ಮುಂಡಗೋಡ: ದೇಶದಲ್ಲಿ ಮಾನವ ಧರ್ಮ ಹುಟ್ಟಿದಾಗಿನಿಂದ ವೀರಶೈವ ಸಮಾಜ ಹುಟ್ಟಿಕೊಂಡಿದೆ ವೀರಶೈವ ಸನಾತನ ಸಂಸ್ಕೃತ ಪದ ಎಂದು ಶಿರಸಿ ಬಣ್ಣದ ಮಠ ಚೌಕಿಮಠದ ಶಿವಲಿಂಗ ಮಹಾಸ್ವಾಮೀಜಿ ನುಡಿದರು.
ಅವ್ರು ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಬೇಡಜಂಗಮ ಒಕ್ಕೂಟದ ಜಿಲ್ಲಾ ಸಮಾವೇಶ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಲ್ಲಿ ಅದ್ಭುತ ಶಕ್ತಿ ಇದೆ. ವೀರಶಕ್ತಿ ಪ್ರಬಲಗೊಳಿಸಿ ಸಮಾಜಕ್ಕೆ ಹಂಚಬೇಕು ಎಂದರು. ಗೋಕರ್ಣ ಹನ್ನೆರಡು ಮಠದ ರೇವಣ್ಣಸಿದ್ದ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ ಪಂಚಾಚಾರ್ಯರು ಪ್ರಪಂಚದ ಗುರುಗಳು. ವೈಮನಸ್ಸು, ದ್ವೇಷ-ಅಸೂಯೆ ಬಿಟ್ಟು ಸಾಮರಸ್ಯ ಜೀವನ ನಡೆಸಬೇಕು. ಜಂಗಮ ಕಾಯಕಗಳ ಬಗ್ಗೆ ನಡೆ-ನುಡಿಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.
ಇನ್ನು ಅಂಬಿಕಾ ನಗರದ ಪಂಚಾಚಾರ್ಯರ ಮಠದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ
ಧರ್ಮವನ್ನು ಅರಿತವರೇ ನಿಜವಾದ ಜಂಗಮರು. ಸಂಸ್ಕಾರವಿಲ್ಲದ ವಿದ್ಯೆಗಿಂತ, ವಿದ್ಯೆಯಿಲ್ಲದ ಸಂಸ್ಕಾರವೇ ಲೇಸು. ಭಕ್ತರು ಜಂಗಮರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಚಾರ ವಿಚಾರವಂತರಾಗಿ ಬಾಳಬೇಕು ಎಂದರು.
ಹನುಮಾಪುರದ ಸೋಮಶೇಖರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ ಧರ್ಮದ ಲಾಂಛನಗಳನ್ನು ಧರಿಸುವ ಸಂಸ್ಕಾರ ಮಕ್ಕಳಿಗೆ ಬೆಳೆಸಬೇಕು ಎಂದರು. ಹುನಗುಂದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತಾ ಹಿರೇಮಠ ಮಾತನಾಡಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಬೇಡಜಂಗಮ ಸಮಾವೇಶ ನಡೆಯುತ್ತಿದೆ.1935ರಲ್ಲಿಯೇ ಕೆಳದರ್ಜೆ ಪಟ್ಟಿಯಲ್ಲಿದ್ದೇವೆ. 15- 20ಸಾವಿರ ಸರ್ಟಿಫಿಕೇಟ್ ಈಗಾಗಲೇ ಪಡೆದಿದ್ದಾರೆ. ಧಾರ್ಮಿಕ ಭಿಕ್ಷಾಟನೆ ಬೇಡಜಂಗಮರ ವೃತ್ತಿ. ಪಂಚಪೀಠಗಳ ಅನುಯಾಯಿಗಳು. ವೀರಶೈವ ಮಠಮಾನ್ಯಗಳಿಂದ ಸರ್ಕಾರ 5 ವರ್ಷಗಳ ಕಾಲ ಕೇಸರಿ ಪತಾಕೆ ಹಾರಿಸಿದೆ ಎಂದರು. ಇದೇ ವೇಳೆ ಸಚಿವ ಶಿವರಾಮ ಹೆಬ್ಬಾರ ಕೂಡ ಮಾತನಾಡಿದರು.
ಈ ವೇಳೆ ರುದ್ರಮುನಿಸ್ವಾಮಿ ಹಿರೇಮಠ, ಗೌರವಾಧ್ಯಕ್ಷ ಎಸ್.ಬಿ.ಹಿರೇಮಠ, ತಾಲೂಕು ಅಧ್ಯಕ್ಷ ಮಂಜಯ್ಯ ಹಿರೇಮಠ, ಬಿ.ಸಿ.ಹಿರೇಮಠ, ಬಸಯ್ಯ ನಡುವಿನಮನಿ, ಬಸವರಾಜ ಒಶಿಮಠ, ಶರಣಬಸಯ್ಯ, ಶಿವಶಂಕ್ರಯ್ಯ, ಮಲ್ಲಿಕಾರ್ಜುನ ಉಪ್ಪಿನಮಠ, ಶಿವದೇವ ದೇಸಾಯಿ ಸ್ವಾಮೀಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಪಂಚಾಕ್ಷರಿ ಹಿರೇಮಠ ಪ್ರಾರ್ಥಿಸಿದರು. ಪರಮೇಶ್ವರಯ್ಯ ಕಾನಳ್ಳಿಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಸಯ್ಯ ನಾಗಶೆಟ್ಟಿಕೊಪ್ಪ ನಿರೂಪಿಸಿದರು.
ಇದಕ್ಕೂ ಮುನ್ನ ಪಟ್ಟಣದ ಶ್ರೀವೀರಭದ್ರೇಶ್ವರ-ಬಸವೇಶ್ವರ ದೇವಸ್ಥಾನದಿಂದ ವೀರಗಾಸೆ ತಂಡ ಹಾಗೂ ಕುಂಭಮೇಳ ಮೆರವಣಿಗೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು.