ಬಸವನಕಟ್ಟಿ ಕರಡಿ ದಾಳಿ ಕೇಸ್: ಪ್ರತಿದಾಳಿ ಮಾಡಿ ಪತಿ ಹಾಗೂ ತಮ್ಮನ ಪ್ರಾಣ ಉಳಿಸಿದ ಸಬೀನಾ..! ಗಾಯಗೊಂಡವರ ಸ್ಥಿತಿ ಹೇಗಿದೆ ಗೊತ್ತಾ..?


ಮುಂಡಗೋಡ ಸಮೀಪದ ಶಿಗ್ಗಾವಿ ತಾಲೂಕಿನ ಬಸವನಕಟ್ಟಿಯಲ್ಲಿ, ನಿನ್ನೆ ನಡೆದಿದ್ದ ಕರಡಿ ದಾಳಿಯಲ್ಲಿ ಗಾಯಗೊಂಡಿದ್ದವರು ಹುಬ್ನಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಭೀಕರ ಕರಡಿ ದಾಳಿಯಿಂದ ತನ್ನ ಪತಿ ಹಾಗೂ ಸಹೋದರನನ್ನು ದಿಟ್ಟತನದಿಂದ ಹೋರಾಡಿ ರಕ್ಷಿಸಿಕೊಂಡ ಮಹಿಳೆ ಈಗ ಭಾರೀ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಅಂದಹಾಗೆ, ಬಸವನಕಟ್ಟಿ ಗ್ರಾಮದ ಸಬೀನಾ ಎಂಬುವ ಮಹಿಳೆ ನಿನ್ನೆ ಶನಿವಾರ ತನ್ನ ಪತಿ ಹಾಗೂ ಸಹೋದರನ ಜೊತೆ ಗದ್ದೆಗೆ ತೆರಳಿದ್ದರು. ಈ ವೇಳೆ ತನ್ನ ಮರಿಗಳೊಂದಿಗೆ ಬಂದಿದ್ದ ಕರಡಿ, ತನ್ನ ಮರಿಗಳಿಗೆ ಇವ್ರು ಸಮಸ್ಯೆ ಮಾಡಬಹುದು ಅಂತಾ ಭಾವಿಸಿ ಏಕಾಏಕಿ ಮೂವರ ಮೇಲೂ ದಾಳಿ ಮಾಡಿತ್ತು.

ಭಯಾನಕ ಪ್ರತಿದಾಳಿ..!
ಈ ವೇಳೆ ಕರಡಿ ದಾಳಿ ನಡೆಸಿ ಬಸೀರ್ ಸಾಬ್ ಹಾಗೂ ರಜಾಕ್ ಗೆ ತೀವ್ರ ಗಾಯಗೊಳಿಸಿತ್ತು. ಅಲ್ಲದೇ ಇದೇ ವೇಳೆ ಸಬೀನಾ ಮೇಲೂ ದಾಳಿ ಮಾಡಿದ ಕರಡಿಯ ಜೊತೆ ಕಾದಾಡಿದ ಸಬೀನಾ ಕೊಡಲಿಯಿಂದ ಕರಡಿ ಮೇಲೆ ಪ್ರತಿದಾಳಿ ಮಾಡಿದ್ದಳು. ಹೀಗಾಗಿ, ಕರಡಿ‌ ಮೇಲೆ ಪ್ರತಿ ದಾಳಿ ಮಾಡಿದ ಸಬೀನಾ ತಲೆಗೂ ಪೆಟ್ಟಾಗಿದೆ. ಇನ್ನು ತೀವ್ರವಾಗಿ ಗಾಯಗೊಂಡ ಬಸೀರ್ ಸಾಬ್, ರಜಾಕ್ ಗೆ ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಕರಡಿ ದಾಳಿಯಿಂದ ತಾನೂ ಕೂಡ ಗಾಯಗೊಂಡು ಚಿಕಿತ್ಸೆ ಪಡೆದ ಸಬೀನಾ, ಪತಿ ಮತ್ತು ಸಹೋದರನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

ಸಬೀನಾ ಹೇಳಿದ್ದಿಷ್ಟು..!
ಶನಿವಾರ ನಾವು ಮೂವರೂ ಹೊಲಕ್ಕೆ ಹೋದ ಸಂದರ್ಭದಲ್ಲಿ ತನ್ನ ಪತಿ ಮತ್ತು ಸಹೋದರನ ಮೇಲೆ ಕರಡಿ ದಾಳಿ ಮಾಡಿತು, ಈ ಸಂದರ್ಭದಲ್ಲಿ ನಾನು ಅವರಿಬ್ಬರ ರಕ್ಷಣೆಗೆ ಮುಂದಾದೆ. ನನ್ನ ಮೇಲೂ ಕರಡಿ ದಾಳಿ ಮಾಡಿತು. ಆದರೂ ಎದೆಗುಂದದೆ ಕರಡಿ ವಿರುದ್ಧ ಹೋರಾಡಿದೆ. ಪತಿ ಮತ್ತು ಸಹೋದರನ ಪ್ರಾಣ ಉಳಿಸಿದೆ. ಆದರೆ ಕರಡಿ ಸಾವನ್ನಪ್ಪಿದೆ ಅಂತ ನಂತರ ಗೊತ್ತಾಯಿತು. ದಾಳಿಯಲ್ಲಿ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಅಂತಾ ದಿಟ್ಟ ಮಹಿಳೆ ಸಬೀ‌ನಾ ಹೇಳಿದ್ದಾಳೆ.

ಇನ್ನು, ಪತ್ನಿಯ ಸಾಹಸಕ್ಕೆ ಪತಿಯ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಆಕೆ ಕರಡಿ ಮೇಲೆ ಪ್ರತಿ ದಾಳಿ ಮಾಡಿದ್ದರಿಂದ ನಮ್ಮಿಬ್ಬರ ಪ್ರಾಣ ಉಳಿದಿದೆ. ಪ್ರಾಣ ಉಳಿಸಿದ ಪತ್ನಿಯನ್ನು ಪತಿ ಬಸೀರ್ ಸಾಬ್ ಹಾಡಿ ಹೊಗಳಿದ್ದಾನೆ. ಇನ್ನು
ಸಬೀನಾಳ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ‌.

error: Content is protected !!