ಮುಂಡಗೋಡ ತಾಲೂಕಿನ ರಾಜಕೀಯ ಈ ಮಟ್ಟಿಗೆ ಹೀನ ಸ್ಥಿತಿಗೆ ತಲುಪಿತಾ..? ಅದ್ರಲ್ಲೂ ಈಗ ಬಂದಿರೋ ಆರೋಪ ನಿಜವೇ ಆಗಿದ್ದರೆ, ಮಾನ್ಯ ಸಚಿವ ಶಿವರಾಮ್ ಹೆಬ್ಬಾರ್ ಸಾಹೇಬ್ರು ಈ ಮಟ್ಟಕ್ಕೆ ರಾಜಕೀಯ ಮಗ್ಗುಲಿಗೆ ಅನಿವಾರ್ಯವಾಗಿ ಹೊರಳಿಕೊಂಡ್ರಾ..? ಹಾಗಾಗಿದ್ದರೆ ನಿಜಕ್ಕೂ ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಹುದೊಡ್ಡ ದುರಂತ.

ಅವ್ರು ಮಾತೆ ಬಸವೇಶ್ವರಿ..!
ಮುಂಡಗೋಡ ತಾಲೂಕಿನಲ್ಲಿ ಮನೆ ಮನೆಗೂ ಪರಿಚಿತರಾಗಿ, ಗುರು ಸ್ಥಾನ ಪಡೆದುಕೊಂಡಿರೋ ಅತ್ತಿವೇರಿ ಬಸವಧಾಮದ ಶ್ರೀಮಾತೆ ಬಸವೇಶ್ವರಿಗೆ ಸಚಿವ ಶಿವರಾಮ್ ಹೆಬ್ಬಾರ್, ಏಕ ವಚನದಲ್ಲಿ ನಿಂದಿಸಿದ್ದಾರೆ ಅಂತಾ ಮುಂಡಗೋಡಿನಲ್ಲಿ ಇವತ್ತು ಹಲವು ಮುಖಂಡರು, ಭಕ್ತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಪತ್ರಿಕಾಗೋಷ್ಟಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತೆಯವರಿಗೆ ನಿಂದಿಸಿದ್ದನ್ನು ಖಂಡಿಸಿದ್ದಾರೆ. ಹೀಗಾಗಿ, ಸಚಿವ್ರು ಬಹಿರಂಗವಾಗಿ ಮಾತೆಯವರಲ್ಲಿ ಕ್ಷಮೆ ಕೇಳಬೇಕು ಅಂತಾ ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಏನಿದು ಕೇಸ್..?
ಪತ್ರಿಕಾಗೋಷ್ಟಿಯಲ್ಲಿ ಮುಖಂಡರು ಮಾಹಿತಿ ನೀಡಿದ ಪ್ರಕಾರ, ಮುಂಡಗೋಡ ತಾಲೂಕಿನ ಉಗ್ನಿಕೇರಿಯಲ್ಲಿ ಇದೇ ಬರುವ ಫೆಬ್ರುವರಿ ಮೊದಲ ವಾರದಲ್ಲಿ ಗ್ರಾಮದೇವಿಯ ಜಾತ್ರೆ ಹಮ್ಮಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಗ್ರಾಮದ ಕೆಲವರು ಮಾನ್ಯ ಕಾರ್ಮಿಕ ಸಚಿವರ ಬಳಿ ಕಳೆದ ಮಂಗಳವಾರವೇ ಜಾತ್ರೆಗೆ ಆಮಂತ್ರಿಸಲು ಹೋಗಿದ್ದರಂತೆ. ಈ ವೇಳೆ ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಗ್ರಾಮಸ್ಥರು ಮಾತೆ ಬಸವೇಶ್ವರಿಯವರ ಭಾವಚಿತ್ರ ಹಾಕಿದ್ದನ್ನು ನೋಡಿದ ಸಚಿವರು, ಏಕಾಏಕಿ ಈಕೆಯ ಪೋಟೊ ಯಾಕೆ ಹಾಕಿದ್ದಿರಿ..? ಈಕೆ ವಿ.ಎಸ್.ಪಾಟೀಲರ ಪರವಾಗಿ ಪ್ರಚಾರ ಮಾಡುತ್ತಿದ್ದಾಳೆ, ಈಕೆಯ ಪೋಟೊ ತೆಗೆದು ಹಾಕಿ, ಅಂದ್ರೆ ಮಾತ್ರ ನಾನು ನಿಮ್ಮ ಜಾತ್ರೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ಕೊಡ್ತಿನಿ. ಇಲ್ಲಾಂದ್ರೆ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ರಂತೆ. ಹೀಗಾಗಿ, ಅವತ್ತು ಸಚಿವರ ಬಳಿ ಹೋಗಿದ್ದ ಗ್ರಾಮಸ್ಥರು “ಅಲ್ಲಾ ಸಾಹೇಬ್ರೆ, ಈಗಾಗಲೇ ಪತ್ರಿಕೆ ಮುದ್ರಣಗೊಂಡಿದೆ, ಅಲ್ಲದೇ ಬಸವೇಶ್ವರಿ ಮಾತೆಯವರು ನಮ್ಮ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನಡೆಸಲು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಪೂಜ್ಯರ ಭಾವಚಿತ್ರ ತೆಗೆದು ಹಾಕೋಕೆ ಹೇಗೆ ಸಾಧ್ಯ ಅಂತಾ ಕೇಳಿದ್ದಾರಂತೆ ಹೀಗಾಗಿ, ಮಾನ್ಯ ಸಚಿವ್ರು, ಹಾಗಿದ್ರೆ ನಾನು ಇಷ್ಟೇ ಕೊಡೋದು ಅಂತಾ ಒಂದಿಷ್ಟು ಹಣ ದೇಣಿಗೆ ನೀಡಿ ಕಳಿಸಿದ್ದಾರಂತೆ. ಇದು ಪತ್ರಿಕಾಗೋಷ್ಟಿಯ ಹಕೀಕತ್ತು.

ಹೊತ್ತಿದ ಕಿಡಿ..!
ಸರಿ, ಹಾಗೆ ಸಚಿವ್ರು ಖಡಾಖಂಡಿತವಾಗಿ ಹೇಳಿ ಕಳಿಸಿದ ನಂತರ, ವಾಪಸ್ ಬಂದ ಗ್ರಾಮಸ್ಥರು ಆ ವಿಷಯವನ್ನು ಖುದ್ದು ಬಸವೇಶ್ವರಿ ಮಾತೆಯವರ ಬಳಿ ಹೇಳಿಕೊಂಡಿದ್ದಾರೆ‌ ಎನ್ನಲಾಗಿದೆ.. ಹೀಗಾಗಿ, ನೊಂದುಕೊಂಡ ಮಾತಾಜೀಯವರು, ಈ ವಿಷಯವನ್ನು ಮುಂಡಗೋಡಿನ ಕೆಲ ಬಿಜೆಪಿ ಮುಖಂಡರಲ್ಲೂ ಹೇಳಿಕೊಂಡು ನೋವು ಹಂಚಿಕೊಂಡಿದ್ದಾರೆ. ಆದ್ರೆ, ಯಾರೊಬ್ರೂ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ಪಡದೇ ಇಲ್ಲ. ಹೀಗಾಗಿ, ಮಾತೆಯವರ ಭಕ್ತ ಗಣ ಮತ್ತಷ್ಟು ಆಕ್ರೋಶಗೊಳ್ಳುವಂತೆ ಆಗಿದೆ. ಈ ಕಾರಣಕ್ಕಾಗೇ ಇದನ್ನ ಹೀಗೇ ಬಿಟ್ರೆ ಸರಿಯಲ್ಲ, ಇದನ್ನ ನಾವೇಲ್ಲರೂ ಖಂಡಿಸಲೇಬೇಕು ಅಂತಾ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಹಲವ್ರು ಮುಂಡಗೋಡಿನ ಐಬಿಯಲ್ಲಿ ಪತ್ರಿಕಾಗೋಷ್ಟಿ ಕರೆದು ಆಕ್ರೋಶ ಹೊರಹಾಕಿದ್ದಾರೆ.

ಮಾತಾಜಿ ಅಂದ್ರೆ ಮನೆ‌ಮಾತು..!
ಅಸಲು, ಕಳೆದ ಎರಡು ದಶಕದ ಈಚೆ ಮುಂಡಗೋಡ ತಾಲೂಕಿನ ಅತ್ತಿವೇರಿ ಪಕ್ಷಿಧಾಮದ ಹತ್ತಿರ ಬಸವಧಾಮ ಆದ್ಯಾತ್ಮದ ಅಮೃತ ಉಣಿಸುತ್ತಿದೆ. ಇಲ್ಲಿ, ಸರ್ವ ಜನಾಂಗಗಳಿಗೂ ಬಸವೇಶ್ವರಿ ಮಾತೆಯವರು ಆದ್ಯಾತ್ಮಿಕ ಪ್ರವಚನಗಳ‌ ಮೂಲಕ ಬಸವತತ್ವ ಪಸರಿಸುವ ಕಾಯಕದಲ್ಲಿದ್ದಾರೆ‌. ಇಡೀ ರಾಜ್ಯಾಧ್ಯಂತ ಮಾತೆಯವರ ಪ್ರವಚನ ಲಕ್ಷಾಂತರ ಭಕ್ತರಿಗೆ ದಾರಿದೀಪವಾಗಿದೆ. ಬಸವೇಶ್ವರಿ ಮಾತೆಯವರು ಪ್ರವಚನಕ್ಕೆ ಬರ್ತಾರೆ ಅಂದ್ರೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರ್ತಾರೆ. ಇಲ್ಲಿ ಯಾವುದೇ ಜಾತಿಗೆ ಈ ಮಾತಾಜಿ ಸೀಮಿತಗೊಂಡಿಲ್ಲ. ಎಲ್ಲ ಜನಾಂಗದವರೂ ಶ್ರೀ ಮಾತೆಯವರನ್ನು ಆರಾಧಿಸ್ತಾರೆ. ಇಡೀ ಮುಂಡಗೋಡ ತಾಲೂಕಿನ ಯಾವುದೇ ಧಾರ್ಮಿಕ ಕಾರ್ಯಕ್ರಮ ಇದ್ರೂ ಆ ಕಾರ್ಯಕ್ರಮದಲ್ಲಿ ಮಾತೆಯವರ ಸಾನಿಧ್ಯ ಇದ್ದೇ ಇರತ್ತೆ. ಅದು ಯಾವುದೇ ಜಾತಿಯದ್ದಾಗಿರಲಿ, ಯಾವುದೇ ಪಂಗಡದ್ದಾಗಿರಲಿ. ಎಲ್ಲರೂ ಮಾತೆಯವರಿಗೆ ಗೌರವ ಕೊಡ್ತಾರೆ. ಹೀಗಿರೋ‌ ಮಾತಾಜಿವರು ಯಾವತ್ತೂ ಯಾವುದೇ ಪಕ್ಷದ ಪರವಾಗಿ, ರಾಜಕೀಯವಾಗಿ ಯಾವತ್ತೂ ಮಾತಾಡಿಲ್ಲ, ತಮ್ಮ ಬಸವಧಾಮಕ್ಕೆ ಯಾರೇ ಬರಲಿ, ಯಾವುದೇ ಪಕ್ಷದವರು ಬರಲಿ ಆದರದಿಂದ ಸತ್ಕರಿಸಿ, ಹರಸಿ ಕಳಿಸುವ ಮಹಾನ್ ಸಾಧಕರು. ಇವತ್ತಿಗೂ ಬಸವೇಶ್ವರಿ ಅಮ್ಮಾ ಯಾರ ಬಳಿಯೂ ದೇಣಿಗೆ, ಅದೂ ಇದು ಅಂತಾ ಕೈಚಾಚಿಲ್ಲ. ತಾವು ನೀಡೋ ಪ್ರವಚನಕ್ಕೆ ಭಕ್ತರು ನೀಡುವ ಕಾಣಿಕೆಯಲ್ಲೇ ಅದೇಷ್ಟೋ ಧರ್ಮ ಕಾರ್ಯ ಮಾಡುತ್ತಿದ್ದಾರೆ. ಹೀಗಿದ್ದಾಗ ಇಂತಹ ಮಹಾತ್ಮರಿಗೆ, ಗುರುವಿನ ಸ್ಥಾನದಲ್ಲಿರೋರಿಗೆ ಸಚಿವ್ರು ಹೀಗೆ ಹೇಳಿದ್ರಾ..? ಕಳೆದ ನಾಲ್ಕೈದು ದಿನಗಳಿಂದ ಈ ಚರ್ಚೆ ತಾಲೂಕಿನ ತುಂಬ ಪ್ರತಿಧ್ವನಿಸುತ್ತಿದೆ. ಅಸಲಿಗೆ, ಹಾಗೊಂದು ವೇಳೆ ಸಚಿವ್ರು ಮಾತಾಜಿಯವರ ಬಗ್ಗೆ ಹಾಗೇ ಏಕ ವಚನದಲ್ಲಿ ನಿಂದಿಸಿದ್ದು ಸತ್ಯವೇ ಆದ್ರೆ ಅದಕ್ಕಿಂತ ದೊಡ್ಡ ಬೌದ್ದಿಕ ದಿವಾಳಿತನ ಬೇರೊಂದಿಲ್ಲ ಅನಿಸತ್ತೆ. ಅಲ್ವಾ..?

ಪತ್ರಿಕಾಗೋಷ್ಟಿಯಲ್ಲಿದ್ದವರು..!
ಅಂದಹಾಗೆ, ಇವತ್ತಿನ ಪತ್ರಿಕಾಗೋಷ್ಟಿಯಲ್ಲಿ ಉಗ್ನಿಕೇರಿಯ ಹಿರಿಯ ಮುಖಂಡ ಈರಯ್ಯ ನಡುವಿನಮನಿ, ಇಂದೂರಿನ ಮುಖಂಡ ಬಿ.ಕೆ. ಪಾಟೀಲ್, ಮುಂಡಗೋಡಿನ ಮುಸ್ಲಿಂ ಮುಖಂಡ ರಾಮು ಬೆಳ್ಳೆನವರ್, ರವಿಚಂದ್ರ ದುಗ್ಗಳ್ಳಿ, ಬಿ.ಡಿ. ಹೋತಗಣ್ಣವರ್, ವಿ.ಎಂ.ಪಾಟೀಲ್, ಎ.ಬಿ.ಹೂಗಾರ್, ಬಿಸ್ಟನಗೌಡ ಪಾಟೀಲ್, ಮಹದೇಶ್ವರ ಲಿಂಗದಾಳ್, ಸಂಗಮೇಶ್ ಕೊಳೂರು ಸೇರಿದಂತೆ ಹಲವರು ಭಾಗಿಯಾಗಿದ್ರು.

***********

error: Content is protected !!