ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!

ಮುಂಡಗೋಡ ತಾಲೂಕಿನ ಹುನಗುಂದ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ಬಡ ಕಾರ್ಮಿಕರ ಮಕ್ಕಳಿಗೆ ಅಂತೂ ಇಂತೂ ಆಸರೆ ಸಿಕ್ಕಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಸಿಡಿಪಿಓ ದೀಪಾ ಬಂಗೇರ್ ಮೇಡಮ್ಮು ಹುನಗುಂದಕ್ಕೆ ಧಾವಿಸಿ ಬಂದಿದ್ದಾರೆ. ಬಡಮಕ್ಕಳ ಗೋಳು ಕಣ್ಣಾರೆ ಕಂಡಿದ್ದಾರೆ. ಮಮ್ಮಲ ಮರುಗಿದ್ದಾರೆ. ಇಲಾಖೆಯಿಂದ ಅದೇನೇನು ಸೌಲಭ್ಯ ಇದೆಯೋ ಅದನ್ನೇಲ್ಲ ಯಥಾವತ್ತಾಗಿ ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ, ಪುಟ್ಟ ಕಂದಮ್ಮಗಳ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಹೀಗಾಗಿ, ದೀಪಕ್ಕನ ಕರ್ತವ್ಯಪರತೆಗೆ ಧನ್ಯವಾದ ಹೇಳಲೇಬೇಕಿದೆ.

ಪ್ರತೀ ವರ್ಷದ ಗೋಳು..!
ಅಸಲು, ಸಿಡಿಪಿಓ ದೀಪಕ್ಕರ ಎದುರಿಗೇ ಕಂದಮ್ಮಗಳ ಪೋಷಕರು ಹೇಳಿದಂತೆ, ಇಲ್ಲಿನ ಅಂಗನವಾಡಿ ಕಾರ್ಯಕರ್ತರು ಇವರನ್ನ ಯಾರೂ ಕ್ಯಾರೇ ಮಾಡಿರಲಿಲ್ಲ. ಹಾಗೆ ನೋಡಿದ್ರೆ ಇದು ಇವತ್ತಿನ ಮಾತಲ್ಲ. ಪ್ರತೀ ವರ್ಷವೂ ಕಬ್ಬು ಕಟಾವಿಗೆ ಬರುವ ಕೂಲಿ ಕಾರ್ಮಿಕರು ತಮ್ಮೀಡಿ ಕುಟುಂಬವನ್ನೇ ಇಲ್ಲಿ ಹೊತ್ತು ತಂದಿರುತ್ತಾರೆ. ಈ ವೇಳೆ ಆ ಕುಟುಂಬಗಳಲ್ಲಿ ಪುಟ್ಟ ಪುಟ್ಟ ಮಕ್ಕಳೂ ಇರತ್ತೆ. ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕಿದ್ದ ಮಕ್ಕಳೂ ಇರತ್ತೆ. ಆದ್ರೆ, ಅವರ್ಯಾರಿಗೂ ಯಾವುದೇ ಸೌಲಭ್ಯಗಳೂ ದಕ್ಕುವುದೇ ಇಲ್ಲ. ಅಸಲು, ಆಯಾ ಭಾಗಗಳ ಅಂಗನವಾಡಿ ಕಾರ್ಯಕರ್ತೆಯರು ಇದನ್ನೇಲ್ಲ ಗಮನಿಸಿರಬೇಕಾಗತ್ತೆ. ಆದ್ರೆ, ಹುನಗುಂದ ಭಾಗದ ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ಪಾಪ ಪುರುಸೋತ್ತು ಇರಲಿಲ್ಲವೆನೋ..? ಹೀಗಾಗಿ, ಇಲ್ಲಿನ ಕೆಲ ಯುವಕರು ಪುಟ್ಟ ಕಂದಮ್ಮಗಳ ಪರದಾಟ ಕಂಡು ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ರು. ಹೀಗಾಗಿ, ಆ ಕುರಿತು ವಿಸ್ತೃತ ವರದಿ ಪ್ರಸಾರ ಆಗಿತ್ತು.

ವಲಸಿಗರಿಗೆ..!
ಅಂದಹಾಗೆ, ಸರ್ಕಾರ ಹೀಗೆ ವಲಸೆಗೆ ಬರುವ ಕಾರ್ಮಿಕರ ಮಕ್ಕಳಿಗಾಗೇ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸಿದೆ. ಅಯಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಇದರ ಜವಾಬ್ದಾರಿ ತೋರಬೇಕಾಗಿರತ್ತೆ. ಅದ್ರಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿರತ್ತೆ. ತಮ್ಮ ವ್ಯಾಪ್ತಿಯಲ್ಲಿ ಅದ್ಯಾವುದೇ ಕಂದಮ್ಮಗಳು ಅಥವಾ ಗರ್ಭಿಣಿಯರು ಬಂದ್ರೂ ಅಂತವರಿಗೆ ಆಸರೆಯಾಗಿ ನಿಲ್ಲಬೇಕಾಗಿರತ್ತೆ. ಸರ್ಕಾರದ ಸೌಲಭ್ಯಗಳನ್ನ ನೀಡಬೇಕಿರತ್ತೆ. ಆದ್ರೆ ಇಲ್ಲಿ ಪ್ರತೀ ವರ್ಷವೂ ಅಂಗನವಾಡಿ ಕಾರ್ಯಕರ್ತರು ನಿರ್ಲಕ್ಷ ವಹಿಸಿ ಕಂಡೂ ಕಾಣದಂತೆ ಬೆಪ್ಪಗೆ ಕುಳಿತುಕೊಂಡಿದ್ರು. ಹೀಗಾಗಿ, ಖುದ್ದು ಸಿಡಿಪಿಓ ಮೇಡಮ್ಮಿಗೆ ಇದೇಲ್ಲ ಗಮನಕ್ಕೆ ಬಂದಾಗ ತಮ್ಮವರ ಬೇಜವಾಬ್ದಾರಿಯ ಅರಿವಾಗಿ ತಾವೇ ಖುದ್ದಾಗಿ ಮುಂದೆ ನಿಂತು ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅವಳು ತುಂಬು ಗರ್ಭಿಣಿ..!
ಕಬ್ಬು ಕಟಾವಿಗೆ ಬಂದಿದ್ದ ಕುಟುಂಬಗಳಲ್ಲಿ ಅದೊಬ್ಬ ಗರ್ಭಿಣಿಯ ಗೋಳು ನಿಜಕ್ಕೂ ಬೇಸರ ತರಿಸತ್ತೆ. ಎಂಟು ತಿಂಗಳ ತುಂಬು ಗರ್ಭಿಣಿ ಆಕೆ. ಆದರೂ ಎರಡು ಪುಟ್ಟ ಮಕ್ಕಳೊಂದಿಗೆ ಕೆಲಸಕ್ಕೆ ಬಂದಿರೋ ಈ ಮಹಿಳೆಯ ಪರದಾಟ ಎಂಥವರ ಕಣ್ಣಲ್ಲೂ ಹನಿ ತರಿಸದೇ ಇರದು. ಹೀಗಾಗಿ, ಈ ಗರ್ಭಿಣಿಯ ವಿಷಯ ತಿಳಿದ ಸಿಡಿಪಿಓ ದೀಪಕ್ಕ ನಿಜಕ್ಕೂ ವಾತ್ಸಲ್ಯರೂಪ ತೋರಿದ್ರು. ಆ ಗರ್ಭಿಣಿಯೊಂದಿಗೆ ಅಕ್ಕರೆಯಿಂದ ಮಾತನಾಡಿ ಆಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ್ರು. ಹೀಗಾಗಿ, ಆ ಗರ್ಭಿಣಿಗೆ ಆಸರೆಯ ಭರವಸೆ ಸಿಕ್ಕಿದೆ.

ಒಂದೇ ದಿನಕ್ಕಷ್ಟೇ ಸೀಮಿತ ಬೇಡ..!
ಸಿಡಿಪಿಓ ಮೇಡಂ, ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಖಡಕ್ಕಾಗಿ ಹೇಳಿ. ಆ ಮಕ್ಕಳಿಗೆ ನಿತ್ಯವೂ ಬೇಕಾದ ಸವಲತ್ತುಗಳನ್ನು ಪೂರೈಸಲೇ ಬೇಕಿದೆ. ನೀವು ಬಂದು ಹೋದ ಒಂದೇ ದಿನಕ್ಕಷ್ಟೇ ಇದು ಸೀಮಿತವಾಗದಿರಲಿ. ಆ ಕುಟುಂಬಗಳು ಅದೇಷ್ಟು ದಿನ ಇಲ್ಲಿ ಇರುತ್ತವೆಯೋ ಅಷ್ಟು ದಿನ ಆ ಬಡಮಕ್ಕಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ಸಿಗಲಿ. ಇದಷ್ಟೇ ನಮ್ಮ ಕಳಕಳಿ. ದೀಪಕ್ಕ ಮತ್ತೊಮ್ಮೆ ತಮಗೊಂದು ಬಿಗ್ ಸಲಾಂ..! ಬಡ ಮಕ್ಕಳ ಮೇಲೆ ಹೀಗೇ ಇರಲಿ ನಿಮ್ಮ ಕರುಣೆ..!

 

error: Content is protected !!