ಮುಂಡಗೋಡ: ಕಳೆದ ಹಲವು ದಿನಗಳಿಂದ ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯದಿಂದ ಬಳಲುತ್ತಿದ್ದ 4 ವರ್ಷದ ಗಂಡು ಆನೆ ಮೃತಪಟ್ಟಿದೆ. ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಗಂಡು ಆನೆ ಸಾವನ್ನಪ್ಪಿದೆ.
ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಕಲಘಟಗಿ ತಾಲೂಕಿನ ಅರಣ್ಯಕ್ಕೆ ಬಂದಿತ್ತು. ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆನೆ ಮೃತಪಟ್ಟಿದೆ.
ಅಂದಹಾಗೆ, ಮೂರು ತಿಂಗಳ ಹಿಂದೆ ಕಲಘಟಗಿ ಅರಣ್ಯ ಪ್ರದೇಶದಲ್ಲಿ ಇಂತದ್ದೇ ಆನೆಮರಿಯೊಂದು ಮೃತಪಟ್ಟಿತ್ತು. ಹೀಗಾಗಿ ಇದು ಎರಡನೇ ಘಟನೆ ಆಗಿದೆ.
ಮೃತ ಆನೆ 4 ವರ್ಷದ ಗಂಡು ಸಲಗ ಅರಣ್ಯದಲ್ಲಿ ಆಹಾರ ಸೇವನೆ ವೇಳೆ ಸೊಂಡಿಲು ಗಾಯ ಮಾಡಿಕೊಂಡಿತ್ತು. ಅರಣ್ಯ ಸಿಬ್ಬಂದಿ ಚಿಕಿತ್ಸೆ-ಆರೈಕೆ ನೀಡಿದ್ದರು. ಇನ್ನೂ ಹೆಚ್ಚಿನ ಚಿಕಿತ್ಸೆಗೆ ತಜ್ಞ ವೈದ್ಯರ ತಂಡ ಬರಬೇಕಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ. ನಾಳೆ ಆನೆ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಎಸ್.ಎಂ. ಸಂತೋಷ ತಿಳಿಸಿದ್ದಾರೆ.