ಮುಂಡಗೋಡ: ಸರ್ಕಾರ ಬಡ ಮಕ್ಕಳಿಗೆ ಅಂತಾ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲೂ ಹಳ್ಳಿಗಾಡಿನ ಕಂದಮ್ಮಗಳಿಗೆ ಯಾವುದೇ ಅಪೌಷ್ಟಿಕತೆ ಬರದೆ ಇರಲಿ ಅಂತಾ ಅಂಗನವಾಡಿಗಳ ಮೂಲಕ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಅಲ್ಲದೇ ವಲಸೆ ಬರುವ ಕುಟುಂಬಗಳ ಮಕ್ಕಳಿಗಾಗೇ ಆಯಾ ವ್ಯಾಪ್ತಿಯ ಅಂಗನವಾಡಿಗಳ ಮೂಲಕ ವಿಶೇಷ ಕಾಳಜಿಗಳನ್ನೂ ವ್ಯವಸ್ಥೆ ಮಾಡಿದೆ.
ಒಣಗುತ್ತಿವೆ ಕಂದಮ್ಮಗಳು..!
ಆದ್ರೆ ಮುಂಡಗೋಡ ತಾಲೂಕಿನ ಅಧಿಕಾರಿಗಳಿಗೆ ಮಾತ್ರ ಇದೇಲ್ಲ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ತಾಲೂಕಿನಲ್ಲಿ ಸದ್ಯ ಕಬ್ಬು ಕಟಾವು ಮಾಡಲು ದೂರದ ಜಿಲ್ಲೆಗಳಿಂದ ಬಂದ ಆ ಬಡಕುಟುಂಬಗಳ ಕಂದಮ್ಮಗಳು ಮಳೆ, ಬಿಸಿಲು, ಚಳಿಯಲ್ಲೇ ನಡುಗುತ್ತಿವೆ. ಅಪೌಷ್ಟಿಕತೆಯ ಸುಳಿಗೆ ಸಿಕ್ಕು ನರಳುವ ಹಂತಕ್ಕೆ ಬಂದಿವೆ. ಪ್ರತಿ ವರ್ಷ ಮುಂಡಗೋಡ ತಾಲೂಕಿಗೆ ವಿಜಯಪುರ ಜಿಲ್ಲೆಯಿಂದ ಹಾಗೂ ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಕೂಲಿಕಾರ್ಮಿಕರ ತಂಡಗಳು ಬರ್ತಿವೆ. ಅದು ಅವರ ಹೊಟ್ಟೆಪಾಡಿಗೆ ಅನಿವಾರ್ಯ. ಏನಿಲ್ಲವೆಂದರೂ ಮೂರ್ನಾಲ್ಕು ತಿಂಗಳು ತಾಲೂಕಿನಲ್ಲೇ ಇದ್ದು ಕಬ್ಬು ಕಟಾವು ಮಾಡುವ ಈ ಕಾರ್ಮಿಕರ ಜೊತೆ ಪುಟ್ಟ ಪುಟ್ಟ ಕಂದಮ್ಮಗಳೂ ಬಂದಿವೆ. ಆದ್ರೆ ಹಾಗೆ ಬರುವ ಕಂದಮ್ಮಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯ.
ಅವು ಪುಟ್ಟ ಕಂದಮ್ಮಗಳು..!
ಅಸಲು, ಕಬ್ಬು ಕಟಾವಿಗೆ ಬಂದಿರೋ ಬಡ ಕುಟುಂಬಗಳು ಪುಟ್ಟ ಪುಟ್ಟ ಜೋಪಡಿ ಹಾಕಿಕೊಂಡು ಗದ್ದೆಗಳಲ್ಲೇ ವಾಸಿಸುತ್ತಿವೆ. ಇವ್ರೊಂದಿಗೆ ಹಾಲುಗಲ್ಲದ ಹಸುಗೂಸುಗಳಿಂದ ಹಿಡಿದು ಪುಟ್ಟ ಪುಟ್ಟ ಕಂದಮ್ಮಗಳೂ ಇವೆ. ಆದ್ರೆ, ಈ ಬಡಮಕ್ಕಳು ಸರ್ಕಾರದ ಯಾವ ಸೌಲಭ್ಯಗಳೂ ಸಿಗದೆ ಪರಿತಪಿಸುತ್ತಿವೆ. ಮುಂಡಗೋಡ ತಾಲೂಕಿನ ಹುನಗುಂದ, ಅಗಡಿ, ಇಂದೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಈ ಮಕ್ಕಳು ಗದ್ದೆಯಲ್ಲಿ, ಬಿಸಿಲಲ್ಲಿ ತಮ್ಮ ಬಡ ತಂದೆತಾಯಿಗಳ ಜೊತೆ ಒಣಗುತ್ತಿವೆ, ಸರಿಯಾದ ಊಟೋಪಚಾರಗಳೂ ಇಲ್ಲದೇ ಸೊರಗುತ್ತಿವೆ.. ಆದ್ರೆ ಈ ಗ್ರಾಮದಲ್ಲಿ ಅಂಗನವಾಡಿಗಳಿದ್ರೂ ಯಾರೂ ಈ ಮಕ್ಕಳನ್ನ ಕಣ್ಣೆತ್ತಿ ನೋಡಿಲ್ಲ. ಸರ್ಕಾರ ಇಂತಹ ಮಕ್ಕಳಿಗಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನ ಜಾರಿಗೊಳಿಸಿದ್ದರೂ ಇಲ್ಲಿನ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಈ ಮಕ್ಕಳು ಪರಿತಪಿಸುವಂತಾಗಿದೆ.
ಅಧಿಕಾರಿಗಳೇ ಗಮನಿಸಿ..!
ದುರಂತ ಅಂದ್ರೆ, ಮುಂಡಗೋಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಇದೇಲ್ಲ ನೋಡಲು ಪುರುಸೋತ್ತಿಲ್ಲ. ಹೀಗಾಗಿ, ಇಂತಹ ಮಕ್ಕಳನ್ನ ಕಣ್ಣೆತ್ತಿಯೂ ನೋಡುತ್ತಿಲ್ಲ. ಆಯಾ ಗ್ರಾಮಗಳ ಅಂಗನವಾಡಿಗಳ ವ್ಯಾಪ್ತಿಯಲ್ಲಿ ಇಂತಹ ಮಕ್ಕಳನ್ನು ಗುರುತಿಸಿ ಅಂತವರಿಗೆ ಬೇಕಾದ ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡುತ್ತಿಲ್ಲ. ಹೀಗಾಗಿ, ಬಡ ಮಕ್ಕಳು ಗದ್ದೆಗಳಲ್ಲೇ ಪರದಾಡುತ್ತಿವೆ. ಇನ್ನಾದ್ರೂ ಮಕ್ಕಳ ಕಲ್ಯಾಣ ಇಲಾಖೆ ಆದಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.