ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಅಕ್ಷರಶಃ ಇಡೀ ಇಲಾಖೆಯ ನಿದ್ದೆಗೆಡಿಸಿದೆ. ಇಲ್ಲಿ ಅಕ್ರಮಿಗಳು ಅಂದ್ರೆ ಅದು ಖುದ್ದು ಇಲಾಖೆಯ ಅನ್ನ ಉಂಡವರೇ ಅನ್ನೋದು ಒಂದೆಡೆಯಾದ್ರೆ, ಯೂನಿಫಾರ್ಮ್ ತೊಟ್ಟ ಕ್ರಿಮಿನಲ್ ಗಳೇ ಇಂತಹದ್ದೊಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಂತಾ ಬಹುಶಃ ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗ್ತಿದೆ. ಹೀಗಾಗಿನೇ ಬರೋಬ್ಬರಿ ಆರು ಜನ ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಕಳಿಸಿದ್ದಾರೆ ಡಿಎಫ ಓ ಸಾಹೇಬ್ರು..
ಆರು ಅಧಿಕಾರಿಗಳ ಮೇಲೆ ತೂಗುಕತ್ತಿ..!
ಅಂದಹಾಗೆ, ಮುಂಡಗೋಡ ಸರ್ಕಾರಿ ಟಿಂಬರ್ ಡೀಪೋದಿಂದ ಶುಕ್ರವಾರ ರಾತ್ರಿ ಎರಡು ಲಾರಿಗಳ ಮೂಲಕ ಅಕ್ರಮ ಕಟ್ಟಿಗೆ ಸಾಗಿಸಲಾಗಿತ್ತು. ಹಾಗೆ ಸಾಗಿಸಲಾಗಿದ್ದ ಬೆಲೆಬಾಳುವ “ಮಾಲು” ಖುದ್ದು ಖಾಕಿ ತೊಟ್ಟು ಅರಣ್ಯ ರಕ್ಷಣೆಗೆ ನಿಯೋಜನೆ ಗೊಂಡಿದ್ದವರೇ ಮಾಡಿದ್ದು ಅಂತಾ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಆರು ಜನ ಅಧಿಕಾರಿಗಳ ಮೇಲೆ ಇವಾಗ ತೂಗುಕತ್ತಿ ನೇತಾಡುತ್ತಿದ್ದು, ಮೊದಲ ಹಂತವಾಗಿ ಆ ಆರೂ ಜನ ಅಧಿಕಾರಿಗಳನ್ನು ಕಡ್ಡಾಯ ರಜೆ ನೀಡಿ ಹೊರಗಟ್ಟಲಾಗಿದೆ. ಹಾಗಂತ ಇಲಾಖೆಯ ಉನ್ನತ ಮೂಲಗಳು ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿವೆ.
ಯಾರು ಆ ಅಧಿಕಾರಿಗಳು..?
ಅಸಲು, ಪಬ್ಲಿಕ್ ಫಸ್ಟ್ ನಿನ್ನೆಯೇ ಈ ಬಗ್ಗೆ ಒಂದಿಷ್ಟು ಮಾಹಿತಿ ನೀಡಿತ್ತು. ಮುಂಡಗೋಡಿನ ಟಿಂಬರ್ ಡೀಪೋದಲ್ಲಿ ನಡೆದ ಅಕ್ರಮದಲ್ಲಿ ಅಲ್ಲಿನ “ರೇಂಜು” ಗಳ ಕಳ್ಳಾಟದ ಕುರಿತು ವಿಶ್ಲೇಷಿಸಿತ್ತು. ಅದು ಮೊದಲ ಹಂತದಲ್ಲಿ ಸತ್ಯವಾಗಿದೆ. ಈ ಕಾರಣಕ್ಕಾಗೇ ಮುಂಡಗೋಡ ಟಿಂಬರ್ ಡೀಪೋದ RFO ಜಿ.ಟಿ. ರೇವಣಕರ್ ಸಾಹೇಬ್ರನ್ನೂ ಕೂಡ ಇವಾಗ ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದೆ. ಹಾಗೆನೇ, DyRFO ಗಳಾದ ಜಿ.ಎಂ. ಬ್ಯಾಳಿ, ಮಾರುತಿ ಎಸ್., ಮಹೇಶ್ ಎಂ. ಬೋರಕರ್, ಹನ್ಮಂತ್ ಬಂಡಿವಡ್ಡರ್, ಸುರೇಶ್ ವಡ್ಡರ್ ಸೇರಿ ಆರೂ ಜನರನ್ನು ಸದ್ಯಕ್ಕೆ ಕಡ್ಡಾಯ ರಜೆ ನೀಡಿ “ನೀವು ಸ್ವಲ್ಪ ರೆಸ್ಟ್ ಮಾಡಿ ಪಾ” ಅಂತಾ ರೆಸ್ಟಿಗೆ ಕಳಿಸಲಾಗಿದೆ. ಈ ಆರೂ ಜನ ಮುಂದಿನ ತನಿಖೆ ನಡೆದು, ಮುಗಿಯುವವರೆಗೂ ಡೀಪೋದಲ್ಲಿ ಬಹುಶಃ ಕಾಣಿಸುವಂತಿಲ್ಲ.
ಹಾಗಿದ್ರೆ ಸಸ್ಪೆಂಡ್ ಕನ್ಪರ್ಮಾ..?
ಯಸ್, ಟಿಂಬರ್ ಡೀಪೋದ ಈ ಹಗರಣ ನಿಜಕ್ಕೂ ಇಡೀ ಇಲಾಖೆ ತಲೆ ತಗ್ಗಿಸುವಂತಾಗಿದೆ. ಹಿರಿಯ ಅಧಿಕಾರಿಗಳು ಕೆಂಡಾಮಂಡಲಾಗ್ತಿದಾರೆ. ಏನ್ರಿ ನಮ್ಮಮಾನ ಮರ್ಯಾದೆ ಹರಾಜು ಹಾಕ್ತಿದಿರಾ ಅಂತಾ ಪ್ರಾಮಾಣಿಕ ಅಧಿಕಾರಿಗಳು ಮಮ್ಮಲ ಮರುಗ್ತಿದಾರೆ. ಹೀಗಾಗಿ, ಈ ಕಳ್ಳಾಟದ ಪ್ರಕರಣವನ್ನು ಸುಲಭವಾಗಿ ಬಿಡುವ ಮಾತೇ ಇಲ್ಲ ಎನ್ನಲಾಗ್ತಿದೆ. ಜಬರ್ದಸ್ತ್ ತನಿಖೆ ಮಾಡಿ ಸೂಕ್ತ ಕ್ರಮ ಗ್ಯಾರಂಟಿ ಅನ್ನಲಾಗ್ತಿದೆ. ಈ ಅಕ್ರಮದ ಸುಳಿಯಲ್ಲಿ ಯಾರ್ಯಾರ ಪಾಲು ಎಷ್ಟಿದೆ ಅನ್ನೋದರ ಮೇಲೆ ಸಂಪೂರ್ಣ ತನಿಖೆ ನಡೆದು ಕ್ರಮ ಆಗತ್ತೆ. ಬಹುತೇಕ ಸಸ್ಪೆಂಡ್ ಆಗೋದರಲ್ಲಿ ಅನುಮಾನವೇ ಇಲ್ಲ ಎನ್ನಲಾಗ್ತಿದೆ. ಹೀಗಾಗಿ, ಈ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
ಓಬೆರಾಯನ ಕಾಲದ ವ್ಯವಸ್ಥೆ..?
ಅಸಲು, ರಾಜ್ಯದ ಬಹುತೇಕ ಸರ್ಕಾರಿ ಟಿಂಬರ್ ಡೀಪೋಗಳಲ್ಲಿ ಇವತ್ತಿಗೂ ಓಬೇರಾಯನ ಕಾಲದ ವ್ಯವಸ್ಥೆಗಳಿವೆ. ಹೀಗಾಗಿ, ಇಂತಹ ಅಕ್ರಮಗಳಿಗೆ ಇಲ್ಲಿನ ಹಳೆಯ ವ್ಯವಸ್ಥೆಗಳೇ ವೇದಿಕೆ ಆಗ್ತಿದೆಯಾ..? ಇಂತಹದ್ದೊಂದು ಅನುಮಾನದ ಬೇಸರ ಇಲ್ಲಿನ ಹಿರಿಯ ಅಧಿಕಾರಿಗಳಿಗಿದೆ. ಇಡಿ ಟಿಂಬರ್ ಡೀಪೋಗಳಲ್ಲಿ ಎಷ್ಟು ಮಾಲು ಬಂತು, ಎಷ್ಟು ಹೋಯ್ತು ಅನ್ನೊ ನಿರ್ಧಿಷ್ಟತೆಗಳೇ ಇರಲ್ಲ. ಇಲ್ಲಿರೋದೇಲ್ಲ ಬಹುತೇಕ ಅಂದಾಜಿನಲ್ಲೇ ನಡೆದು ಹೋಗ್ತಿದೆ. ಅಲ್ಲಿನ ಕೆಲವು ಅಕ್ರಮಿಗಳಿಗೆ ಅದೇಲ್ಲ ಚಕ್ಕಂಬಕ್ಕಳ ಹಾಕಿ ಅಮೇದ್ಯ ಮೇಯಲು ಸಹಕಾರಿಯಾಗ್ತಿದೆ. ಹೀಗಾಗಿ ಟಿಂಬರ್ ಡೀಪೋದಲ್ಲಿ ಹೊಸತನದ ತಂತ್ರಜ್ಞಾನಗಳ ಅಳವಡಿಕೆ ಅತ್ಯವಶ್ಯವಾಗಿದೆ ಅನ್ನೋದು ಹಲವರ ಅಭಿಪ್ರಾಯ.
ವಿಡಿಯೋ ಚಿತ್ರಿಕರಣವಾಗಬೇಕು..!
ಅಸಲು, ಸರ್ಕಾರಿ ಟಿಂಬರ್ ಡೀಪೋಗಳಲ್ಲಿ ಕಟ್ಟಿಗೆ ಸಾಗಾಟ ಮಾಡಲು ಒಂದಿಷ್ಟು ನಿಯಮಾವಳಿಗಳ ಅವಶ್ಯಕತೆ ಇದೆ. ಮಾಲು ಲೋಡ್ ಮಾಡುವಾಗ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿದ್ರೆ ಒಂದಿಷ್ಟು, ಅಕ್ರಮಗಳನ್ನು ನಿಯಂತ್ರಿಸಬಹುದು. ಅಲ್ಲದೇ, ಸೂಕ್ತ ಸಿಸಿಟಿವಿಗಳೂ ಕೂಡ ಇಲ್ಲಿ ಕಣ್ಗಾವಲು ಆಗಲೇ ಬೇಕಿದೆ. ಇದ್ರ ಜೊತೆಗೆ ಅಲ್ಲಿರೋ ಕೆಲವು ಕಾರ್ಮಿಕರ ಮೇಲೂ ನಿಗಾ ಇಡಲೇ ಬೇಕಿದೆ. ಯಾಕಂದ್ರೆ ಇದೇಲ್ಲದಕ್ಕೂ ಸಾಥ್ ನೀಡುವ ಕೆಲವೇ ಕೆಲವು “ಹೊರಗಿನ” ಜನ ತಿಂದುಂಡು ಗಟ್ಟಿಯಾಗುತ್ತಿದ್ದಾರೆ. ಹೀಗಾಗಿ, ಒಂದಿಷ್ಟು ಅಂಕುಶದ ಅವಶ್ಯಕತೆ ಇದೆ.
ನಕಲಿ ಟ್ರಾನ್ಸಪೋರ್ಟ್ ಹಾವಳಿ..!
ಮುಂಡಗೋಡಿನಲ್ಲಿ ಇಂತಹ ಅಕ್ರಮಗಳಿಗಾಗೇ ಒಂದಿಷ್ಟು ನಕಲಿ ಟ್ರಾನ್ಸ್ ಪೋರ್ಟ್ ಗಳು ಹುಟ್ಟಿಕೊಂಡಿವೆ. ಅಸಲು, ಅಂತಹ ಟ್ರಾನ್ಸ್ ಪೋರ್ಟ್ ಕಂಪನಿಗಳಿಗೆ ಯಾವ ಅಧಿಕೃತ ಲೈಸೆನ್ಸ್ ಗಳೂ ಇರಲ್ಲ. ಬಹುತೇಕ ಒಂದು ಲೆಟರ್ ಹೆಡ್ ಇಟ್ಟುಕೊಂಡು ದಂಧೆಗಿಳಿಯುವ ಹೀನ ಚಾಳಿ ಕಲಿತಿವೆ. ಹೀಗಾಗಿ, ಈ ಕಳ್ಳಾಟದ ಕೇಸುಗಳಲ್ಲಿ ಇಂತಹ ಅಕ್ರಮ ಟ್ರಾನ್ಸ್ ಪೋರ್ಟ್ ಕಂಪನಿಗಳ ಕರಾಮತ್ತುಗಳಿವೆ. ಹೀಗಾಗಿ, ಅಧಿಕಾರಿಗಳು ಗಮನ ಹರಿಸಬೇಕಿದೆ. ಅಂದಾಗ ಮಾತ್ರ ಟಿಂಬರ್ ಡೀಪೋದಲ್ಲಿ ಬೆಲೆ ಬಾಳುವ ಅರಣ್ಯ ಸಂಪತ್ತು ಒಂದಿಷ್ಟು ಬಚಾವ್ ಆಗಬಹುದು.
ಅದೇನೇ ಇರಲಿ, ಸದ್ಯ ಬಟಾ ಬಯಲಾಗಿರೋ ಅಕ್ರಮದ ಸುತ್ತ ಯಾರ್ಯಾರ ನೆರಳಿದೆ ಅನ್ನೋದು ಸಂಪೂರ್ಣ ತನಿಖೆಯಾಗಬೇಕಿದೆ. ಅದೇಂತದ್ದೇ ಅಧಿಕಾರಿಯಾಗಿದ್ರೂ ಶಿಕ್ಷೆ ಆಗಲೇಬೇಕಿದೆ. ಅಂದಾಗ ಮಾತ್ರ ಇಂತಹ ಅಕ್ರಮಗಳಿಗೆ ಮುಂದೆ ಒಂದಿಷ್ಟು ಲಗಾಮು ಬೀಳಬಹುದು. ಆದ್ರೆ, ಅದು ಆಗಬೇಕಷ್ಟೆ.