ಭಟ್ಕಳ: ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಭೀಕರ ಹತ್ಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಗಿಳಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ಬಹುಮುಖ್ಯ ಸುಳಿವು ಲಭ್ಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆಗಂತುಕ ಕೊಲೆಯಾದವರ ಸಂಬಂಧಿಯೇ ಆಗಿದ್ದಾನೆ ಅಂತಿದೆ ಪೊಲೀಸ್ ಮೂಲಗಳು.
ಹೌದು, ಭಟ್ಕಳ ತಾಲೂಕಿನ ಹಾಡುವಳ್ಳಿ ಒಣಿಬಾಗಿಲು ನಿವಾಸಿ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್(60), ಅವರ ಮಗ ರಾಘು (ರಾಜು ಭಟ್) (40) ಹಾಗೂ ಸೊಸೆ ಕುಸುಮಾ ಭಟ್(35) ಎಂಬುವ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರೋ ಆರೋಪಿ ಕುಟುಂಬದ ಸಂಬಂಧಿ ಅಂದ್ರೆ, ಶಂಭು ಭಟ್ಟರ ಸೊಸೆ ವಿದ್ಯಾ ಭಟ್ ರ ಸಹೋದರ, ವಿನಯ್ ಶ್ರೀಧರ ಭಟ್ ಅನ್ನೋ ಮಾತು ಕೇಳಿ ಬರ್ತಿದೆ.
ಏನಿದೆ ಕಾರಣ..?
ಅಂದಹಾಗೆ, ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಮರಣದ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು. ಮಾತುಕತೆ ನಂತರ ಕೊಲೆಯಾದ ಶಂಭು ಭಟ್ಟರು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಇದೇ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ್ ಶ್ರೀಧರ ಭಟ್ ಶುಕ್ರವಾರ ಈ ಕೃತ್ಯ ಎಸಗಿದ್ದಾನೆ ಅಂತಾ ಪ್ರಾಥಮಿಕ ತನಿಖೆ ನಡೆಸಿದ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಚಾವ್ ಆಗಿದ್ದು ಆ ಎರಡು ಕಂದಮ್ಮ..!
ಕೃತ್ಯ ನಡೆಯುವ ವೇಳೆ ಹತ್ತು ವರ್ಷದ ಮಗು ಪಕ್ಕದ ಮನೆಯಲ್ಲಿತ್ತು. ನಾಲ್ಕು ವರ್ಷದ ಇನ್ನೊಂದು ಮಗು ಮಲಗಿತ್ತು. ಹೀಗಾಗಿ ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ, ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.