ಉಳವಿ: ಇತಿಹಾಸ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಜಾತ್ರೆ ಇನ್ನೇನು ಶುರುವಾಗಲಿದೆ. ಆದ್ರೆ, ಉಳವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಎತ್ತಿನಬಂಡಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ಹೇರಿರುವುದು ಭಕ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಉಳವಿ ಜಾತ್ರೆಯು ಜನವರಿ 28ರಿಂದ ಫೆ 8ರವರೆಗೆ ನಡೆಯಲಿದೆ. ಭಕ್ತರು ಈಗಾಗಲೇ ಉಳವಿಯತ್ತ ಬರುತ್ತಿದ್ದಾರೆ. ವಾಹನಗಳಲ್ಲಿ ಬರಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಟ್ರ್ಯಾಕ್ಟರ್, ಕಾರು, ಬಸ್ ಮತ್ತು ಕಾಲ್ನಡಿಗೆಯಲ್ಲಿ ಭಕ್ತರು ಉಳವಿಗೆ ಬರುತ್ತಿದ್ದಾರೆ. ನೂರಾರು ವರ್ಷಗಳ ಉಳವಿ ಜಾತ್ರೆಯ ಪರಂಪರೆಯಲ್ಲಿ ಎತ್ತಿನಬಂಡಿಗಳಿಲ್ಲದ ಜಾತ್ರೆ ನಡೆಯುತ್ತಿರುವುದು ಇದೇ ಮೊದಲು. ‘ಅನಿವಾರ್ಯ ಕಾರಣದಿಂದ ಕಾರಣದಿಂದ ಎತ್ತಿನ ಬಂಡಿಗೆ ನಿಷೇಧ ಹೇರಲಾಗಿದೆ. ಭಕ್ತರು ಸಹಕರಿಸಬೇಕು’ ಎಂದು ದೇವಸ್ಥಾನ ಆಡಳಿತ ಮಂಡಳಿಯು ಮನವಿ ಮಾಡಿದೆ.
ಸದ್ಯ, ಉತ್ತರ ಕನ್ನಡ ಜಿಲ್ಲೆಯ 6,185 ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿದೆ. 285 ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಈವರೆಗೆ ಕೇವಲ 2207 ಗೋವುಗಳು ಗುಣಮುಖವಾಗಿವೆ. ಜಿಲ್ಲೆಯಲ್ಲಿ
ದಿನದಿಂದ ದಿನಕ್ಕೆ ಚರ್ಮಗಂಟು ರೋಗ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಹಳಿಯಾಳ ಎಸಿ ಹಾಗೂ ದೇವಸ್ಥಾನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಚಕ್ಕಡಿಗಳಿಗೆ ನಿರ್ಭಂದ ಹೇರುವ ಆದೇಶ ಹೊರಡಿಸಿದ್ದಾರೆ.
‘ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಇರುವುದರಿಂದ ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಎತ್ತಿನಬಂಡಿ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎತ್ತಿನಬಂಡಿಗಳಲ್ಲಿ ಬಂದರೆ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ
ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರೈತರು ಸಹಕರಿಸಬೇಕು’ ಅಂತಾ ಮನವಿ ಮಾಡಲಾಗಿದೆ.