ಸನವಳ್ಳಿಗಷ್ಟೇ ಸೀಮಿತವಾಯ್ತಾ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧದ ಸಮರ..? ಸಾಹೇಬ್ರೆ, ತಾಲೂಕಿನೆಲ್ಲೆಡೆ ಇದೆ ಅಕ್ರಮ ಭಟ್ಟಿಗಳು..! ಕ್ರಮ ಯಾವಾಗ..?

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಹೆಜ್ಜೆಗೊಂದರಂತೆ ಇರೋ ಅಕ್ರಮ ಇಟ್ಟಿಗೆ ಭಟ್ಟಿಗಳ‌ ಮೇಲೆ ತಹಶೀಲ್ದಾರ್ ಶಂಕರ್ ಗೌಡಿ ಸಾಹೇಬ್ರು ಸಮರ ಸಾರಿದ್ದಾರೆ‌. ನಿನ್ನೆ ಇಡೀ ಸನವಳ್ಳಿಯ ಅಕ್ರಮ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಛಳಿ ಬಿಡಿಸಿದ್ದಾರೆ. ಹೀಗಾಗಿ, ತಾಲೂಕಿನ ಮಂದಿ ತಹಶೀಲ್ದಾರರ ಖಡಕ್ ಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸ್ತಿದಾರೆ.

ನಿಜ..!
ತಾಲೂಕಿನ ಸನವಳ್ಳಿಯಲ್ಲಿ ಇಟ್ಟಿಗೆ ಭಟ್ಟಿಗಳ ರಾಜಾರೋಶತನಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದ್ದೇ ಇದೆ. ಅದನ್ನ ಇಡೀ ತಾಲೂಕಿನ ಜನ ಬಯಸಿದ್ರು. ಕಾರಣವೆಂದ್ರೆ, ಅಲ್ಲಿ ಸಾಕಷ್ಟು ಕಾನೂನುಗಳ ಉಲ್ಲಂಘನೆ ಆಗ್ತಿತ್ತು. ಆದ್ರೆ, ಇದೇಲ್ಲ ಈ ಹಿಂದಿನ ಎಲ್ಲಾ ಅಧಿಕಾರಿಗಳಿಗೂ ತಿಂಗಳಿಗೆ ಒಂದಿಷ್ಟು ಕೈ ಬಿಸಿ ಮಾಡಿದ್ರೆ ಮುಗೀತು ನಮ್ಮನ್ನ ಕೇಳೋರ್ಯಾರು ಅನ್ನೋ‌ ಮನಸ್ಥಿತಿ ಅಕ್ರಮ ಇಟ್ಟಿಗೆ ಅಡ್ಡೆಗಳ ಮಾಲೀಕರಿಗೆ ಗಟ್ಟಿ ದೈರ್ಯ ತುಂಬಿತ್ತು. ಹೀಗಾಗಿ, ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ಭಟ್ಟಿಗಳು ಹೊಗೆ ಉಗುಳುತ್ತಿದ್ದವು. ಅದೇಷ್ಟೋ ಅರಣ್ಯ ಸಂಪತ್ತು ಲೂಟಿಯಾಗ್ತಿತ್ತು. ಪರಿಸರಕ್ಕೆ ಧಕ್ಕೆ ಯಾಗ್ತಿತ್ತು. ಆದ್ರೆ, ಸಧ್ಯ ತಹಶೀಲ್ದಾರ್ ಸಾಹೇಬ್ರು ಇಂತಹ ಅಕ್ರಮಿಗಳ ಬೆನ್ನು ಬಿದ್ದಿದ್ದಾರೆ ಅನ್ನೋದೇ ಸಮಾಧಾನಕರ ಸಂಗತಿ.

ಅವನೊಬ್ಬನ ಮೇಲೆ..!
ಅಷ್ಟಕ್ಕೂ, ಸನವಳ್ಳಿಯ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಈಗಾಗಲೇ ಖಡಕ್ ಕ್ರಮಕ್ಕೆ ಮುಂದಾಗಿರೋ ತಹಶೀಲ್ದಾರ್ ಸಾಹೇಬ್ರಿಗೆ, ಈ ಹಿಂದೆ ಸನವಳ್ಳಿಗೆ ಇದೇ ಅಕ್ರಮ ಭಟ್ಟಿಗಳ ವಿರುದ್ಧ ದಾಳಿಗೆ ಹೋದಾಗ ಅವನೊಬ್ಬ ಮಾಲೀಕ ಎದ್ವಾ ತದ್ವಾ ಮಾತಾಡಿದ್ದ. ಹೀಗಾಗಿನೇ ಅವತ್ತು ತಹಶೀಲ್ದಾರ್ ಸಾಹೇಬ್ರು ಆತನ ವಿರುದ್ಧ ದೂರು ಕೂಡ ದಾಖಲಿಸಿದ್ರು.

ಜಿದ್ದಿಗೆ ಬಿದ್ರಾ ತಹಶೀಲ್ದಾರ್..?
ಆದ್ರೆ, ಅವತ್ತಿನ ಘಟನೆ ತಹಶೀಲ್ಧಾರ್ ಸಾಹೇಬ್ರಿಗೆ ಇನ್ನಿಲ್ಲದ ಆಕ್ರೋಶ ಹುಟ್ಟುವಂತೆ ಮಾಡಿತ್ತು. ಹೀಗಾಗಿನೇ, ಸನವಳ್ಳಿಯ ಅಷ್ಟೂ ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ಇನ್ನಿಲ್ಲದಂತೆ ಹುಟ್ಟಡಗಿಸುವ ಜಿದ್ದಿಗೆ ಬಿದ್ದರೆನೋ..? ಗುರುವಾರವೂ ಕೂಡ ಸಾಹೇಬ್ರು, ಅಲ್ಲಿನ ಅಕ್ರಮ ಇಟ್ಟಿಗೆ ಭಟ್ಟಿಗಳ‌ ಮಾಲೀಕರಿಗೆ ಖಡಕ್ ವಾರ್ನ್ ಮಾಡಿ ಬಂದಿದ್ದಾರಂತೆ. ನಾನು ಇನ್ನೊಮ್ಮೆ ಬಂದಾಗ ಇಲ್ಲಿ ಯಾವ ಭಟ್ಟಿಗಳೂ ಕಾಣೋ ಹಾಗಿಲ್ಲ, ನೀವಾಗ್ಲೇ ತೆಗಿತಿರೋ ಅಥವಾ ನಾನೇ ಮುಂದಿನ ಹೆಜ್ಜೆ ಇಡಲೊ ಅಂತಾ ಖಡಕ್ಕಾಗೇ ಹೇಳಿ ಬಂದಿದ್ದಾರಂತೆ. ಇದು ನಿಜಕ್ಕೂ ಅಲ್ಲಿನ ಮಾಲೀಕರುಗಳಿಗೆ ಎದೆ ನಡುಗಿಸಿದೆ.

ಸಾಹೇಬ್ರೇ, ಸನವಳ್ಳಿ ಅಷ್ಟೇ ಅಲ್ಲ..!
ಅಸಲು, ಇದು ತಾಲೂಕಿನ ಸನವಳ್ಳಿಯಲ್ಲಿರೋ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧವಾಗಿ ಅಷ್ಟೇ ನಡಿಯುವ ಯುದ್ಧವಾಗದಿರಲಿ. ಸದ್ಯ ತಾಲೂಕಿನ ಹಲವು ಕಡೆ ಇಂತದ್ದೇ ಅಕ್ರಮ‌ ಅಡ್ಡೆಗಳು ಯಾರ ಹಂಗಿಲ್ಲದೇ, ಯಾರ ಭಯವಿಲ್ಲದೇ ಲಂಗು ಲಗಾಮಿಲ್ಲದೇ ತಲೆ ಎತ್ತಿ ಮೆರೆಯುತ್ತಿವೆ. ನಿಜ ಅಂದ್ರೆ, ಅಂತಹ ಇಟ್ಟಿಗೆ ಭಟ್ಟಿಗಳ ವಿರುದ್ಧವೂ ಇಂತದ್ದೇ ಕ್ರಮದ ಅವಶ್ಯಕತೆ ಇದೆ. ಓಣಿಕೇರಿ, ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿ ಸೇರಿದಂತೆ ಹಲವು ಭಾಗಗಳಲ್ಲಿ ಇಂತದ್ದೇ ಅದೇಷ್ಟೋ ಅಕ್ರಮ ಇಟ್ಟಿಗೆ ಭಟ್ಟಿಗಳು ರಾಜಾರೋಶವಾಗಿ ದಂಧೆಗಿಳಿದಿವೆ. ಅಂತವುಗಳಿಗೂ ಮಾನ್ಯ ತಹಶೀಲ್ದಾರ್ ಸಾಹೇಬ್ರು ಕಣ್ಣು ಹಾಯಿಸಬೇಕಿದೆ.

ರಾಜಕೀಯ ಒತ್ತಡಕ್ಕೆ ಮಣಿಯದಿರಿ..!
ಇನ್ನು, ಕೇವಲ ಸನವಳ್ಳಿ ಅಕ್ರಮ ಇಟ್ಟಿಗೆ ಭಟ್ಟಿಗಳ ಕಡಿವಾಣಕ್ಕೆ ಟೊಂಕ ಕಟ್ಟಿ ನಿಂತಿರೋ ತಹಶೀಲ್ದಾರ್ ಸಾಹೇಬ್ರಿಗೆ ಒಂದಿಷ್ಟು ರಾಜಕೀಯ ಒತ್ತಡಗಳೂ ಸಹಜವಾಗೇ ಬರ್ತಿವೆ. ಅದು ಸಹಜವೂ ಕೂಡ. ಆದ್ರೆ, ಅದೇಂತದ್ದೇ ರಾಜಕೀಯ ಒತ್ತಡ ಬಂದ್ರೂ ಕಾನೂನಾತ್ಮಕವಾಗಿ ಕ್ರಮ ಗಟ್ಟಿಯಾಗಿರಲಿ ಅನ್ನೋದು ಇಡೀ ತಾಲೂಕಿನ ಜನರ ಆಶಯ‌. ಇದು ಕೇವಲ ಒಂದೆರಡು ದಿನಕ್ಕೆ ಸೀಮಿತವಾಗಿರದೇ ಇಡೀ ತಾಲೂಕಿನಲ್ಲಿರೋ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಕ್ರಮ ಕೈಗೊಳ್ಳುವಂತಾಗಲಿ. ಇದು ಮುಂಡಗೋಡ ತಹಶೀಲ್ದಾರ್ ಸಾಹೇಬ್ರಿಗೆ ಇಡೀ ಪರಿಸರ ಪ್ರಿಯರ ಮನವಿ.

error: Content is protected !!