ನಿಜಕ್ಕೂ ಮುಂಡಗೋಡಿಗರ ಪಾಲಿಗೆ ಇವತ್ತು ಕರಾಳ ದಿನ. ಆಡಾಡುತ್ತಲೇ ಮನೆ ಮಕ್ಕಳನ್ನು ಕಳೆದುಕೊಂಡ ಕೆಟ್ಟ ದಿನ. ಬಹುಶಃ ಇವತ್ತು ಮುಂಡಗೋಡಿನಲ್ಲಿ ಯಾರೊಬ್ಬರ ಮುಖದಲ್ಲಿ ನಗು ಅಪರೂಪವಾಗಿತ್ತು. ಬರೀ ಆತಂಕ, ನಮ್ಮವರನ್ನು ಕಳೆದುಕೊಂಡ ನೋವಿನ ಛಾಯೆ ತುಂಬಿತ್ತು. ಆ ನೋವಿನಲ್ಲೇ ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ, ಮೂವರೂ ಯುವಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಜಾತ್ರೆಗೆ ಹೋಗಿದ್ದವರು..!
ಜಾತ್ರೆಗೆ ಹೋಗಿದ್ದ ಆ ಐದು ಸ್ನೇಹಿತರು ಅದ್ಯಾವ ಗಳಿಗೆಯಲ್ಲಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದ್ದರೋ ಗೊತ್ತಿಲ್ಲ. ಜಾತ್ರೆಯ ಸಂಭ್ರಮಕ್ಕೆಂದು ಹೋಗಿದ್ದವರು ಇಡೀ ಮುಂಡಗೋಡನ್ನೇ ನೋವಿನ ಕಡಲಲ್ಲಿ ತೇಲಿಸಿ ಹೋಗಿದ್ದಾರೆ. ಪಾಳಾ ಸಮೀಪ ಐವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಐವರಲ್ಲಿ ಮೂವರು ದಾರುಣ ಸಾವು ಕಂಡಿದ್ದಾರೆ. ಅದ್ಯಾರ ಪುಣ್ಯವೋ ಗೊತ್ತಿಲ್ಲ, ಇನ್ನುಳಿದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆ ಮೂವರೂ..!
ನಿನ್ನೆ ಬುಧವಾರ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಸ್ಥಳದಲ್ಲೇ ಸಾವು ಕಂಡಿದ್ದರು. ಮಹೇಶ್ ಗಾಣಿಗೇರ್, ಗಣೇಶ್ ಗಾಣಿಗೇರ್ ಸ್ಥಳದಲ್ಲೇ ಸಾವು ಕಂಡಿದ್ದರು, ಅದ್ರಂತೆ, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಯುವಕ ಶಂಕರಯ್ಯ ಹಿರೇಮಠ ಗಂಭೀರ ಗಾಯಗೊಂಡಿದ್ದ. ಹೀಗಾಗಿ, ಕಿಮ್ಸ್ ನಲ್ಲಿ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೂಡ ಇವತ್ತು ಅಸು ನೀಗಿದ್ದ. ಹೀಗಾಗಿ, ಈ ಮೂವರೂ ಯುವಕರ ಸಾವು ಇಡೀ ಮುಂಡಗೋಡಿಗರನ್ನ ದಿಗ್ಭ್ರಮೆಗೆ ದೂಡಿತ್ತು.
ಅಂತ್ಯ ಸಂಸ್ಕಾರ..!
ಮೂವರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಅದ್ರಮದ್ಯೆ ನಿನ್ನೆ ರಾತ್ರಿಯಿಂದಲೂ ಮುಂಡಗೋಡಿನ ಬಹುತೇಕ ಯುವಕರ ಕಣ್ಣಲ್ಲಿ ಕಣ್ಣೀರ ಹನಿಗಳು ನಿಂತಿರಲೇ ಇಲ್ಲ.. ನಮ್ಮವರನ್ನು ಕಳೆದುಕೊಂಡ ನೋವಿನಲ್ಲೇ ಮೂವರೂ ಯುವಕರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅಂತ್ಯಸಂಸ್ಕಾರದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಭಾಗಿಯಾಗಿತ್ತು..
ಶೃದ್ಧಾಂಜಲಿ..!
ಇನ್ನು, ಮೂವರೂ ಯುವಕರನ್ನು ಕಳೆದುಕೊಂಡ ಅಪಾರ ಸ್ನೇಹಿತರು, ಹಿತೈಸಿಗಳು ಸೇರಿದಂತೆ ನುರಾರು ಜನ ಸಂಜೆ ಶಿವಾಜಿ ವೃತ್ತದ ಬಳಿ ಮೂವರೂ ಯುವಕರಿಗೆ ಶೃದ್ಧಾಂಜಲಿ ಸಲ್ಲಿಸಿದ್ರು. ಮೃತ ಯುವಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮತ್ತೊಮ್ಮೆ ಹುಟ್ಟಿ ಬನ್ನಿ ಅಂತಾ ಕಣ್ಣಾಲೆಯಲ್ಲಿ ಹನಿ ಜಿನುಗಿಸುತ್ತಲೇ ಬೇಡಿಕೊಂಡ್ರು.
ಮತ್ತೊಮ್ಮೆ ಹುಟ್ಟಿಬನ್ನಿ ಗೆಳೆಯರೇ, ಇಂತಹ ಕರಾಳ ದಿನ ಮುಂಡಗೋಡಿಗೆ ಮತ್ತೆಂದೂ ಬಾರದಿರಲಿ..!