ಶಿರಸಿ ಸಬ್ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಪ್ರಕಾಶ್ ಸಿದ್ದಿ ಮತ್ತೆ ತಗಲಾಕ್ಕೊಂಡಿದ್ದಾನೆ. ಇನ್ನೇನು ದಟ್ಟ ಕಾಡಿನಲ್ಲಿ ಲೀ‌ನವಾಗಲು ಹೊಂಚು ಹಾಕಿದ್ದ ರಾಬರಿ ಪಡೆಯ ವಾರಸುದಾರನನ್ನು ಬಲೆಗೆ ಕೆಡವಿದ್ದಾರೆ.

ಶಿರಸಿ ಗ್ರಾಮೀಣ ಠಾಣೆಯ ದಕ್ಷ ಪಿಎಸ್ಐ ಸೀತಾರಾಮ್ ಮತ್ತವರ ಟೀಂ, ಆರೋಪಿ ಪ್ರಕಾಶನ ರೆಕ್ಕೆ ಪುಕ್ಕಗಳನ್ನೇಲ್ಲ ಕಟ್ ಮಾಡಿ ಎತ್ತಾಕೊಂಡು ಬಂದಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಹರೆಪಾಲ್ ಗ್ರಾಮದ ಅಂಚಿನಲ್ಲಿ ಆರೋಪಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಈ‌ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಆರೋಪಿಯ “ಎಸ್ಕೇಪಾಯಣ” ಒಂದು ಹಂತದಲ್ಲಿ ಸುಖಾಂತ್ಯ ಕಂಡಿದೆ.

ಬಾತ್ಮಿ ಕೊಟ್ರು ಜನ..!
ಅಂದಹಾಗೆ, ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಶಿರಸಿ ಸಬ್ ಜೈಲಿನಿಂದ ಎಸ್ಕೇಪ್ ಆಗಿದ್ದ ರಾಬರಿ ಗ್ಯಾಂಗ್ ನ ಸದಸ್ಯ ಆರೋಪಿ, ಶಿರಸಿಯ ಸುತ್ತ ಮುತ್ತಲೇ ಓಡಾಡಿಕೊಂಡಿದ್ದ. ಜೈಲಿನ ಅಧಿಕಾರಿಗಳ ಹುಂಬತನವನ್ನೇ ಬಂಡವಾಳ ಮಾಡಿಕೊಂಡು ಕಾಲ್ಕಿತ್ತಿದ್ದ, ಹೇಗಾದ್ರೂ ಮಾಡಿ ತನ್ನ ಟೀಂ ಸೇರಲು ದಟ್ಟ ಅರಣ್ಯದೆಡೆಗೆ ಸಾಗುತ್ತಿದ್ದ. ಇನ್ನೇನು ಕೆಲವೇ ಹೊತ್ತಲ್ಲಿ ದಟ್ಟಾರಣ್ಯದ ನಡುವೆ ಲೀನವಾಗುವ ಎಲ್ಲ ತಯಾರಿ ಮಾಡಿಕೊಂಡಿದ್ದ. ಹೀಗಿದ್ದಾಗ, ಈತನನ್ನ ಗಮನಿಸಿದ್ದ ಕೆಲ ಗ್ರಾಮಸ್ಥರು ತಕ್ಷಣವೇ ಶಿರಸಿ ಗ್ರಾಮೀಣ ಪೊಲೀಸರಿಗೆ ಬಾತ್ಮಿ ನೀಡಿದ್ದಾರೆ. ಹೀಗಾಗಿ, ಪವಾಡದ ರೂಪದಲ್ಲೇ ಪ್ರಕಾಶನನ್ನು ಹೆಡೆಮುರಿ ಕಟ್ಟಿದ್ದಾರೆ ಶಿರಸಿ ಪೊಲೀಸರು.

ಹುಂಬತನ ಬಿಡಿ ಜೈಲಾಧಿಕಾರಿಗಳೇ..!
ಅಸಲು, ಇವತ್ತಿನ ಎಸ್ಕೇಪ್ ಪ್ರಕರಣಕ್ಕೆ ನೇರವಾಗಿ ಹೊಣೆಯಾಗಿದ್ದವರು ಶಿರಸಿಯ ಜೈಲಾಧಿಕಾರಿಗಳು. ಓರ್ವ  ಆರೋಪಿಯನ್ನ ಸ್ವಚ್ಚಂದವಾಗಿ ಹೂವಿನ ಗಿಡಗಳಿಗೆ ನೀರು ಹಾಕಲು ಬಿಟ್ರೆ ಏನಾಗಬೇಡ..? ಹೀಗಾಗಿ, ಜೈಲಾಧಿಕಾರಿಗಳ ಕರ್ತವ್ಯ ಲೋಪದಿಂದ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇಲಾಖೆ ತಕ್ಷಣವೇ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಅವಶ್ಯಕತೆ ಇದೆ. ಜೈಲಾಧಿಕಾರಿಗಳ ಹುಂಬತನಗಳಿಗೆ ಬ್ರೇಕ್ ಹಾಕಬೇಕಿದೆ. ಇದು ಉತ್ತರ ಕನ್ನಡಿಗರ ಒತ್ತಾಸೆ.

error: Content is protected !!