ಗದಗ: ಅವನೇನು ಶಿಕ್ಷಕನೋ ಅಥವಾ ರಾಕ್ಷಸನೋ ಅರ್ಥವೇ ಆಗುತ್ತಿಲ್ಲ. ಯಾಕಂದ್ರೆ ಏಕಾಏಕಿ ಶಾಲೆಯಲ್ಲೇ ನಾಲ್ಕನೇ ತರಗತಿ ವಿದ್ಯಾರ್ಥಿ ಹಾಗೂ ಶಿಕ್ಷಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹುಚ್ಚಾಟ ತೋರಿದ್ದಾನೆ. ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತನಿಂದ ಕೃತ್ಯ ನಡೆದಿದೆ.

ಇಂದು ಬೆಳಿಗ್ಗೆ ಏಕಾಏಕಿ ಸಹಶಿಕ್ಷಕರ ಮೇಲೆ ಅತಿಥಿ ಶಿಕ್ಷಕನಿಂದ ಸಲಿಕೆಯಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಸಲಿಕೆಯಿಂದ ಕಂಡ ಕಂಡವರ ಮೇಲೆ ಅಟ್ಯಾಕ್ ಮಾಡಿದ ಅತಿಥಿ ಶಿಕ್ಷಕ ಇಡೀ ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ.

ಇದೇ ವೇಳೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ 4ನೇ ತರಗತಿಯ ಭರತ್ ಎನ್ನುವ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ, ಅಲ್ಲದೇ ಮತ್ತೋರ್ವ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ. ಪರಿಣಾಮ ನಾಲ್ಕನೇಯ ತರಗತಿ ವಿದ್ಯಾರ್ಥಿ ಹಾಗೂ ಅತಿಥಿ ಶಿಕ್ಷಕಿ ಗಂಭೀರ ಗಾಯಗೊಂಡಿದ್ದರು. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಆದ್ರೆ ಗಾಯಗೊಂಡಿರೋ ಶಿಕ್ಷಕಿಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ನರಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
