ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ನಿರೀಕ್ಷಿಸಿದಂತೆ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಕನ್ಪರ್ಮ್ ಆಗಿದೆ. ಈ ಮೂಲಕ ಕ್ಷೇತ್ರದಲ್ಲಿ ಸುಳಿದಾಡುತ್ತಿದ್ದ ಹಲವು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಕಾಂಗ್ರೆಸ್ ಕೊನೆಗೂ “ನಮ್ಮ ಅಭ್ಯರ್ಥಿ” ಇವರೇ ಅಂತಾ ಅಧಿಕೃತ ಮುದ್ರೆ ಒತ್ತಿದೆ. ಇದ್ರ ಜೊತೆ ಯಲ್ಲಾಪುರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗುವತ್ತ ಮತ್ತೆ ಹೊರಳಿಕೊಂಡಿದೆ.
ಮೂರು ತಿಂಗಳ ಹಿಂದೆಯೇ..!
ಅಸಲಿಗೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿ.ಎಸ್.ಪಾಟೀಲರಿಗೆ ಅವತ್ತೇ ಇಂತಹದ್ದೊಂದು “ಗ್ಯಾರಂಟಿ” ನೀಡಲಾಗಿತ್ತಂತೆ. ನೀವು ಯಲ್ಲಾಪುರ ಕ್ಷೇತ್ರದ ಮುಂದಿನ ಅಭ್ಯರ್ಥಿಯಾಗೋದು ಪಕ್ಕಾ, ಯಾವುದೇ ಅಳುಕಿಲ್ಲದೇ ಪಕ್ಷ ಸೇರ್ಪಡೆಯಾಗಿ ಅಂತಾ ರಾಜ್ಯ ನಾಯಕರು ಇನ್ವೈಟ್ ಮಾಡಿದ್ರಂತೆ. ಹಾಗಂತ, ವಿ.ಎಸ್.ಪಾಟೀಲರ ಆಪ್ತ ಬಳಗ ಹೇಳಿಕೊಂಡಿದೆ. ಸದ್ಯ ಕಾಂಗ್ರೆಸ್ ಟಿಕೆಟ್ ಸಿಕ್ಕಿರೋದು ಕ್ಷೇತ್ರದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.
ನೆಕ್ ಟೂ ನೆಕ್…!
ಅಂದಹಾಗೆ, ಯಲ್ಲಾಪುರ ಕ್ಷೇತ್ರದಲ್ಲಿ ಈ ಬಾರಿ ಇನ್ನಿಲ್ಲದ ಜಿದ್ದಾ ಜಿದ್ದು ಏರ್ಪಡುವ ಎಲ್ಲಾ ಲಕ್ಷಣ ಇದೆ. ಅದ್ಯಾರೇ ಗೆದ್ರೂ ಸಾವಿರಗಳ ಆಚೆ ಈಚೆಗಿನ ಲೆಕ್ಕವಷ್ಟೇ ಎನ್ನಲಾಗ್ತಿದೆ. ನೆಕ್ ಟೂ ನೆಕ್ ಫೈಟ್ ಫಿಕ್ಸಾಗಿದೆ. ಅದ್ಯಾರು, ಅದೇಷ್ಟೇ ಕೇಕೆ ಹಾಕಿ, ಚೀರಾಡಿದ್ರೂ “ಅಂದರ್ ಕೀ ಬಾತ್” ಗಳ ಆಟಗಳು ಕ್ಷೇತ್ರದಲ್ಲಿ “ಅಂದರ್ ಬಾಹರ್” ಆಡಲಿವೆ. ಇಲ್ಲಿ, ಗ್ರೌಂಡ್ ರಿಪೋರ್ಟೇ ಬೇರೆಯಿದೆ, ತೋರಿಕೆಯ ಜೈಕಾರಗಳು, ಬಣ್ಣ ಬಣ್ಣದ ಹಾರ ತುರಾಯಿಗಳನ್ನೇಲ್ಲ ಲೆಕ್ಕಕ್ಕೆ ಹಿಡಿಯೋದೇ ಕಷ್ಟವಾಗಿದೆ. ಅಸಲೀ ಮತದಾರನ ಮನೆಯಂಗಳದ ಚರ್ಚೆಗಳೇ ಬೇರೆಯದ್ದಿದೆ. ಹೀಗಾಗಿ, ಈ ಬಾರಿಯ ಎಲೆಕ್ಷನ್ ನಲ್ಲಿ ಹಲವು ರೋಚಕ ಸಂಗತಿಗಳೂ ಸಾಕ್ಷಿಯಾಗಲಿವೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಪ್ರಶಾಂತ.. ಪ್ರಯಾಸ..!
ಅಸಲು ಈಹಿಂದೆ, ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಒಂದಿಷ್ಟು ಓಡಾಡಿಕೊಂಡು ಕ್ಷೇತ್ರ ಗಟ್ಟಿಗೊಳಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಆದ್ರೆ, ಅದ್ಯಾಕೋ ಗೊತ್ತಿಲ್ಲ ಪ್ರಶಾಂತಣ್ಣನಿಗೆ ಯಲ್ಲಾಪುರ ಕ್ಷೇತ್ರ ಅಪ್ಪಿ ಆಲಂಗಿಸಿಕೊಳ್ಳಲೇ ಇಲ್ಲ. ಬದಲಾಗಿ, ಕ್ಷೇತ್ರದ ಹಲವು ಕಾಂಗ್ರೆಸ್ಸಿಗರ ತೆರೆಮರೆಯ ಆಟಗಳಿಗೆ ಪ್ರಶಾಂತಣ್ಣನ ಪ್ರಯಾಸದ ಪ್ರಯಾಣ ಅಂತ್ಯವಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಅಕ್ಷರಶಃ ನಿರ್ಜೀವಗೊಳ್ಳುವ ಹಂತದಲ್ಲಿದ್ದ ಕಾಂಗ್ರೆಸ್ ಗೆ ಬಹುಶಃ ವಿ.ಎಸ್.ಪಾಟೀಲ್ ಹಾಗೂ ಶ್ರೀನಿವಾಸ್ ಧಾತ್ರಿಯವರ ಎಂಟ್ರಿ ಒಂದಿಷ್ಟು ಆಕ್ಸಿಜನ್ ನೀಡಿದೆ.
ಕಳೆದ ಉಪಚುನಾವಣೆಯಲ್ಲಿ..!
ಯಾರು ಏನೇ ಅಂದ್ರೂ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ತನ್ನದೇ ಆಗಿರೋ ಓಟ್ ಬ್ಯಾಂಕ್ ಇದೆ. ಇದು ಕಳೆದ ಉಪಚುನಾವಣೆಯಲ್ಲಿ ಸಾಬೀತಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ, ಶಿವರಾಮ್ ಹೆಬ್ಬಾರ್ ಉಪಚುನಾವಣೆಯಲ್ಲಿ
ಬಿಜೆಪಿಯ ಒಮ್ಮತದ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಅವತ್ತು ಇಡೀ ಕ್ಷೇತ್ರದಲ್ಲಿ ಬಿಜೆಪಿ ಅನ್ನೋದು ಭದ್ರ ನೆಲೆ ಕಂಡುಕೊಂಡಾಗಿತ್ತು. ವಿ.ಎಸ್.ಪಾಟೀಲ್ ಸೇರಿದಂತೆ, ಪ್ರತಿಯೊಬ್ಬ ಕಾರ್ಯಕರ್ತನೂ ಆ ಹೊತ್ತಲ್ಲಿ ಬಿಜೆಪಿಗಾಗಿ ಹಗಲಿರುಳೂ ದುಡಿದಿದ್ದರು. ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದ ಕಾರಣ ಇಡೀ ಸಚಿವ ಸಂಪುಟವೇ ಹೆಬ್ಬಾರ್ ಸಾಹೇಬ್ರ ಬೆನ್ನಿಗೆ ನಿಂತಿತ್ತು. ಹೀಗಿರೋವಾಗಲೇ ಶಿರಸಿ ಮೂಲದ, ಅಂದ್ರೆ ಯಲ್ಲಾಪುರ ಕ್ಷೇತ್ರದ ಹೊರಗಿನ ಭೀಮಣ್ಣ ನಾಯ್ಕ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ರು. ಅಸಲು, ಆ ಹೊತ್ತಲ್ಲಿ ಕಾಂಗ್ರೆಸ್ 5 ಸಾವಿರ ಮತ ಪಡಿಯೋಕೂ ಸಾಧ್ಯವಿಲ್ಲ ಅನ್ನೋ ಮಾತುಗಳಿದ್ದವು. ಆದ್ರೆ, ಫಲಿತಾಂಶ ಬಂದಾಗ ಕಾಂಗ್ರೆಸ್ ಬರೋಬ್ಬರಿ 50 ಸಾವಿರ ಆಸು ಪಾಸಿನಲ್ಲಿ ಮತ ಗಳಿಸಿತ್ತು. ಹೀಗಾಗಿ, ಅವತ್ತೇ ಅದೊಂದು ಕನ್ಪರ್ಮ್ ಆಗಿತ್ತು. ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನದೇ ಆದ ಸಾಂಪ್ರದಾಯಿಕ ಮತಗಳ ನೆಲೆ ಇನ್ನೂ ಉಳಿಸಿಕೊಂಡಿದೆ ಅನ್ನೋದು.
ಇದು ಲೆಕ್ಕಾಚಾರ..!
ಸದ್ಯ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಸಚಿವರಾಗಿ ಕ್ಷೇತ್ರದ ಜನರ ಮನಸಿಗೆ ಹತ್ತಿರವಾಗಿರೋ ಶಿವರಾಮ್ ಹೆಬ್ಬಾರ್ ಸದ್ಯ ಮುಂಚೂಣಿಯಲ್ಲಿದ್ದಾರೆ. ಕ್ಷೇತ್ರದಲ್ಲಿ “ಮತ್ತೊಮ್ಮೆ ಹೆಬ್ಬಾರ್” ಅನ್ನೋ ಶ್ಲೋಗನ್ನು ಹರಿದಾಡ್ತಿದೆ. ಆದ್ರೆ ಇದೇಲ್ಲದರ ಮದ್ಯೆ ಒಂದಿಷ್ಟು ಬದಲಾವಣೆಗಳ ಗುದ್ದು, ಖುದ್ದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವೂ ಆಗಿದೆ. ಇಲ್ಲಿ, ಆಡಳಿತ ವಿರೋಧಿ ಅಲೆಯ ಜೊತೆ, ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿರೋದು, ಅದ್ಯಾವುದೇ ಆ್ಯಂಗಲ್ ನಿಂದ ಲೆಕ್ಕ ಹಾಕಿದ್ರೂ ಬಿಜೆಪಿಗೆ ಠಕ್ಕರ್ ಗ್ಯಾರಂಟಿ ಅನ್ನುವಂತಾಗಿದೆ. ಜೊತೆಗೆ ಕೆಲವು ಒಳಮಸಲತ್ತುಗಳು ಬಿಜೆಪಿಯ ಗೆಲುವಿಗೆ ತೊಡಕಾಗತ್ತಾ..? ಗೊತ್ತಿಲ್ಲ. ಆದ್ರೆ, ಅದ್ಯಾರೇ ಗೆದ್ರೂ ಕೂದಲೆಳೆ ಅಂತರದಲ್ಲಿ ಅನ್ನೋದು ಮಾತ್ರ ಸದ್ಯದ ರಾಜಕೀಯ ಪಡಸಾಲೆಯ ವಾಸ್ತವ.
*ಸಂತೋಷ ಶೆಟ್ಟೆಪ್ಪನವರ್