ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಶಿಗ್ಗಾವಿ: ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕಾ ದಿನಗಳಲ್ಲಿ ನಾಡು ನುಡಿಯ ಹೆಮ್ಮೆಯ ಸಂಘತಿಗಳ ಕುರಿತು ತಿಳಿದುಕೊಂಡು ನಾಡಿನ ಕೀರ್ತಿ ಬೆಳಗಿದ ಮಹನಿಯರ ಆದರ್ಶಗಳನ್ನು ಪಾಲಿಸುತ್ತ ಹೋದಾಗ ಉತ್ತಮ ರಾಷ್ಟದ ಶಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಶಿಕ್ಷಣ ಪ್ರೇಮಿ ಶಿವಾನಂದ ದೊಡ್ಡಮನಿ ಹೇಳಿದರು.

67ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಶಿಗ್ಗಾವಿ ತಾಲೂಕ ಕುನ್ನೂರ ಪ್ಲಾಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ, ಈ ದಿನದಂದು ಇಡಿ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಈ ದಿಸೆಯಲ್ಲಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸುವದರಿಂದ ವಿದ್ಯಾರ್ಥಿಗಳಲ್ಲಿ ನಾಡು, ನುಡಿ ಬಾಷಾ ಪ್ರೇಮದ ಬಗ್ಗೆ ಶಿಕ್ಷಣ ನೀಡಿದಂತಾಗುತ್ತದೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೈಲಾರಪ್ಪ ಮಮದಾಪುರ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ವಿದ್ಯಾರ್ಥಿಗಳಿಗೆ ಕಲಿಕಾ ದೃಷ್ಟಿಯಿಂದ ಎಲ್ಲ ರೀತಿಯಿಂದಲೂ ಅಗತ್ಯ ಸಹಕಾರ ಸೌಲಭ್ಯ ಒದಗಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕಂಬಾರ, ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಮೆಹಬೂಬಸಾಬ ಜಿಗಳೂರ, ಸುಮಂತಗೌಡ ಪಾಟೀಲ, ಮಾರುತಿ ಮಣಕಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!