ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆಯಾದ ಗಳಿಗೆಯಿಂದಲೇ ಅಕ್ರಮ ದಂಧೆಗಳು ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿವೆ. ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಈಗ ಮತ್ತೆ ಮಟ್ಕಾ ಅನ್ನೊ ದಂಧೆ ಹೆಜ್ಜೆ ಹೆಜ್ಜೆಗೂ ಬಡವರ ರಕ್ತ ಹೀರುತ್ತಿದೆ. ಅಂದಹಾಗೆ, ಇದು ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ಬಂದಿರೋ ಎನ್.ವಿಷ್ಣುವರ್ಧನ್ ಸಾಹೇಬ್ರಿಗೆ “ಪಬ್ಲಿಕ್ ಫಸ್ಟ್” ನೀಡುತ್ತಿರೋ “ಫಸ್ಟ್ ಇನ್ಪರ್ಮೇಶನ್ ರಿಪೋರ್ಟ್” ಅಂದ್ರೆ ಮೊದಲ FIR
ಮಟ್ಕಾ ಅಡ್ಡೆಗಳು..!
ಎಸ್ಪಿ ಸಾಹೇಬ್ರೆ, ಈಗ್ಗೆ ಒಂದು ವರ್ಷವಾಯ್ತು. ಬಹುತೇಕ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಬಂದ್ ಆಗಿತ್ತು. ಅದೇಷ್ಟೋ ಬಡವರ ಹೊಟ್ಟೆಗಳು ತಣ್ಣಗಿದ್ದವು. ಅದಕ್ಕೇಲ್ಲ ಕಾರಣ ಹಿಂದಿನ ಎಸ್ಪಿ ಡಾ.ಸುಮನಾ ಪೆನ್ನೇಕರ್ ಮೇಡಮ್ಮಿನ ಖಡಕ್ ಆದೇಶ. ಆದ್ರೆ, ಯಾವಾಗ ಮೇಡಮ್ಮಿಗೆ ಎತ್ತಂಗಡಿ ಆಯ್ತೋ ಆ ಕ್ಷಣದಿಂದಲೇ ಇಲ್ಲಿನ ಮಟ್ಕಾ ಅಡ್ಡೆಗಳು ಮತ್ತೆ ಕಸಕಡ್ಡಿ ತೆಗೆದು, ಹೋಮ ಹವಣ ಹಾಕಿಸಿಕೊಂಡು ನಂಬರುಗಳ ಚಾರ್ಟ್ ಇಟ್ಕೊಂಡು ಕುಳಿತುಬಿಟ್ಟಿದ್ದಾರೆ. ಹೀಗಾಗಿ, ಮತ್ತೆ ಈಗ ತಾಲೂಕಿನ ಬಡವರ ಅದೇಷ್ಟೋ ಒಲೆಗಳು ತಣ್ಣಗಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಪಾಳಾ ಭಾಗದಲ್ಲಿ..
ಯಸ್, ಪಾಳಾ ಭಾಗದಲ್ಲಿ ಅಂದ್ರೆ, ಪಾಳಾ, ಕಾತೂರು, ಮಳಗಿ ಸೇರಿದಂತೆ ಆ ಭಾಗದ ಹಳ್ಳಿ ಹಳ್ಳಿಗಳಲ್ಲೂ ಮಟ್ಕಾ ಮನೆ ಮಾಡಿದೆ. ಕೆಲವು ಗೂಡಂಗಡಿಗಳೇ ಮಟ್ಕಾ ಅಡ್ಡೆಯಾಗಿ ರಾಜಾರೋಷವಾಗಿ ತಲೆ ಎತ್ತಿವೆ. ಯಾಕಂದ್ರೆ, ಇಲ್ಲಿ ಯಾವ ಕೇಸುಗಳೂ ದಾಖಲಾಗಲ್ಲ. ಆದ್ರೂ ಕೂಡ ನಾಮಕೆವಾಸ್ತೆ ಎನ್ನುವಂತೆ ಹಾಗೆ ಬಂದು, ಹೀಗೆ ಹೋಗುವ ಛಾಳಿ ಇದೆ.
ಅವನೊಬ್ಬ ದಂಧೆಕೋರ..!
ಅಸಲು, ಪಾಳಾ ಭಾಗದಲ್ಲಿ ಮಟ್ಕಾ ಮನೆ ಮಾತಾಗುವಂತೆ ಮಾಡಲು ಪಣ ತೊಟ್ಟು ನಿಂತವನ ಹಿಸ್ಟ್ರಿನೇ ಹಾಗಿದೆ. ಆತ “ಮಟ್ಕಾಲಿ” ಅಂತಲೇ ಫೇಮಸ್ಸು. ಪಾಳಾ ಸಮೀಪದ ಹಳ್ಳಿಯೊಂದರಲ್ಲಿ ಈತನ ವಾಸ. ಇಲ್ಲಿ ಕುಳಿತೇ ಮಟ್ಕಾದ ಅಂಕಿಗಳ ಅಂದರ್ ಬಾಹರ್ ಮಾಡುವ ಈತನ ಖಯಾಲಿಗೆ ಇಡೀ ತಾಲೂಕೇ ಮಟ್ಕಾ ದಂಧೆಗೆ ಒಗ್ಗಿಕೊಳ್ಳುವಂತೆ ಆಗಿದೆ. ಇದೇ ಮಟ್ಕಾ ದಂಧೆಯಿಂದಲೇ ತಿಂದುಂಡು ದುಂಡಗಾಗಿರೋ ಈತನಿಗೆ, ಹಾವೇರಿ ಜಿಲ್ಲೆಯ ಖತರ್ನಾಕ ಕಿಂಗ್ ಪಿನ್ ಓರ್ವನ ನೆಂಟಸ್ತಿಕೆ ಇದೆಯಂತೆ. ಅಷ್ಟಕ್ಕೂ, ಈತನ ಮೇಲೆ ಬಿದ್ದಿರೋ ಕೇಸುಗಳು ಒಂದೆರಡಲ್ಲ. ಆದ್ರೆ ಎಲ್ಲವೂ ನಾಮಕೆ ವಾಸ್ತೆ ಅನ್ನೋದು ಸಣ್ಣ ಮಕ್ಕಳಿಗೂ ಗೊತ್ತು. ಅಸಲು, ಪೊಲೀಸರು ಮನಸ್ಸು ಮಾಡಿದ್ರೆ ಈತನ ಮೇಲೆ, ಇದೇ ಮಟ್ಕಾ ದಂಧೆಯ ಅಡಿಯಲ್ಲೇ ದಾಖಲಾಗಿರೋ ಕೇಸುಗಳ ಆಧಾರದಲ್ಲೇ ಏನೆನೋ ಮಾಡಬಹುದು. ಸದ್ಯ ಉತ್ತರ ಕನ್ನಡದ ಎಸ್ಪಿ ವಿಷ್ಣುವರ್ಧನ್ ಸಾಹೇಬ್ರು ಈ ಪಾಳಾ ಭಾಗದ ದಂಧೆಕೋರನ ಬಗ್ಗೆ ಒಂದಿಷ್ಟು ಗಮನ ಹರಿಸಬೇಕಿದೆ. ಹಾಗಿದ್ದಾಗ ಮಾತ್ರ ಇವತ್ತು ಶಿರಸಿಯಲ್ಲಿ ಮಾದ್ಯಮದವರ ಮುಂದೆ ಮಟ್ಕಾ, ಓಸಿ, ಇಸ್ಪೀಟನ್ನ ನಿಯಂತ್ರಿಸ್ತಿವಿ ಅನ್ನೋ ತಮ್ಮ ಮಾತಿಗೆ ಒಂದಿಷ್ಟು ಖದರ್ರು ಬರಬಹುದು. ಜನರು ನಿಮ್ಮ ಮಾತಿನ ಮೇಲೆ ಒಂದಿಷ್ಟು ನಂಬಿಕೆ ಇಟ್ಕೊಳ್ಳಬಹುದು.
ಅಕ್ರಮ ಮದ್ಯ..!
ಸಾಹೇಬ್ರೆ, ನೀವು ಇವತ್ತು ಹೇಳಿರುವಂತೆ ಸರಾಯಿ ದಂಧೆಯ ನಿಯಂತ್ರಣಕ್ಕೆ ಅದೇನೇನೊ ಕ್ರಮ ಕೈಗೊಳ್ತಿವಿ ಅಂದಿದ್ದಿರಿ. ನಿಜಕ್ಕೂ ಹೆಮ್ಮೆಯಾಗ್ತಿದೆ. ನಮಗೂ ಗೊತ್ತಿದೆ. ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಆಸೆಬುರುಕತನ ಕ್ಯಾಕರಿಸಿ ಉಗಿಯುವಂತಿದೆ. ಅವ್ರ ಆಸೆಬುರುಕತನಕ್ಕೆ ಇವತ್ತು ಇಡೀ ಮುಂಡಗೋಡ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಸಂಖ್ಯೆ ಬಹುಶಃ ಕುಡುಕರ ಸಂಖ್ಯೆಗೂ ಜಾಸ್ತಿ ಇದೆ. ಅಸಲು, ತಾಲೂಕಿನ ಕೆಲವು ಕಿರಾಣಿ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗ್ತಿದೆ. ಮುಂಡಗೋಡಿನ ಬಹುತೇಕ ದಾಬಾ, ಹೊಟೇಲುಗಳಲ್ಲಿ ಅಕ್ರಮವಾಗೇ ಮದ್ಯ ಮಾರಾಟ ಮಾಡಲಾಗ್ತಿದೆ. ಇದೇಲ್ಲ ಪಾಪ ನಿಮ್ಮ ಪೊಲೀಸರಿಗೂ ಗೊತ್ತಿದೆ. ಆದ್ರೆ, ನಿಯಂತ್ರಿಸಲು ಮಾತ್ರ ನೀವೇ ಬರಬೇಕಿದೆ.
ಅವನೊಬ್ಬ ಪೇದೆ..?
ಮಾನ್ಯ ಎಸ್ಪಿ ಸಾಹೇಬ್ರೆ, ತಮಗೆ ಗೊತ್ತಿರಲಿ, ಮಳಗಿ ಭಾಗದಲ್ಲೊಂದು ದಾಬಾ ಇದೆ. ಆ ದಾಬಾದ ಲೈಸೆನ್ಸ್ ಇರೋದು ಅದ್ಯಾವನೋ ಒಬ್ಬ ಬೇರೆಯವನದ್ದು. ಆದ್ರೆ, ನಿಮ್ಮದೇ ಇಲಾಖೆಯ ಅವನೊಬ್ಬ ಕುತಂತ್ರಿ ಪೇದೆ ಈಗ ಹೊಸ ದಂಧೆ ಶುರುವಿಟ್ಟಿದ್ದಾನೆ ಅನ್ನೋ ಬಾತ್ಮಿ ಇದೆ. ಆ ದಾಬಾವನ್ನು ಆ ಪೇದೆ ತನ್ನ ಗೆಳೆಯನೊಂದಿಗೆ ಸೇರಿ ಲೀಜಿಗೆ ಪಡೆದಿದ್ದಾನಂತೆ. ಹೀಗಾಗಿ, ಆ ದಾಬಾ ದಲ್ಲಿ ಈಗ ಎಣ್ಣೆಯಾಟಗಳು, ಮದ್ಯಾರಾಧನೆ ಖುದ್ದು ನಿಮ್ಮ ಇಲಾಖೆಯ ಪೇದೆಯ ನೆರಳಲ್ಲೇ ನಡೀತಿದೆ ಅನ್ನೋ ರೂಮರ್ರು ಹರಡಿದೆ. ತಾವು ಆ ಬಗ್ಗೆ ಒಂದಿಷ್ಟು ಗಮನ ಹರಿಸಿ. ಅಲ್ಲಿನ ಸತ್ಯಾ ಸತ್ಯತೆಯ ಬಗ್ಗೆ ತಿಳಿದುಕೊಳ್ಳಿ. ಒಂದು ವೇಳೆ ಹಾಗೆ ಹರಿದಾಡುತ್ತಿರೋ ಸುದ್ದಿ ನಿಜವೇ ಆದ್ರೆ, ನಿಜಕ್ಕೂ ಅದರಷ್ಟು ಅಸಹ್ಯಕರ ಬೇರೊಂದಿಲ್ಲ ಅಲ್ವಾ ಸರ್..?
ಎಸ್ಪಿ ಸಾಹೇಬ್ರೆ, ಮುಂಡಗೋಡ ತಾಲೂಕಿನಲ್ಲಿ ಅಕ್ರಮಗಳ ಬೆನ್ನತ್ತಿ ಅನಿಷ್ಟ ದಂಧೆಗಳನ್ನು ನಿಯಂತ್ರಿಸಲು ಯಾವಾಗ ಸನ್ನದ್ಧರಾಗ್ತಿರಿ..? ಒಟ್ನಲ್ಲಿ, ತಮ್ಮ ಮೇಲಿರೋ ನಂಬಿಕೆ ಉಳಿಸಿಕೊಳ್ಳೊದು, ಬಿಡೋದು ನಿಮಗೇ ಬಿಟ್ಟಿದ್ದು.. ನಾವೂ ನಿರೀಕ್ಷೆಯಲ್ಲಿದ್ದೇವೆ. ಅಸಲು ಈ ಮಾತು ನಮ್ಮದಲ್ಲ ಇಡೀ ತಾಲೂಕಿನ ಜನರದ್ದು.