ಮಹಾರುದ್ರನಂತೆ ಭಯಂಕರವಾಗಿತ್ತು ಆತನ ಕೋಪಾಗ್ನಿ..! ಕಾಲುಕೆದರಿ ನಿಂತರೆ ಸಾಕು ಎದುರಿಗಿದ್ದವರ ಎದೆಯಲ್ಲೇ ಬಡಿದಂತೆ ನಗಾರಿ..!! ಆದ್ರೆ ಸದ್ಯ ಮೌನಿಯಾಗಿ ಮಲಗಿಬಿಟ್ಟಿದ್ದಾನೆ ಆತ..! ಇನ್ನೆಂದೂ ಆತನ ರೌದ್ರತೆ ಕಾಣಸಿಗೋದೇ ಇಲ್ಲ..! ಯಾಕಂದ್ರೆ ಆತ ಮರಳಿ ಬಾರದೂರಿಗೆ ಪಯಣ ಬೆಳಿಸಿದ್ದಾನೆ..! ಆದ್ರೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ ಮಹಾರಾಜನಾಗೇ ಉಳಿದಿದ್ದಾನೆ..!
ಯಸ್, ಅವನು ಹಾವೇರಿ ಜಿಲ್ಲೆಯ ಪಾಲಿನ ಮಹಾದಂಡನಾಯಕ.. ಆತನಿಗೆ ಹಾವೇರಿ ಅಷ್ಟೇ ಅಲ್ಲ ಹೊರ ಜಿಲ್ಲೆಗಳಲ್ಲೂ ಸಾವಿರ ಸಾವಿರ ಸಂಖ್ಯೆಯ ಅಭಿಮಾನಿ ಬಳಗವಿದೆ.. ಹುಚ್ಚರಂತೆ ಆರಾಧಿಸೋ ಯುವ ಪಡೆಯಿದೆ.. ಅಂತಹ ಮಹಾದಂಡನಾಯಕ ಈಗ ಅಕ್ಷರಶಃ ಮೌನಿಯಾಗಿದ್ದಾನೆ.. ಸದಾ ಘರ್ಜನೆಯಲ್ಲಿದ್ದ ಆತ ಈಗ ನಿರ್ಲಿಪ್ತವಾಗಿದ್ದಾನೆ..
ಅಂದಹಾಗೆ, ನಾವಿಲ್ಲಿ ಹೇಳಹೊರಟಿರೋದು ಯಾವುದೇ ರಾಜಕಾರಣಿಯ ಕತೆಯನ್ನಲ್ಲ.. ಯಾವುದೇ ಸಿನಿಮಾ ನಟನ ಸ್ಟೋರಿನೂ ಅಲ್ಲ.. ಬದಲಾಗಿ ಮುಗ್ದ ಮನಸ್ಸಿನ, ಮೂಕ ಭಾವಗಳಲ್ಲೇ ಅಭಿಮಾನಿಗಳನ್ನ ತನ್ನತ್ತ ಸೆಳೆದ ಭಯಂಕರ ಚತುರ, ಮುಟ್ಟಿದರೆ ಮುನಿದು ಚಿಮ್ಮುವ ತಾಕತ್ತಿನ ಸರದಾರ, ಮಾಸೂರಿನ ಮಹಾದಂಡನಾಯಕ ಚಾಮುಂಡಿ ಮೂಕಾಂಬಿಕಾ ಎಕ್ಸಪ್ರೆಸ್ ಪೀ ಪೀ ಸ್ಪರ್ಧಾ ಹೋರಿಯ ಕತೆ..
ಹೌದು, ಸಾವಿರಾರು ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರೋ ಚಾಮುಂಡಿ ಕೊನೆ ಕ್ಷಣದವರೆಗೂ ಮೊದಲಿನ ಗೌಡಕಿ ಗಮ್ಮತ್ತಿನಲ್ಲೇ ಇದ್ದ.. ಆದ್ರೆ ಅವನ ಆರೋಗ್ಯ ಕಳೆದ ಕೆಲ ದಿನಗಳಿಂದ ಕೊಂಚ ಹದಗೆಟ್ಟು, ಇವತ್ತು ಶುಕ್ರವಾರ ಬಾರದ ಲೋಕಕ್ಕೆ ತೆರಳಿದ್ದಾನೆ.. ಹಾವೇರಿ ಜಿಲ್ಲೆಯ ಅಪಾರ ಅಭಿಮಾನಿ ಬಳಗದ ಕಣ್ಣಂಚಲ್ಲಿ ಕಣ್ಣೀರಧಾರೆ ಹರಿಸಿ ಹೋಗಿದ್ದಾನೆ.
ನಿಜ, ಮಾಸೂರಿನ ಚಾಮುಂಡಿ ಮೂಕಾಂಬಿಕಾ ಎಕ್ಸಪ್ರೆಸ್ ಪೀ ಪೀ ಸ್ಪರ್ಧಾ ಹೋರಿ ಎಂದೇ ಖ್ಯಾತಿಯಾಗಿರುವ ಹೋರಿ ತೀವ್ರ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದೆ.. ರಾಜ್ಯದ ನಾನಾ ಭಾಗಗಳಲ್ಲಿ ನಡೆದಿದ್ದ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಭಾರೀ ಬಹುಮಾನಗಳನ್ನು ಬಾಚಿ ಕೊಂಡಿತ್ತು.. ಹೀಗೆ ಅನೇಕ ಜನರ ಮನಸ್ಸನ್ನು ಗೆದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದ ಮಾಸೂರಿನ ಪೀ ಪೀ ಹೋರಿ ಪ್ರಖ್ಯಾತಿ ಪಡೆದಿತ್ತು.. ಆದ್ರೆ ಇವತ್ತು ಮಾಸೂರಿನ ಮಹಾರಾಜ ಅಸುನೀಗಿದ್ದಾನೆ.. ಹೀಗಾಗಿ ಸಾವಿರಾರು ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.. ಅಭಿಮಾನಿಗಳ ದಂಡೇ ಅಂತಿಮ ದರ್ಶನಕ್ಕಾಗಿ ಹರಿದು ಬರುತ್ತಿದೆ. ಅಭಿಮಾನಿಗಳು ಅಕ್ಷರಶಃ ಕಣ್ಣೀರಾಗಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.