ಮುಂಡಗೋಡ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅದೇನಾಗಿದೆಯೊ ಒಂದೂ ಅರ್ಥ ಆಗ್ತಿಲ್ಲ. ಇಡೀ ಪಟ್ಟಣದ ಜನ ಒಂದರ್ಥದಲ್ಲಿ ಇಲ್ಲಿನ ಬ್ರಷ್ಟಾಚಾರ ಕಂಡು ಎಲೆ ಎಡಿಕೆ ಸೇವೆ ಮಾಡೋದಷ್ಟೇ ಬಾಕಿ ಉಳಿದಿದೆ. ಯಾಕಂದ್ರೆ, ಈ ಕಚೇರಿಯಲ್ಲಿನ ಕೆಲವು ನುಂಗಣ್ಣರುಗಳ ಕರಾಮತ್ತು ಹಲವರ ಬದುಕಿನ ಜೊತೆ ಚೆಲ್ಲಾಟಕ್ಕಿಳಿದಂತಾಗಿದೆ.

ಬ್ರಷ್ಟರ ಬಂಡವಾಳವಾಯ್ತಾ..?
ಫಾರ್ಮ್ ನಂ.3 ಅನ್ನೋ “ಬಂಡವಾಳ” ಇಟ್ಕೊಂಡು ಅಕ್ಷರಶಃ ವ್ಯವಹಾರಕ್ಕಿಳಿದಿರೋ ಪಟ್ಟಣ ಪಂಚಾಯತಿಯ ಕೆಲವು ನುಂಗಣ್ಣರುಗಳಿಗೆ ಇದೊಂದು ರೊಕ್ಕ ಗಳಿಸುವ ಅಡ್ಡ ದಂಧೆಯಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅದೊಂದು ಏರಿಯಾದ ಹಿರಿಯ ನಾಗರೀಕರು ಹಿಡಿಶಾಪ ಹಾಕ್ತಿದಾರೆ. ನಿತ್ಯವೂ ಈ ಪಟ್ಟಣ ಪಂಚಾಯತಿಗೆ ಅಲೆದಾಡಿ, ಅಲೆದಾಡಿ ಸುಸ್ತಾಗಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿತಿದಾರೆ. ಆದ್ರೂ ನುಂಗಣ್ಣರುಗಳಿಗೆ ಬುದ್ದಿ ಬರುತ್ತಿಲ್ಲವಂತೆ. ಹಾಗಂತ, ಗಾಂಧಿನಗರದ ಹಿರಿಯ ಜೀವಗಳು ನೊಂದು ನುಡಿಯುತ್ತಿದ್ದಾರೆ.

ಗಾಂಧಿನಗರ ನಿವಾಸಿಗಳ ಗೋಳು..!
ಅಸಲು, ಫಾರ್ಮ ನಂ 3 ನ್ನು ಪಡೆಯುವ ಸಲುವಾಗಿ, ವರ್ಷಗಟ್ಟಲೇ ಅಲೆದಾಡಿರೋ ಮುಂಡಗೋಡಿನ ಗಾಂಧಿನಗರ ಅಭಿವೃದ್ಧಿ ಸಮಿತಿಯ ಸದಸ್ಯರು, ಇವತ್ತು‌ ಮತ್ತೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವರ್ಷಗಳಿಂದ ಮುಂಡಗೋಡಿನ ಗಾಂಧಿನಗರದಲ್ಲಿ ಬದುಕು ಕಟ್ಟಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ಎಲ್ಲಾ ಟ್ಯಾಕ್ಸುಗಳನ್ನು ಕಾಲಕಾಲಕ್ಕೆ ಭರಿಸಿ, ನಮಗೂ ಬದುಕಲು ಬಿಡಿ ಅಂತಾ ಅಂಗಲಾಚುತ್ತಿದ್ದಾರೆ. ಫಾರ್ಮ್ ನಂ. 3 ರ ಉತಾರ ನೀಡಿ ಅಂತಾ ವರ್ಷಗಳಿಂದ ಅಲೆಯುತ್ತಿದ್ದಾರೆ‌. ಆದ್ರೆ, ಇವ್ರ ಗೋಳು ಇಲ್ಲಿನ ಯಾವೊಬ್ಬ ಅಧಿಕಾರಿಗಳಿಗೂ ಕೆಳುತ್ತಲೇ ಇಲ್ಲ. ಹೀಗಾಗಿ, ಮಂಗಳವಾರ ಮತ್ತೆ ತಹಶೀಲ್ದಾರ್ ಮೂಲಕ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ‌. ಅಧಿಕಾರಿಗಳ ನಿರ್ಲಕ್ಷತನಗಳಿಂದ ನಮ್ಮನ್ನ ರಕ್ಷಿಸಿ ಅಂತಾ ಬೇಡಿಕೊಂಡಿದ್ದಾರೆ.

ಮುಚ್ಚಿ “ಉಂಡವನ” ದರ್ಬಾರ್..!
ಅಂದಹಾಗೆ, ಈ ಪಟ್ಟಣ ಪಂಚಾಯತಿಯಲ್ಲಿ ಅವನೊಬ್ಬ ಸಿಬ್ಬಂದಿ ಇಡೀ ಪಟ್ಟಣ ಪಂಚಾಯತಿಯ ವ್ಯವಸ್ಥೆಯನ್ನೇ ಅರೆದು ಕುಡಿದವನಂತೆ ಎಗರಾಡುತ್ತಾನೆ ಅನ್ನೋದು ಸಾರ್ವಜನಿಕರ ಆರೋಪ. ಅಸಲು, ಈ ಪಟ್ಟಣ ಪಂಚಾಯತಿಯಲ್ಲಿ ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕೆಂದ್ರೂ ಈ “ಮುಚ್ಚಿ” ಉಣ್ಣುವ ಸಾಹೇಬನ ಫರ್ಮಾನು ಬೇಕೇ ಬೇಕಂತೆ. ಹಾಗಂತ ಇಡೀ ಪಟ್ಟಣದ ಜನ ಸಿಕ್ಕ ಸಿಕ್ಕಲ್ಲೇಲ್ಲ ಆರೋಪಗಳ ಸುರಿಮಳೆ ಸುರಿಸಿ ಒದರಾಡುತ್ತಿದ್ದಾರೆ. ಆದ್ರೂ ಕೂಡ, ಈ “ಮುಚ್ಚಿ”ಕೊಂಡೆ ನುಂಗುವ ನುಂಗಣ್ಣ ಸಿಬ್ಬಂದಿಯ ಬಗ್ಗೆ ಇಲ್ಲಿನ ಅಧಿಕಾರಿಗಳು ತುಟಿ ಪಿಟಿಕ್ ಅನ್ನಲ್ಲ. ಈ ಕಾರಣಕ್ಕಾಗಿಯೇ, ಇಲ್ಲಿ ಅರ್ಜಿ ಹಾಕಿ ತಿಂಗಳುಗಟ್ಟಲೇ ಅಲೆದಾಡಿದ್ರೂ ಈ ಪುಣ್ಯಾತ್ಮನ ಕೃಪೆ ಸಿಗೋದು ಕಷ್ಟವಂತೆ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತಾ ಜನರನ್ನ ಕುಕ್ಕುವ ಹೀನ ಚಾಳಿ ಇದೆಯಂತೆ ಈ ಸಾಹೇಬ್ರಿಗೆ. ಆದ್ರೆ, ಈತ ಕೇಳಿದಷ್ಟು ಹಣ ಕೊಟ್ರೆ ಮನೆ ಬಾಗಿಲಿಗೆ ಬಂದು ಸೇವೆ ನೀಡುವ ಚಾಳಿ ಇದೆಯಂತೆ. ಹೀಗಾಗಿ, ಇವನೊಬ್ಬ ಮುಂಡಗೋಡ ಪಟ್ಟಣ ಪಂಚಾಯತಿಯಿಂದ ತೊಲಗಿದ್ರೆ ಮುಂಡಗೋಡಿನ ಅದೇಷ್ಟೋ ಬಡ ಜೀವಗಳು ಬದುಕತ್ತೆ ಅನ್ನೋ ಅಭಿಪ್ರಾಯ ಬಹುತೇಕ ಮುಂಡಗೋಡಿಗರದ್ದು.

ಹಣ ಕೇಳ್ತಾರಂತೆ..!
ಸಾರ್ವಜನಿಕರೇ ಹೇಳೋ ಪ್ರಕಾರ, ಫಾರ್ಮ ನಂ. 3 ಗಾಗಿ ಅರ್ಜಿ ಹಾಕಿದ ಮೇಲೆ ಈ “ಮುಚ್ಚ” ಉಂಡಿ ಸಾಹೇಬಾ ಇನ್ನಿಲ್ಲದ ಸಬೂಬು ಹೇಳಿ ವರ್ಷಗಟ್ಟಲೇ ಅಲೆದಾಡಿಸುತ್ತಾನಂತೆ. ಮುಖ‌ನೋಡಿ ರೇಟು ಫಿಕ್ಸ್ ಮಾಡುವ ಈ ಅಸಾಮಿ ಲಕ್ಷ ಲಕ್ಷ ಬಾಚಿಕೊಳ್ತಿದಾನೆ ಅನ್ನೋ ಸಾಕಷ್ಟು ಆರೋಪಗಳಿವೆ. ಆದ್ರೆ, ಅದನ್ನೇಲ್ಲ ಕೇಳಬೇಕಾದವರೇ ಈತನ ಬೆನ್ನಿಗೆ ನಿಂತು ಬೆಂಗಾವಲಾಗಿದ್ದಾರೆ ಅನ್ನೋ ಮಾತುಗಳಿವೆ. ಹೀಗಾಗಿ, ಸಂಬಂಧಪಟ್ಟವರು ಇನ್ನಾದ್ರೂ ಕಣ್ತೆರೆದು ನೋಡಲಿ ಅಂತಿದಾರೆ ಮುಂಡಗೋಡಿನ ಮಂದಿ.

ಚೀಫ್ ಆಫೀಸರ್ರೇ ಬಿಟ್ಟಿ ಉಪದೇಶ ಬಿಡಿ..?
ಅಂದಹಾಗೆ, ಶಿಗ್ಗಾವಿಯಿಂದ ನೇರವಾಗಿ
ಮುಂಡಗೋಡ ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿಯಾಗಿ ಬಂದು ಕೂತಿರೋ ಮಲ್ಲಯ್ಯ ಸ್ವಾಮಿಗಳು ಬಿಲ್‌ಕುಲ್ ಅಲುಗಾಡುತ್ತಲೇ ಇಲ್ಲ. ಅದೇಷ್ಟೇ ಜನ ಬಂದು ಗೋಳು ತೋಡಿಕೊಂಡ್ರೂ ಜಪ್ಪಯ್ಯ ಅನ್ನದ ಈ ಯಪ್ಪ, ಇನ್ನಿಲ್ಲದ ಕಾನೂನು, ಸಲಹೆಗಳ ಬಿಟ್ಟಿ ಉಪದೇಶಕ್ಕೆ ಇಳಿಯುತ್ತಾರೆ ಅನ್ನೋ ಬೇಜಾರು ಜನರಲ್ಲಿದೆ. ಜನರು ಕಷ್ಟ ಅಂತಾ ಬಂದ್ರೆ, ಅದರ ಬಗ್ಗೆ ಗಮನ ಹರಿಸಬೇಕೆನ್ನುವ ಕನಿಷ್ಟ ಖಬರೂ ಇದ್ದಂತಿಲ್ಲ ಈ ಸ್ವಾಮಿಗಳಿಗೆ. ಯಾಕಂದ್ರೆ, ಮುಂಡಗೋಡ ಪಟ್ಟಣ ಪಂಚಾಯತಿಗೆ ಗಾಂಧಿನಗರದ ಅಷ್ಟೇಲ್ಲ ಹಿರಿಯ ಜೀವಗಳು ಅಲೆದಾಡುತ್ತಿದ್ರೂ ಅವ್ರ ಸಮಸ್ಯೆ ಆಲಿಸಬೇಕು ಅನ್ನುವ ಗೊಡವೆ ಇವ್ರಿಗೆ ಇಲ್ಲವಂತೆ. ಇಂತಹ ಅಧಿಕಾರಿಗಳ ಬೇಜವಾಬ್ದಾರಿಯ ಕಾರಣಕ್ಕಾಗಿಯೇ “ಮುಚ್ಚಿ” ಉಂಡವರ ಸಾಮ್ರಾಜ್ಯ ಇಲ್ಲಿ ಸ್ಥಾಪನೆಯಾಗಿದೆ ಅನ್ನೋದು ಸಾರ್ವಜನಿಕರ ಆರೋಪ.

ಎಚ್ಚೆತ್ತುಕೊಳ್ಳಿ..!
ನಿಜ ಅಂದ್ರೆ, ಗಾಂಧಿನಗರದ ಕೆಲ ನಿವಾಸಿಗಳು ಅಕ್ಷರಶಃ ಕಂಗಾಲಾಗಿದ್ದಾರೆ. ಫಾರ್ಮ ನಂ 3 ರ ಸಲುವಾಗಿ ಅಲೆದಾಡಿ ಹೈರಾಣಾಗಿರೋ ಜನ ಇನ್ನೇನು “ಮಿಕ್ಕಿ” ನಿಲ್ಲೋ ಸಾಧ್ಯತೆ ಇದೆ. ಹೀಗಾಗಿ, ಇಲ್ಲಿನ ನಿದ್ದೆಗಣ್ಣಿನ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಗಾಂಧಿನಗರ ನಿವಾಸಿಗಳ ಸಾತ್ವಿಕ ಕೋಪದ ಕಟ್ಟೆ ಒಡಿಯೋದ್ರಲ್ಲಿ ಎರಡು ಮಾತಿಲ್ಲ. ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ..!

error: Content is protected !!