ್ಯ ಕಂಡಿರೋ ಯೋಗೇಶ್ ನಾಯ್ಕ್ ರನ್ನು “ಅರಣ್ಯ ಹುತಾತ್ಮ” ಅಂತಾ ಘೋಷಣೆ ಮಾಡಬೇಕಿದೆ. ಆ ಅಧಿಕಾರಿಯ ಕುಟುಂಬಕ್ಕೆ ಸರ್ಕಾರ ಸ್ಪಂಧಿಸಬೇಕಿದೆ. ಅಂದಾಗ ಮಾತ್ರ ಆ ಯುವ ಅಧಿಕಾರಿಯ ಸಾವಿಗೊಂದು ಸಾಂತ್ವನ ಸಿಗಬಹುದೆನೋ..?