ಇದು ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ ಅಂತಲೇ ಹೇಳಲಾಗ್ತಿದೆ. ಅದ್ರಲ್ಲೂ ನಮ್ಮ ರಕ್ಷಣೆಗಾಗಿ ಹಗಲಿರುಳು ರಜೆಯಿಲ್ಲದೇ ದುಡಿಯೋ ಪೊಲೀಸರಿಗೆ ಸರ್ಕಾರದ ಅದೊಂದು ಕಾನೂನು ಇಡಿ ಇಡಿಯಾಗಿ ನೋವು ಮತ್ತು ಆತಂಕಕ್ಕೆ ದೂಡಿದೆ ಅಂತಾ ಖುದ್ದು ಪೊಲೀಸ್ ಇಲಾಖೆಯ ಅಸಂಖ್ಯ ಪೇದೆಗಳು ಅಲವತ್ತುಕೊಂಡಿದ್ದಾರೆ. ರಾಜ್ಯ ಸರ್ಕಾರ ಸದ್ಯ 16 A ಕಾಲಂ ನ್ನು ತಿದ್ದುಪಡಿ ಮಾಡಿರೋದು ಸಾಕಷ್ಟು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ.
ಏನದು ತಿದ್ದುಪಡಿ..?
ಈ ಹಿಂದೆ 16A ಕಾಲಂ ಅಡಿಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಬಲಿಷ್ಟ ಕಾನೂನು ಇತ್ತು. ಅದರ ಪ್ರಕಾರ ಅದ್ಯಾವುದೇ ಜಿಲ್ಲೆಯಲ್ಲಿ 7 ವರ್ಷ ಕಾರ್ಯನಿರ್ವಹಿಸಿದ್ರೆ ಆ ನಂತರದಲ್ಲಿ ತಮ್ಮ ಸ್ವಂತ ಜಿಲ್ಲೆ ಅಥವಾ ತಮಗಿಷ್ಟವಾದ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದಿತ್ತು. ಆದ್ರೆ, ಸದ್ಯ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರೋ ಕಾನೂನಿನ ಪ್ರಕಾರ ಇನ್ಮೇಲೆ ಪೊಲೀಸರು ಅದೇಲ್ಲಿ ನಿಯುಕ್ತಿ ಹೊಂದಿ ನೌಕರಿ ಪ್ರಾರಂಭಿಸಿದ್ದರೋ ಅದೇ ಜಿಲ್ಲೆಯಲ್ಲಿ ನಿವೃತ್ತಿ ಹೊಂದಬೇಕಿದೆ. ಹೀಗಾಗಿ, ದೂರದ ಜಿಲ್ಲೆಗಳಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸ್ತಿರೋ ಅದೇಷ್ಟೋ ಪೊಲೀಸರಿಗೆ ಮರ್ಮಾಘಾತವಾಗಿದೆ ಅಂತಾ ಖುದ್ದು ಪೊಲೀಸರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಪೊಲೀಸರ ವಾಟ್ಸಾಪ್ ಗ್ರೂಪ್ ಗಳಲ್ಲಿ ಭಾರೀ ಆಕ್ರೋಶದ ಮಾತು ಆಡುತ್ತಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಪೊಲೀಸರಿಗೂ ವಿನಾಯಿತಿ ಬೇಕು..!
ಅಸಲು, ಸದ್ಯ ತಿದ್ದುಪಡಿ ಮಾಡಿರೋ ನಿಯಮದ ಪ್ರಕಾರ, ಬಹುತೇಕ ಉತ್ತರ ಕರ್ನಾಟಕ ಭಾಗದಿಂದ ದಕ್ಷಿಣ ಕರ್ನಾಟಕ ಸೇರಿ ಹಲವೆಡೆ ನಿಯುಕ್ತಿಗೊಂಡಿರೋ ಪೊಲೀಸರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ ಅಂತಾ ಖುದ್ದು ಪೊಲೀಸರು ಅಲವತ್ತುಕೊಂಡಿದ್ದಾರೆ. ನಿಜ ಅಂದ್ರೆ ಬೇರೆ ಇಲಾಖೆಯವರಂತೆ ಪೊಲೀಸ್ ಇಲಾಖೆಯಲ್ಲಿ ರಜೆಗಳು ಇರಲ್ಲ. ಬಹುತೇಕ 24 ಗಂಟೆಯೂ ಡ್ಯೂಟಿ ಯಲ್ಲೇ ಇರಬೇಕು. ಅಲ್ಲದೇ, ಬಂದೋಬಸ್ತಿಗಾಗಿ ರಾಜ್ಯದ ತುಂಬ ಸುತ್ತಬೇಕು. ಹೀಗಿದ್ದಾಗ ನಮಗೂ ಹೆಂಡ್ತಿ ಮಕ್ಕಳು ಇಲ್ವಾ..? ವಯಸ್ಸಾದ ತಂದೆ ತಾಯಿಗಳಲ್ವಾ..? ಬಂದು ಬಳಗವಿಲ್ವಾ..? ಅವ್ರೇಲ್ಲರನ್ನೂ ಬಿಟ್ಟು ನಾವು ಎಲ್ಲೋ ಬೇರೆ ಜಿಲ್ಲೆಯಲ್ಲಿ ಇಡೀ ಜೀವನಕಳೆಯೋಕೆ ಹೇಗೆ ಸಾಧ್ಯ..? ಹೀಗಾಗಿ, ಮೊದಲಿನ ನಿಯಮವನ್ನೇ ಯಥಾವತ್ತಾಗಿ ಮುಂದುವರಿಸಿ ಅಂತಾ ವಾಟ್ಸಾಪ್ ಗ್ರೂಪುಗಳಲ್ಲಿ ಪೊಲೀಸರು ಮನವಿ ಮಾಡ್ತಿದಾರೆ.
ಆಯಾ ಕ್ಷೇತ್ರಗಳ ಶಾಸಕರಿಗೂ ಮನವಿ.!
ಸರ್ಕಾರದ ಈ ನಿರ್ಧಾರದ ವಿರುದ್ಧ ಸಮರ ಸಾರಿರೋ ಅಸಂಖ್ಯ ಪೊಲೀಸ್ ಪೇದೆಗಳು ಈಗಾಗಲೇ ತಮ್ಮಕ್ಷೇತ್ರದ ಶಾಸಕರೂ ಸೇರಿದಂತೆ, ಸಿಎಂ, ಮಾಜಿ ಸಿಎಂ, ಗೃಹ ಸಚಿವರೂ ಸೇರಿ ಹಲವರಿಗೆ ಮನವಿ ಮಾಡಿದ್ದಾರೆ. ನಮ್ಮನ್ನ ರಕ್ಷಿಸಿ ಅಂತಾ ಅಲವತ್ತುಕೊಂಡಿದ್ದಾರೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯತ್ತಾ ಕಾದು ನೋಡಬೇಕಿದೆ.