ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಚೇತರಿಕೆಗಾಗಿ ನಾಡಿನೆಲ್ಲಡೆ ಪ್ರಾರ್ಥನೆ ಶುರುವಾಗಿದೆ. ಜೀವಂತ ದೇವರು, ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳು ಕೋಟಿ ಕೋಟಿ ಭಕ್ತರನ್ನು ಹೊಂದಿದ್ದಾರೆ. ಹೀಗಾಗಿ ಆಶ್ರಮದ ಸುತ್ತಲೂ ಬೆಳಗಿನಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸ್ವಾಮೀಜಿಗಳ ದರ್ಶನಕ್ಕಾಗಿ ಕಾದು ಕುಳಿತಿರುವ ಭಕ್ತಗಣ ಒಂದೆಡೆಯಾದ್ರೆ ಮತ್ತೊಂದೆಡೆ ಶ್ರೀಗಳು ಗುಣವಾಗಲಿ ಎಂದು ಎಲ್ಲೆಂದರಲ್ಲಿ ಪ್ರಾರ್ಥನೆಗಳನ್ನು ಭಕ್ತರು ಮಾಡುತ್ತಿದ್ದಾರೆ.
ಭಗವಂತನೇ ನಮ್ಮ ದೇವರನ್ನು ಕಾಪಾಡು..! ಸಾಮೂಹಿಕ ಪ್ರಾರ್ಥನೆ, ಆಶ್ರಮದಲ್ಲಿ ವಿಶೇಷ ಪೂಜೆ..! ಹೌದು ಇಂತಹದ್ದೊಂದು ಆತಂಕಕಾರಿ ವಿಚಾರ ಇದೀಗ ಭಕ್ತರಲ್ಲಿ ಮನೆ ಮಾಡಿದೆ. ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಈ ಹಿನ್ನೆಲೆ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಆಶ್ರಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯ ಮಂಟಪದಲ್ಲಿ ಬೆಳಗಿನ ಜಾವ ಐದು ಗಂಟೆಯಿಂದಲೇ ಪೂಜೆ, ಪ್ರಾರ್ಥನೆ ನಡೆಸಲಾಯಿತು. ಆಶ್ರಮದ ಸ್ವಾಮೀಜಿಗಳು ಹಾಗೂ ಭಕ್ತರು ಸೇರಿ ಪೂಜೆ ಪುನಸ್ಕಾರ ನಡೆಸಿದ್ರು. ಇನ್ನು ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿರುವ ವಿಚಾರ ತಿಳಿದು ಇಂದು ಸಹ ಅಸಂಖ್ಯಾತ ಭಕ್ತರ ಆಶ್ರಮದತ್ತ ಧಾವಿಸಿದ್ರು, ಎಲ್ಲರೂ ಒಂದೆಡೆ ಜಮಾಯಿಸುವುದರಿಂದ ಸಮಸ್ಯೆ ಆಗಬಾರದು ಎಂದು ಕೆಲಕಾಲ ಭಕ್ತರನ್ನು ಮುಖ್ಯ ಗೇಟ್ ಹೊರಭಾಗದಲ್ಲೇ ನಿಲ್ಲಿಸಲಾಯಿತು. ಆ ನಂತರದಲ್ಲಿ ಸಿದ್ಧೇಶ್ವರ ಶ್ರೀಗಳ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಗುರುಗಳ ಗದ್ದುಗೆಯ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಅಲ್ಲದೆ ಅನೇಕ ಗಣ್ಯರು, ಸ್ವಾಮೀಜಿಗಳು ಆಗಮಿಸಿ ದರ್ಶನ ಪಡೆದ್ರು. ಕಾಡಸಿದ್ದೇಶ್ವರ ಶ್ರೀಗಳು, ಸುತ್ತೂರು ಶ್ರೀಗಳು ಹಾಗೂ ವಚನಾನಂದ ಶ್ರೀಗಳು ನಿನ್ನೆಯಿಂದಲೇ ಶ್ರೀಗಳ ಕೊಠಡಿಯಲ್ಲೇ ಇದ್ದು ಶ್ರೀಗಳ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿದ್ಧೇಶ್ವರ ಶ್ರೀಗಳಿಗೆ ಹಸುವಿನ ಹಾಲು ಪೂರೈಸುತ್ತಿದ್ದ ಅಶೋಕ ತೋಸನಿವಾಲ ಶೇಠಜಿ ಅವರ ತೋಟದಿಂದ ಹಾಲು ತರಲಾಗಿತ್ತು. ಆದ್ರೆ ಶ್ರೀಗಳು ಯಾವುದನ್ನೂ ಸೇವಿಸಿಲ್ಲ. ಶ್ರೀಗಳ ಪಲ್ಸ್ ರೇಟ್ ಹಾಗೂ ಆಕ್ಸಿಜನ್ ಪ್ರಮಾಣ ಕಡಿಮೆ ಆಗ್ತಿದೆ ಎಂದು ವೈದ್ಯರು ಹೇಳಿದ್ದಾರೆ…
ಇನ್ನು ಭಕ್ತರು ಹೆಚ್ಚಾಗುತ್ತಿದ್ದಂತೆ ಕಂಟ್ರೋಲ್ ಮಾಡೋದು ಕಷ್ಟ ಎಂಬುದನ್ನು ಪ್ಲಾನಿಂಗ್ ಮಾಡಿಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತೆ ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗಿದೆ. ಇನ್ನು ಸಿದ್ಧೇಶ್ವರ ಶ್ರೀಗಳ ದರ್ಶನಕ್ಕಾಗಿ ಮಾಜಿ ಸಿಎಂ ಸಿದ್ರಾಮಯ್ಯ, ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ಯತ್ನಾಳ, ಎಂ ಬಿ ಪಾಟೀಲ್, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ಹಾಗೂ ಬೇರೆ ಕಡೆಯಿಂದ ವಿವಿಧ ಜನಪ್ರತಿನಿಧಿಗಳು ಆಗಮಿಸಿ ಶ್ರೀಗಳ ದರ್ಶನ ಪಡೆದ್ರು. ಅಲ್ಲದೆ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಆಗಮಿಸಿ ಅವರೂ ಸಹ ದರ್ಶನ ಪಡೆದ್ರು. ಇನ್ನು ಬಂದ ಭಕ್ತರು ಯಾರೂ ಹಾಗೇ ಹೋಗಬಾರದು ಎಂದು ಲಕ್ಷ ಲಕ್ಷ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಶ್ರೀಗಳ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ರಾಮಯ್ಯ ಅವರು ಸಿದ್ದೇಶ್ವರ ಶ್ರೀಗಳು ಮಲಗಿದ್ರೂ, ಮಾತನಾಡಿಸಲು ಆಗಿಲ್ಲ ಆದ್ರೂ ಸಹ ನಾನು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಆಕ್ಸಿಜನ್ ಮೇಲೆ ಶ್ರೀಗಳಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳುವ ಲಕ್ಷಣವಿದೆ ಎಂದರು. ಇನ್ನೂ ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕಳೆದೊಂದು ವಾರದಿಂದ ಕೋಟಿ ಕೋಟಿ ಭಕ್ತರು ಸಿದ್ಧೇಶ್ವರ ಶ್ರೀಗಳ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಜ್ಞಾನಯೋಗಿ ಆಶ್ರಮದಲ್ಲಿ ನಿರಂತರವಾಗಿ ಭಕ್ತರು ಬಂದು ಹೋಗುತ್ತಿದ್ದು, ಎಲ್ಲರ ಮುಖದಲ್ಲೂ ಆತಂಕ ಮನೆಮಾಡಿದೆ.