ಮುಂಡಗೋಡ: ಯಲ್ಲಾಪುರ ಕ್ಷೇತ್ರದಲ್ಲಿ
ನಿಮಗೆ ಗಾಂಧಿಗಿರಿ ಬೇಕಾ..? ದಾದಾಗಿರಿ ಬೇಕಾ..? ಅಂತಾ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರಶ್ನಿಸಿದ್ರು, ಈ ಕ್ಷೇತ್ರದಲ್ಲಿ ಒಂದು ಕಡೆ ದುಡ್ಡು, ಮತ್ತೊಂದು ಕಡೆ ಧರ್ಮದ ಚುನಾವಣೆ ನಡೆಯುತ್ತಿದೆ ಪ್ರತಿಯೊಬ್ಬರೂ ಆ ದುಡ್ಡನ್ನು ಸೋಲಿಸಲು ಸಾಲ ಮಾಡಿಯಾದರೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು ಗೆಲ್ಲಿಸಬೇಕು ಅಂತಾ ಸಂತೋಷ ಲಾಡ್ ಕರೆ ನೀಡಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಅವರು ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧಿಗಿರಿ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತದಿಂದ ಆಯ್ಕೆ ಮಾಡಿ. ನಮ್ಮ ಯಾವ ಕಾರ್ಯಕರ್ತರೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಸುಳ್ಳು ಸುಳ್ಳು ಪ್ರಚಾರ ಮಾಡುತ್ತಾರೆ ಆದರೆ ಅಭಿವೃದ್ಧಿ ಮಾತ್ರ ಏನೂ ಇಲ್ಲ. ಟಿವಿ, ಪತ್ರಿಕೆ ಮೂಲಕ ಪ್ರಚಾರ ಮಾಡಿ ಆಮೇಲೆ ದುಡ್ಡಿನ ಮೂಲಕ ಮತದಾರರನ್ನು ಹಾದಿ ತಪ್ಪಿಸುತ್ತಾರೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರ ಬಳಿ ಬೇರೇನೂ ಮಂತ್ರವಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.
ಕೇಂದ್ರದಲ್ಲಿ ಮೋದಿಯವರ ಸರ್ಕಾರ 9 ವರ್ಷ ಅವಧಿಯಲ್ಲಿ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಆದರೆ ಮನಮೋಹನ ಸಿಂಗ್ ಸರ್ಕಾರದಲ್ಲಿ 73ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ 8500ಕೋಟಿ ರೂ. ಸಾಲ ಮನ್ನಾ ಮಾಡಿದೆ. ಬಿಜೆಪಿ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ನೀಡಲಿಲ್ಲ. ಆದರೆ, ಕಾಂಗ್ರೆಸ್‌ನಿಂದ ಈಗಾಗಲೆ ಮನೆ-ಮನೆಗೆ ಗ್ಯಾರಂಟಿ ಕಾರ್ಡ್ ನೀಡಲಾಗಿದ್ದು ಪ್ರತಿಯೊಂದು ಮನೆಗೂ 5ಸಾವಿರ ರೂ.ಗಳಷ್ಟು ಸವಲತ್ತುಗಳನ್ನು ಒದಗಿಸಲಾಗುವುದು.
ಹೀಗಾಗಿ ಕಾರ್ಯರ್ತರು ಯೋಜನೆ ಬಗ್ಗೆ ಅಕ್ಕ-ಪಕ್ಕದ ಮನೆಗಳಿಗೆ ಮನವರಿಕೆ ಮಾಡಬೇಕು. ಸ್ವಾಭಿಮಾನದ ನಮ್ಮ ಚುನಾವಣೆ ವಿಭಿನ್ನವಾಗಿರಬೇಕು. ಹಲವಾರು ಜನಪರ ಕಾರ್ಯ ಮಾಡಿರುವ ವಿ.ಎಸ್.ಪಾಟೀಲ ಸರಳ ಸಜ್ಜನಿಕೆ ವ್ಯಕ್ತಿ. ನಿಮ್ಮ ಮತ ಅವರಿಗೆ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿ ಕೊಡಬೇಕು ಅಂತಾ ಮನವಿ ಮಾಡಿದ್ರು.
ಇನ್ನು ಅಭ್ಯರ್ಥಿ ವಿ.ಎಸ್.ಪಾಟೀಲ ಮಾತನಾಡಿ ಅಭಿವೃದ್ಧಿ ನಿರಂತರ. ಹಣ ಬಲವೋ ಜನ ಬಲವೋ ಎಂಬ ಚುನಾವಣೆ ನಡೆಯಲಿದೆ. 40ಪರ್ಸೆಂಟ್ ಸರ್ಕಾರವೆಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಭಗೀರಥ ಎಂದು ಹೇಳಲಾತ್ತಿರುವ ಕ್ಷೇತ್ರದಲ್ಲಿ ಕೆರೆಯಲ್ಲಿ ನೀರೇ ಇಲ್ಲ. ರೈತರ ಜೇಬಿನಲ್ಲಿ ನೀರು ತುಂಬಿಸಿದ್ದಾರೆ. ಯಾರೇ ಕೂಗಾಡಲಿ ಅನ್ನುವ ಹಾಡು ನನ್ನ ಕೆಲಸ ನಾ ಮಾಡುತ್ತೇನೆ ನನಗೆ ಸಂಬಂಧವಿಲ್ಲ ಎನ್ನುವಂತಿದೆ. ಕರೋನಾ ಬಂದಾಗ ಅವರಿಗೆ ಹಬ್ಬದ ವಾತಾವರಣ. ಕಿಟ್‌ನಲ್ಲಿಯೂ ಪರ್ಸೆಂಟೇಜ್ ಹೊಡೆದರು. ಪ್ರತಿಯೊಂದರಲ್ಲಿನ ನಿಮ್ಮ ಜಿ.ಎಸ್.ಟಿ. ಹಣವನ್ನೇ ನಿಮಗೆ ಕೊಡುತ್ತಾರೆ ಅಂತಾ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಬಂದರೆ ಯೋಜನೆಗಳ ಪ್ರಯೋಜನ ಪಡೆಯಬಹುದು. ಬಂದ ಅನುದಾನ ನೇರವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದರು.
ಇದಕ್ಕೂ ಮುನ್ನ ವಿ.ಎಸ್.ಪಾಟೀಲ ಮತ್ತು ಸಂತೋಷ ಲಾಡ್ ಅವರನ್ನು ಡೊಳ್ಳಿನ ಮೆರವಣಿಗೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿಕೊಂಡರು. ನಂತರ ಗ್ರಾಮದ ಮಾರೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಬ್ಲಾಕ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಎಚ್.ಎಮ್.ನಾಯ್ಕ, ಮರಿಯೋಜಿರಾವ್, ಎಮ್.ಎನ್.ದುಂಡಶಿ, ಬಸವರಾಜ ನಡುವಿನಮನಿ, ನಿಂಗಜ್ಜ ಕೋಣನಕೇರಿ, ಗ್ರಾ.ಪಂ. ಉಪಾಧ್ಯಕ್ಷೆ ಗಂಗವ್ವ, ರಾಮಕೃಷ್ಣ ಮೂಲಿಮನಿ, ಬಾಪೂಗೌಡ ಪಾಟೀಲ, ಕೃಷ್ಣ ಹಿರೇಹಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.