ಕುಮಟಾ ಕತಗಾಲ ಸಮೀಪದ ದೇವಿಮನೆ ಘಟ್ಟದಲ್ಲಿ ಸಿಕ್ಕಿದ್ದ ಮಹಿಳೆಯ ಶವ ಕೇಸ್ ಖುಲ್ಲಂ ಖುಲ್ಲಾ ಆದಂತಾಗಿದೆ. ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರಿನಲ್ಲಿ ಕೊಂದು ದೇವಿಮನೆ ಘಟ್ಟದಲ್ಲಿ ಹೆಣ ಎಸೆದು ಹೋಗಿದ್ದ ಹಂತಕರನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಸಲು, ಇಲ್ಲಿ ಖುದ್ದು ಪತಿಯ ಸಹೋದರನೇ ತನ್ನ ತಾಯಿ, ಸಹೋದರಿ, ದೊಡ್ಡಮ್ಮಳ ಜೊತೆ ಸೇರಿಕೊಂಡು ತಮ್ಮನ ಪತ್ನಿಯನ್ನ ಕೊಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಕೇಸಲ್ಲಿ ಈಗ ಮುಂಡಗೋಡ ತಾಲೂಕಿನ ಇಂದೂರಿನ ಓರ್ವ ಆರೋಪಿ ಸೇರಿ ಒಟ್ಟೂ ಐವರು ಹಂತಕ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಕುಮಟಾ ಪೊಲೀಸರು.

ಕ್ರೂಸರ್ ಚಾಲಕ ಇಂದೂರಿನವನು..!
ಅಂದಹಾಗೆ, ಈ ಪ್ರಕರಣದಲ್ಲಿ 5 ನೇ ಆರೋಪಿಯಾಗಿರೋ ಮುಂಡಗೋಡ ತಾಲೂಕಿನ ಇಂದೂರಿನ ಅಮಿತ್ ಅಶೋಕ ಗೋಕಲೆ (26) ಕೂಡ ಆರೆಸ್ಟ್ ಆಗಿದ್ದಾನೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಕೊಲೆಯಾದ ಯಲ್ಲಮ್ಮಳ ಪತಿಯ ಸಹೋದರ, ಶಿಗ್ಗಾವಿ ತಾಲೂಕಿನ ಚಿಕ್ಕ ಮಲ್ಲೂರು ಗ್ರಾಮದ ಮಹೇಶ ಶಿವಪ್ಪ ದೊಡ್ಡಮನಿ (36), ಇಂದೂರಿನ ಕ್ರೂಸರ್ ಚಾಲಕ ಅಮಿತ್ ಪತ್ನಿ, ಕಾವ್ಯ ಅಮಿತ್ ಗೋಕಲೆ(20), ಬಂಕಾಪುರ ನಿವಾಸಿಗಳಾದ ನೀಲಕ್ಕ ಚಂದ್ರಪ್ಪ ಹುಡೆದ‌ (50), ಗೌರಮ್ಮ ಮಲ್ಲೇಶ ಕರಿಮಾಳಮಠ(40) ಎಂಬುವವರನ್ನು ಬಂಧಿಸಲಾಗಿದೆ.

ಕೊಲೆಯಾದ ಯಲ್ಲಮ್ಮ

ನಿದ್ದೆ ಮಾತ್ರೆ ಕೊಟ್ಟಿದ್ದರು..!
2018 ರಲ್ಲಿ ಮೃತ ಯಲ್ಲಮ್ಮ ಲೋಹಿತ್ ದೊಡ್ಡಮನಿ ಎಂಬುವವನ ಜೊತೆ ಮದುವೆ ಆಗಿದ್ದಳು. ಆದ್ರೆ, ಆ ನಂತರದಲ್ಲಿ ಆಕೆಯ ನಡತೆ ಬಗ್ಗೆ ತಕರಾರು ಹೊಂದಿದ್ದ ಆಕೆಯ ಪತಿಯ ಸಹೋದರ ಹಾಗೂ ಸಂಬಂಧಿಕರು, ಆಕೆಯ ನಡತೆ ಸರಿಯಿಲ್ಲ ಅಂತಾ ನಿತ್ಯವೂ ಜಗಳ‌ ಮಾಡುತ್ತಿದ್ದರು. ಹೀಗಿದ್ದಾಗ ಟೇಲರಿಂಗ್ ಮಾಡಿ ಜೀವನ ಸಾಗಿಸುತ್ತಿದ್ದ ಯಲ್ಲಮ್ಮನನ್ನು ಹೇಗಾದ್ರೂ ಸರಿ ಮುಗಿಸಬೇಕು ಅಂತಾ ಪ್ಲ್ಯಾನ್ ಮಾಡಿದ್ರು.

ಆರೋಪಿಗಳು

ಅವತ್ತು ಜೂನ್ 16..
ಹೇಗಾದ್ರೂ ಸರಿ ಯಲ್ಲಮ್ಮನನ್ನು ಕೊಂದು ತೀರಬೇಕು ಅಂತಾ ಜಿದ್ದಿಗೆ ಬಿದ್ದಿದ್ದ ಭಾವ, ಭಾವನ ಸಹೋದರಿ ಸೇರಿ ಸಂಬಂಧಿಗಳು ಜೂನ್ 16 ಕ್ಕೆ ಮುಹೂರ್ತ ಪಿಕ್ಸ್ ಮಾಡಿದ್ದರು. ದಿ: 16-06-2023 ರಂದು ರಾತ್ರಿ ಕೋಳಿ ಊಟ ಮಾಡಿಸಿ, ಯಲ್ಲಮ್ಮಳಿಗೆ ಊಟದಲ್ಲಿ ನಿದ್ರೆ ಮಾತ್ರೆ ಕೊಟ್ಟಿದ್ದಾರೆ. ನಂತ್ರ ಅವಳು ಅವಳು ಗಡದ್ದ್ ನಿದ್ರೆಗೆ ಜಾರಿದ ನಂತರ ಆರೋಪಿಗಳಾದ ಮಹೇಶ್, ಕಾವ್ಯಾ, ನೀಲಕ್ಕ ಹಾಗೂ ಗೌರಮ್ಮ ಸೇರಿಕೊಂಡು ಆಕೆಯ ವೇಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ, ಕೊಲೆ ಮಾಡಿದ್ದಾರೆ. ನಂತ್ರ ಹೇಗಾದ್ರೂ ಮಾಡಿ ಶವವನ್ನು ದೂರ ಸಾಗಿಸಿ ಕೇಸು ಹೊರ ಬರದಂತೆ ನೋಡಿಕೊಳ್ಳಲು ಸಂಚು ರೂಪಿಸಿದ್ದಾರೆ.

ಆರೋಪಿಗಳು

ಮಾಯಾಂಗನೆಯ ಮೆಸೇಜು..!
ಈ ಕೇಸಲ್ಲಿ ಅಸಲಾಗಿ ನೋಡಲು ಹೊರಟರೆ ಐದನೇ ಆರೋಪಿ, ಮುಂಡಗೋಡ ತಾಲೂಕಿನ ಇಂದೂರಿನ ಅಮಿತ್ ಇರಲಾರದೇ ಇರುವೆ ಬಿಟ್ಟುಕೊಂಡಂಗೆ ಆಗಿದೆ. ಯಾಕಂದ್ರೆ, ಈ ಕೇಸಿನಲ್ಲಿ ಎರಡನೇ ಆರೋಪಿಯಾಗಿರೋ ಕಾವ್ಯಾಳೊಂದಿಗೆ ಅಮಿತ್ ಕಳೆದ ವರ್ಷವಷ್ಟೇ ಮದುವೆಯಾಗಿದ್ದ. ಅಸಲು, ಇವ್ರದ್ದು ಅಂತರ್ಜಾತಿ ವಿವಾಹ. ದುರಂತ ಅಂದ್ರೆ ಮದುವೆ ಆಗಿ ಒಂದು ವರ್ಷವಾದ್ರೂ ಇದುವರೆಗೂ ಒಂದು ದಿನವೂ ನೆಟ್ಟಗೆ ಬಾಳ್ವೆ ಮಾಡಿಲ್ಲವೆನೋ.‌..? ಈ ಕಾರಣಕ್ಕಾಗಿಯೇ ಕಾವ್ಯಾ, ಅಮಿತ್ ಬಿಟ್ಟು ತನ್ನ ಊರು ಸೇರಿಕೊಂಡು ಆರು ತಿಂಗಳಾಗಿದೆ. ಹೀಗಿರೋವಾಗ ಪ್ರತಿದಿನವೂ ಅಮಿತ್ ಆಕೆಗೆ ಕಣ್ಣೀರಾಭಿಷೇಕದಿಂದ “ಮಿಸ್ ಯೂ” ಮನೆಗೆ ವಾಪಸ್ ಬಾ.. ನಂಗೆ ನಿನ್ನ ಬಿಟ್ಟಿರೋಕೆ ಆಗಲ್ಲ ಅಂತ ಅಲವತ್ತುಕೊಳ್ತಿದ್ದ. ಆದ್ರೆ, ಜಪ್ಪಯ್ಯ ಅಂದ್ರೂ ಕಾವ್ಯಾ ಮಾತ್ರ ಯಾವತ್ತೂ ಅಮಿತ್ ಗೆ ಜಸ್ಟ್ ಒಂದು ರಿಪ್ಲೈ ಮಾಡುವ ಗೋಜಿಗೂ ಹೋಗ್ತಿರಲಿಲ್ಲ. ಬದಲಾಗಿ, ಆಸ್ತಿ ನನ್ನ ಹೆಸರಿಗೆ ಮಾಡು ನಾನು ಬರ್ತಿನಿ ಅಂತಾ ಖಡಕ್ಕಾಗಿ ಹೇಳಿ ಹೋಗಿದ್ಲಂತೆ. ಹಾಗಂತ, ಅಮಿತ್ ಪೊಲೀಸರ ಎದುರು ಗೋಗರೆದಿದ್ದಾನೆ.

ಇಂದೂರಿನ ಕ್ರೂಸರ್ ಚಾಲಕ ಅಮಿತ್

ಅವತ್ತು ಮಾತ್ರ..!
ನಿಜ ಅಂದ್ರೆ, ಜೂನ್ 16 ರಂದು ತನ್ನ ಸಹೋದರನ ಹೆಂಡ್ತಿಯ ಬಲಿ ಪಡೆದು ಕಾಳಿ ಅವತಾರ ತಾಳಿದ್ದ ಕಾವ್ಯಾ,ಗೆ ಅತ್ತಿಗೆಯ ಹೆಣ ಸಾಗಿಸಲು ಅದೊಂದು ಪ್ಲ್ಯಾನ್ ಬರತ್ತೆ. ಹೇಗೂ ತನ್ನ ಗಂಡ ಡ್ರೈವರ್, ಆತನದ್ದೇ ಸ್ವಂತ ವಾಹನವೂ ಇದೆ. ಅವನ ಸಹಾಯ ಪಡೆದ್ರೆ ನಾವು ಸೇಫ್ ಆಗ್ತಿವಿ ಅಂತಾ ತಕ್ಷಣವೇ ಡಾರ್ಲಿಂಗ್ ಎಲ್ಲಿದಿಯಾ..? ಅಂತಾ ಒಂದು ಮೆಸೇಜ್ ಮಾಡ್ತಾಳೆ.. ಹಾಗೆ ತಕ್ಷಣವೇ ತನ್ಮ ಪತ್ನಿಯ ಮೆಸೇಜ್ ನೋಡಿ ಉಬ್ಬಿಹೋದ ಅಮಿತ್ ಅವಳ ಮಾತಿಗಾಗಿ ಕಾಯ್ತಾ ಇರ್ತಾನೆ. ಅಷ್ಟೊತ್ತಿಗೆ ಕಾವ್ಯಾ ತನ್ನ ಗಂಡ ಅಮಿತ್ ಗೆ ಕಾಲ್ ಮಾಡಿ ಬಿಡ್ತಾಳೆ.. ಬೇಗ ಬಾ ಡಾರ್ಲಿಂಗ್ ನಿನ್ನ ಹತ್ರ ಮಾತಾಡೋದು ಇದೆ. ಅಂತಾ ನೇರವಾಗಿ ಶಿಗ್ಗಾವಿಯ ಚಿಕ್ಕ ಮಲ್ಲೂರಿಗೆ ಆಮಂತ್ರಿಸುತ್ತಾಳೆ. ಅಷ್ಟೆ..

ಮೂವರು ಹೆಂಗಸರಷ್ಟೇ..!
ಯಾವಾಗ, ತನ್ನ ಪ್ರೀತಿಯ ಮಡದಿ ಕರೆ ಮಾಡಿ ಬರಲು ಹೇಳಿದ್ಲೋ ಅವಾಗ ಅಮಿತ್ ಸಂತಸಕ್ಕೆ ಪಾರವೇ ಇರಲಿಲ್ಲ. ತಕ್ಷಣವೆ ಚಂಗನೆ ಜಿಗಿದು ತನ್ನ ಕ್ರೂಸರ್ ಮೂಲಕ ನೇರವಾಗಿ ಚಿಕ್ಕ ಮಲ್ಲೂರಿಗೆ ಬಂದಿಳಿದಿದ್ದ ಅಮಿತ್‌. ಅಲ್ಲಿ ಬಂದಾಗಲೇ ನೋಡಿ ಅಮಿತ್ ಗೆ ಅಸಲಿ ಸತ್ಯ ಕಂಡಿದ್ದು. ಒಂದು ಕ್ಷಣ ಹೆಣ ನೋಡಿ ಥರಗುಟ್ಟಿ ಹೋಗಿದ್ದ ಅಮಿತಣ್ಣ, ನಂತರದಲ್ಲಿ ಪತ್ನಿಯ ಪ್ರೀತಿಯ, ಸವಿ ಸವಿಯಾದ ಮಾತುಗಳಿಗೆ ಮರುಳಾಗಿ ಬಹುಶಃ ಒಲ್ಲದ ಮನಸಿನಿಂದಲೇ ಶವ ಸಾಗಿಸಲು ಒಪ್ಪಿಕೊಂಡಿದ್ದನೋ ಏನೋ..? ಅಸಲು, ಸಂಜೆ 5 ಗಂಟೆ ಯಷ್ಟೊತ್ತಿಗೆ ಯಲ್ಲಮ್ಮನ ಜೀವ ತೆಗೆದಿದ್ದ ಹಂತಕರು, ಅಮಿತ್ ಮೂಲಕ ಸಾಗಿಸಲು ಕಾಯುತ್ತಿದ್ದರು. ಜನ ಮಲಗಿದ ಮೇಲೆ ಅಂದ್ರೆ ರಾತ್ರಿ ಸರಿ ಸುಮಾರು 3 ಗಂಟೆಯಷ್ಟೊತ್ತಿಗೆ ವಾಹನದಲ್ಲಿ ಹೆಣ ಹೇರಿಕೊಂಡು ಸೀದಾ ಹೊರಟಿದ್ದು ಶಿರಸಿ ಕುಮಟಾ ರಸ್ತೆಗೆ.

ದೇವಿಮನೆ ಘಟ್ಟದಲ್ಲಿ..!
ಇಂದೂರಿನ ಅಮಿತ್ ತನ್ನ ಕ್ರೂಸರ್ ವಾಹನದಲ್ಲಿ, ಹೆಣದ ಜೊತೆ ಹಂತಕ ಮೂವರೂ ಹೆಣ್ಣು ಮಕ್ಕಳೊಂದಿಗೆ ಬಂದು ದೇವಿಮನೆ ಘಟ್ಟದಲ್ಲಿ ಹೆಣ ಬೀಸಾಡಿ ಹೋಗಿದ್ದಾನೆ. ಆ ನಂತ್ರ ಚುಮುಚುಮು ಬೆಳಗಿನ ಹೊತ್ತಲ್ಲಿ, ಆ ಹಂತಕ ಆರೋಪಿಗಳನ್ನು ಊರಿಗೆ ಬಿಟ್ಟು ತಾನು ತನ್ನೂರು ಇಂದೂರಿಗೆ ಬಂದಿದ್ದಾನೆ. ಆದ್ರೆ, ಕ್ರೈಂ ಅನ್ನೋದನ್ನ ಮುಚ್ಚಿಡೋಕೆ ಆಗಲ್ಲ ಅಲ್ವಾ..? ಅದೇಷ್ಟೇ ಚಾಣಾಕ್ಷತೆಯಿಂದ ಮಾಡಿದ್ರೂ ಕಾನೂನಿನ ಕಣ್ಣಿಗೆ ಬೀಳದೇ ಇರಲು ಸಾಧ್ಯವೇ ಇಲ್ಲವಲ್ಲ. ಹೀಗಾಗಿ, ಜೂನ್ 17 ರಂದು ಯಲ್ಲಮ್ಮಳ ಶವ ಸಿಕ್ಕಿದೆ. ಕುಮಟಾ ಪೊಲೀಸರು ಕೇಸು ದಾಖಲಿಸಿಕೊಂಡು ಹಂತಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ತನಿಖೆ ಕೈಕೊಂಡು ಮೃತಳನ್ನು ಪತ್ತೆ ಮಾಡಿ ಆರೋಪಿತರನ್ನು ಎಳೆದು ತರುವಲ್ಲಿ, ಕುಮಟಾ ಪಿಐ ತಿಮ್ಮಪ್ಪ ನಾಯ್ಕ, ಪಿಎಸ್ಐಗಳಾದ ಈ.ಸಿ ಸಂಪತ್ತು, ನವೀನ ನಾಯ್ಕ, ಪೇದೆಗಳಾದ ದಯಾನಂದ ನಾಯ್ಕ,ಲೋಕೇಶ ಅರಿಶಿಣಗುಪ್ಪಿ, ಗುರು ನಾಯಕ, ಪ್ರದೀಪ ನಾಯಕ, ರಾಜು ನಾಯ್ಕ, ರವಿ ನಾಯ್ಕ, ಸಾಧನಾ ನಾಯಕ ಹಾಗೂ ಮುಂಡಗೋಡ ಪೊಲೀಸ ಠಾಣೆಯ ಪಿಎಸ್ಐ ಯಲ್ಲಾಲಿಂಗ, ಕೊಟೇಶ್ ನಾಗರವಳ್ಳಿ, ಶರತ್, ತಿರುಪತಿ, ವಿವೇಕ್ ಸೇರಿ ಹಲವರು ಈ ಕೇಸಿನ ತನಿಖೆಯಲ್ಲಿ ಭಾಗವಹಿಸಿದ್ದರು.

error: Content is protected !!