ಕಲಘಟಗಿ: ಹಸೆಮಣೆ ಏರಬೇಕಿದ್ದ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಾವರಗೇರಿ ಯುವತಿಯೊಂದಿಗೆ ಇದೇ ಜೂನ್ 7 ಕ್ಕೆ ಹಸೆಮಣಿ ಏರಬೇಕಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿದ್ದರ ಹಿಂದೆ ಅನೈತಿಕ ಸಂಬಂಧದ ಕರಿನೆರಳಿದೆ. ಹಾಗಂತ ಪೊಲೀಸರ ತನಿಖೆಯಿಂದ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ.
ಹೌದು, ವಿವಾಹಿತ ಮಹಿಳೆ ಜೊತೆ ಯುವಕನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ತೋಟದ ಮನೆಯಲ್ಲಿ ಮಲಗಿದ್ದ ನಿಂಗಪ್ಪ ನವಲೂರ (33) ಎಂಬ ಕೊಲೆಯಾಗಿದ್ದ ಯುವಕನ
ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದಿದ್ದರು.
ಆದ್ರೆ ಈ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೇ 7ರಂದು ಯುವಕ ಹಸೆಮಣೆ ಏರಬೇಕಿದ್ದ. ಇಷ್ಟರಲ್ಲಿ ಯುವಕನನ್ನು ಕೊಲೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಕಲಘಟಗಿ ಠಾಣೆ ಪೊಲೀಸರು ಕೊಲೆಗೆ ಕಾರಣ ಹಾಗೂ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಯುವಕ ಜಿನ್ನೂರು ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅನೈತಿಕ ಸಂಬಂಧಕ್ಕೆ ಬೇಸತ್ತು ಮಹಿಳೆಯ ಪತಿ ಮತ್ತು ಸಹೋದರ ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತಾ ತನಿಖೆಯ ವೇಳೆ ಪತ್ತೆಯಾಗಿದೆ.
ಕೊಲೆಯ ಸಂಬಂಧ ಮಹಿಳೆಯ ಪತಿ ಮುತ್ತಪ್ಪ ಹುಲ್ಲೊಳ್ಳಿ, ಸಹೋದರ ವೀರಭದ್ರಪ್ಪ ಜಾಲಿಹಾಳನನ್ನು ಬಂಧಿಸಲಾಗಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ಕೇವಲ ಎರಡು ದಿನಗಳಲ್ಲಿಯೇ ಕಲಘಟಗಿ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಶೈಲ್ ಕೌಜಲಗಿ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟಿದೆ.