ಇಂದೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್, 250 ಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

ಮುಂಡಗೋಡ: ಇಂದೂರಿನಲ್ಲಿ ಬಿಜೆಪಿಗೆ ಮರ್ಮಾಘಾತವಾಗಿದೆ. ಇಷ್ಟು ದಿನ ಬಲಿಷ್ಟವಾಗಿದ್ದ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಿಜೆಪಿಗೆ ಇವತ್ತು ಕಾಂಗ್ರೆಸ್ ಶಾಕ್ ನೀಡಿದೆ. ಸುಮಾರು 250 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈ ಹಿಡಿದಿದ್ದಾರೆ. ಇದ್ರೊಂದಿಗೆ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಇಂದೂರು, ಕೊಪ್ಪ, ಇಂದಿರಾನಗರದಲ್ಲಿ ಕಾಂಗ್ರೆಸ್ ಗೆ ಬೂಸ್ಟ್ ಸಿಕ್ಕಂತಾಗಿದೆ. ಇಂದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹ್ಮದ್ ರಫೀಕ್ ದೇಸಳ್ಳಿ, ಮಾಜಿ ಉಪಾಧ್ಯಕ್ಷ ಬಿಷ್ಟನಗೌಡ ಪಾಟೀಲ್, ಸೊಸೈಟಿ ಮಾಜಿ ಅಧ್ಯಕ್ಷ ರವಿಚಂದ್ರ ದುಗ್ಗಳ್ಳಿ ಸೇರಿದಂತೆ ಇಂದೂರು, ಕೊಪ್ಪ, ಇಂದಿರಾನಗರದ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ರು.

ವಿ.ಎಸ್. ಪಾಟೀಲ್ ಮಾತು..!
ಇನ್ನು, ಮಾಜಿ ಶಾಸಕ, ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ವಿ.ಎಸ್.ಪಾಟೀಲ್ ಕಾರ್ಯಕ್ರಮದಲ್ಲಿ ಮಾತನಾಡಿದ್ರು, ಜನ ಬಲವೋ..? ಹಣ ಬಲವೋ..? ಎಂಬ ಜಿದ್ದಿನ ಚುನಾವಣೆ ನಮ್ಮ ಮುಂದಿದೆ, ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಅಂತಾ ಮನವಿ ಮಾಡಿದ್ರು.

ರೇಶನ್ ಅಕ್ಕಿಯಲ್ಲೂ ಪರ್ಸೆಂಟೇಜ್..!
ಬಿಜೆಪಿ ಸದ್ಯದ ಶಾಸಕ, ಸಚಿವರು ಕೆರೆ ತುಂಬಿಸುವ ಯೋಜನೆ ತಂದಿದ್ದಾರೆ. ಆಧುನಿಕ ಭಗೀರಥ ಅಂತೇಲ್ಲ ತಮ್ಮನ್ನೇ ತಾವು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದ್ರೆ ಒಂದು ಕೆರೆಗೂ ನೀರು ತುಂಬಿಸುವ ಗ್ಯಾರಂಟಿಯಿಲ್ಲ. ಬಡವರಿಗೆ ಕೊಡುವ ರೇಶನ್ ಅಕ್ಕಿಯನ್ನೂ ಕಡಿಮೆ ಮಾಡಿ ಅದರಲ್ಲೂ ಪರ್ಸಂಟೇಜ್ ತಿನ್ನುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಬಡವರ ಪರವಾಗಿ ಇರೋ ಮಾನವೀಯತೆ ಹೊಂದಿರೋ ಪಕ್ಷ ಅಂದ್ರು.

ಜಿಲ್ಲಾಧ್ಯಕ್ಷರ ಮಾತು..!
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಕ್ಷದ ಸಿದ್ಧಾಂತಗಳನ್ನು ಯಾವತ್ತೂ ಬಿಡಬಾರದು. ಬಿಜೆಪಿ 40 ಪರ್ಸೆಂಟ್ ಪಕ್ಷ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಹುದ್ದೆಗಾಗಿ ಬಂದ ಪಕ್ಷವಲ್ಲ. ತ್ಯಾಗ ಬಲಿದಾನ ಮಾಡಿದ ಪಕ್ಷ. ಎಲ್ಲರನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಮುನ್ನಡೆಯುವ ಪಕ್ಷ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ಹೀಗಾಗಿ, ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸೋಣ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಮ್.ನಾಯ್ಕ ಮಾತನಾಡಿ ಇಂದೂರ ಭಾಗ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಹಿಂಬಾಗಿಲಿನಿಂದ ಅಧಿಕಾರ-ಬಿಷ್ಟನಗೌಡ ವಾಗ್ದಾಳಿ
ವಕೀಲ ಬಿಷ್ಠನಗೌಡ ಪಾಟೀಲ ಮಾತನಾಡಿ ಬಿಜೆಪಿಯಲ್ಲಿರುವವರು ಹಣ ಮತ್ತು ಅಧಿಕಾರದ ಆಸೆ ಇದ್ದವರು. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಹಿಂಬಾಗಿಲಿನಿಂದ ಅಧ್ಯಕ್ಷ ಪದವಿ ಪಡೆದಿದ್ದಾರೆ. ಕೋರ್ಟ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ್ರೂ ಇನ್ನೂ ಕೂಡ ಅಧ್ಯಕ್ಷ ಪದವಿ ಬಿಟ್ಟು ಕೊಟ್ಟಿಲ್ಲ ಹೀಗಾಗಿ, ಅಧಿಕಾರಕ್ಕಾಗಿ ಅಂಟಿಕೊಂಡಿದ್ದಾರೆ, ಇನ್ನು, ವಿ.ಎಸ್.ಪಾಟೀಲ ಅವರು ಸುನಾಮಿ ಇದ್ದಂತೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಬಸವರಾಜ ಸಂಗಮೇಶ್ವರ್, ಮಹಮ್ಮದ್ ರಫೀಕ್ ದೇಸಳ್ಳಿ, ಧರ್ಮರಾಜ ನಡಿಗೇರ, ಬ್ಲಾಕ್‌ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ನೂರಾರು ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

ಇದಕ್ಕೂ ಮುನ್ನ ಇಂದೂರು ಗ್ರಾಮದ ಮೈಲಾರಲಿಂಗ ದೇವರಿಗೆ ಮತ್ತು ಹಜರತ್‌‌ ಮೆಹಬೂಬ್ ಸುಭಹಾನಿ ದರ್ಗಾಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿ ಬಲಪ್ರದರ್ಶನ ಮಾಡಿದರು.

ಈ ವೇಳೆ ರಾಮಕೃಷ್ಣ ಮೂಲಿಮನಿ, ಕೃಷ್ಣ ಹಿರೇಹಳ್ಳಿ, ರಾಜಶೇಖರ ಹಿರೇಮಠ, ರಜಾಖಾನ್ ಪಠಾಣ, ಮಹಮ್ಮದ್ ಗೌಸ್ ಮಕಾಂದಾರ, ಆಲಿಹಸನ್ ಬೆಂಡಿಗೇರಿ, ಮಂಜುನಾಥ ಪಾಟೀಲ, ರವಿ ದುಗ್ಗಳ್ಳಿ, ಗದಿಗೆಪ್ಪ ನಾಣಪುರ, ಸಾಹೇಬಖಾನ್ ಮೆಳ್ಳಾಗಟ್ಟಿ, ನಿಂಗಪ್ಪ ಶಿಂಬ್ರಿ, ನಜೀರ್ ಅಹಮ್ಮದ್ ದರ್ಗಾವಾಲೆ, ಮಂಜುನಾಥ ಮುಂಗೈ, ನಾಗಯ್ಯ ಹಿರೇಮಠ, ನಾಗಪ್ಪ ನಾಣಪುರ, ವಾದಿರಾಜ ಅಡ್ಡೆ, ಪಿ.ಜಿ.ತಂಗಚ್ಚನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!