ದೈವಾಧೀನರಾದ ತಂದೆ ತಾಯಿಗಳ ಮೂರ್ತಿ ಕೆತ್ತಿ, ಮನೆಯಲ್ಲೇ ನಿತ್ಯವೂ ಪೂಜೆ ಮಾಡುವ ಅಪರೂಪದ ಮಗ..!


ರಾಣೇಬೆನ್ನೂರು: ಸದ್ಯ ಜೊತೆಗಿದ್ದ ತಂದೆ ತಾಯಿಗಳನ್ನೇ ಸಾಕಿ ಸಲಹುವುದು ಮಕ್ಕಳಿಗೆ ಬೇಡವಾಗಿದೆ. ಜೀವಂತವಾಗಿದ್ದ ಹೆತ್ತವರನ್ನೇ ವೃದ್ದಾಶ್ರಮಗಳಿಗೆ ಬಿಟ್ಟು ಬಂದು ಲಲ್ಲೆ ಹೊಡೆಯುವ ಅದೇಷ್ಟೋ ಮಕ್ಕಳು ನಮ್ಮ ನಡುವೆ ಇದ್ದಾರೆ. ಇದರ ನಡುವೆ ಎಂದೋ ದಿವಂಗತರಾಗಿ ಹೋದ ತಂದೆ, ತಾಯಿ, ಅಜ್ಜ ಅಜ್ಜಿ ಸೇರಿದಂತೆ ಪೂರ್ವಿಕರನ್ನೇಲ್ಲ ಇಲ್ಲೊಬ್ಬ ಹೃದಯವಂತ ವ್ಯಕ್ತಿ, ಮೂರ್ತಿ ಮಾಡಿಟ್ಟು ನಿತ್ಯವೂ ಪೂಜೆ ಮಾಡ್ತಿದಾರೆ ಅನ್ನೋದು ಅಚ್ಚರಿಯಾದ್ರೂ ಸತ್ಯ.

ಹೌದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಹೀಗೊಬ್ಬ ಹೃದಯವಂತ ತನ್ನ ಹಿರಿಯರ ಸೇವೆಯನ್ನು ನಿರಂತರ ಮಾಡುತ್ತಿದ್ದಾರೆ.

ಅರೇಮಲ್ಲಾಪುರ ಗ್ರಾಮದಲ್ಲಿ ಪಶುವೈದ್ಯ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿವಪ್ಪ ನಿಂಗಪ್ಪ ದೊಡ್ಡಮನಿ ಅವರು, ತಮ್ಮ ತಂದೆ – ತಾಯಿಯ ಮೂರ್ತಿಗಳನ್ನ ತಮ್ಮ ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ಇಟ್ಟು ಪ್ರತಿ ದಿನ ಭಕ್ತಿ ಪೂರ್ವಕ ಸೇವೆ ಸಲ್ಲಿಸ್ತಿದಾರೆ.

ಇನ್ನು ತಂದೆ ತಾಯಿಯವರ ಮೂರ್ತಿಯನ್ನು ಸ್ವತಃ ತಾವೇ ತಮ್ಮ‌ಕೈಯಾರೇ ಕೆತ್ತಿ, ಮೂರ್ತಿ ರೂಪ ಕೊಟ್ಟಿರೋ ಶಿವಪ್ಪ ಪ್ರತಿದಿನವೂ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಿಸುತ್ತಿದ್ದಾರೆ. ಜೊತೆಗೆ ಶರಣ ಅಂಬಿಗರ ಚೌಡಯ್ಯ, ಸಿದ್ಧಾರೂಡರ ಮೂರ್ತಿಗಳನ್ನು ಕೆತ್ತನೆ ಮಾಡಿ ಅವರನ್ನ ಸಹ ಪೂಜಿಸಲಾಗುತ್ತದೆ.

ಅಂದಹಾಗೆ, ದಿವಂಗತ ತಂದೆ ನಿಂಗಪ್ಪ ತಾಯಿ ಶಿವಶರಣೆ ದೇವಿರಮ್ಮ ಮೃತಪಟ್ಡು ಸುಮಾರು ವರ್ಷವಾಗಿದ್ದರು, ಮಗ ಶಿವಪ್ಪ ನಿಂಗಪ್ಪ ದೊಡ್ಡಮನಿ ಪಾಲಕರ ನೆನಪಿನಲ್ಲಿ ಅವರ ಮೂರ್ತಿಗಳನ್ನ ಪೂಜಿಸುತ್ತಾ ಗ್ರಾಮದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. ವಿಶ್ವ ಅಪ್ಪನ ದಿನವಾದ ಇಂದು ಅವರ ನೆನಪಿಗಾಗಿ ವಿಶೇಷ ಪೂಜೆ ಮಾಡಿ ಮನೆಗೆ ಬಂದ ಅತಿಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದಾರೆ. ಅಸಲು, ಇಂತಹ ಪುತ್ರರನ್ನು ಪಡೆದ ಆ ತಂದೆ ತಾಯಿಗಳು ನಿಜಕ್ಕೂ ಸ್ವರ್ಗದಲ್ಲಿ ಸಂತೃಪ್ತಿಯಿಂದ ಹರಸುತ್ತಿದ್ದಾರೆನೋ. ಇಂತವರನ್ನು ನೋಡಿಯಾದರೂ ಹೆತ್ತವರನ್ನು ವೃದ್ದಾಶ್ರಮಗಳಿಗೆ ಬಿಟ್ಟು ಬಿಂದಾಸ್ ಜೀವನ‌ ನಡೆಸೋ ಪಾಪಿ ಮಕ್ಕಳಿಗೆ ಬುದ್ದಿ ಬಂದ್ರೆ ಅಷ್ಟೇ ಸಾಕಲ್ವಾ..? ಹ್ಯಾಟ್ಸ್ ಅಪ್ ಶಿವಪ್ಪನವರೇ..!

error: Content is protected !!