ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅನ್ನೋದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವಾಗಿ ವರ್ಷಗಳೇ ಕಳೆದು ಹೋಗಿದೆ. ಪ್ರತೀ ಚುನಾವಣೆ ಬಂದಾಗಲಷ್ಟೇ ಎಲ್ಲೆಲ್ಲಿಂದಲೋ ಬಂದು ಬ್ಯಾನರು, ಪ್ಲೆಕ್ಸು ಕಟ್ಟುವ ನಾಯಕರುಗಳು ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾಗುವ ಚಾಳಿ “ಸಂಪ್ರದಾಯ” ಆದಂತೆ ಆಗಿದೆ. ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರೋ ಈ ಸಂದರ್ಭದಲ್ಲೂ ಮತ್ತದೇ ಸಂಪ್ರದಾಯ ಶುರುವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರಸಕ್ತ ಮುಂಡಗೋಡ ಜೆಡಿಎಸ್ ನಲ್ಲಿ ನಡೆಯುತ್ತಿರೋ ವಿದ್ಯಮಾನಗಳು ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗ್ತಿದೆ.
ಅವ್ರು ಸಂತೋಷ ರಾಯ್ಕರ್
ಹೆಚ್ಚೂ ಕಡಿಮೆ ಒಂದು ವರ್ಷ ಆಗ್ತಾ ಬಂತು, ಮುಂಡಗೋಡ ತಾಲೂಕಿನಾಧ್ಯಂತ ಮುಂದಿನ ವಿಧಾನಸಭಾ ಚುನಾವಣೆಗೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಎಲ್ಲಾ ಕಡೆ ಹೇಳಿಕೊಂಡು ತಿರುಗಾಡಿದ್ದವರು ಇವ್ರು. ಹೆಸ್ರು ಸಂತೋಷ ರಾಯ್ಕರ್ ಅಂತಾ. ಮೊದ ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರು. ನಂತರ ಅದೇನಾಯ್ತೋ ಗೊತ್ತಿಲ್ಲ. ರಾತ್ರೋ ರಾತ್ರಿ ತೆನೆಹೊತ್ತ ಮಹಿಳೆಯನ್ನ ವರಿಸಿಕೊಂಡ್ರು. ಆ ಬಳಿಕ ಬಹುತೇಕ ಗ್ರಾಮಗಳಲ್ಲಿ ಹಬ್ಬ ಹರಿದಿನಗಳಿಗೆ ಶುಭಾಶಯಗಳ ಪ್ಲೆಕ್ಸು, ಬ್ಯಾನರು ಕಟ್ಟಿ ಅದನ್ನೇ ದೊಡ್ಡದೊಂದು ಸಾಧನೆ ಅನಕೊಂಡ್ರೊ ಅಥವಾ ಅದನ್ನೇ ಪಕ್ಷದ ಸಂಘಟನೆ ಅನಕೊಂಡ್ರೊ ಗೊತ್ತಿಲ್ಲ. ಒಟ್ನಲ್ಲಿ ಬರೀ ಪ್ಲೆಕ್ಸುಗಳಲ್ಲೇ ಫೆಮಸ್ಸು ಆಗಲು ತಿಣುಕಾಡುತ್ತಿದ್ದಾರೆ. ಅಲ್ಲದೇ, ಕುಮಾರಣ್ಣ, ದೊಡ್ಡಗೌಡರು ನನ್ನನ್ನೇ ಮುಂದಿನ ಅಭ್ಯರ್ಥಿ ಅಂತಾ ತೀರ್ಮಾನಿಸಿ ಆಗಿದೆ, ಘೋಷಣೆಯೊಂದೇ ಬಾಕಿಯಿದೆ ಅಂತೇಲ್ಲ ಟಂ ಟಂ ಬಾರಿಸಿ ಹೋಗಿರೋ ರಾಯ್ಕರ್ ರಾಯರು, ಕ್ಷೇತ್ರದಲ್ಲಿ ಮಾತ್ರ ಕಾಣ ಸಿಗೋದೇ ಅಪರೂಪ. ಒಮ್ಮೆಯೂ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿಬಿಚ್ಚದ ಈ ನಾಯಕ ಕೇವಲ ಚುನಾವಣೆಗಷ್ಟೇ ಸೀಮಿತವಾದ್ರಾ..? ಗೊತ್ತಿಲ್ಲ.
ಸುಳ್ಳೇ ಸುಳ್ಳಾ..?
ಅಸಲು, ಈ ಸಂತೋಷ ರಾಯ್ಕರ್ ರಾಯರು ಇಷ್ಟು ದಿನ ನಾನೇ ಮುಂದಿನ ವಿಧಾನಸಭಾ ಅಭ್ಯರ್ಥಿ ಅಂತಾ ಹೇಳಿಕೊಂಡು ತಿರುಗಾಡಿದ್ದು ಬರೀ ಸುಳ್ಳಾ..? ಕುಮಾರಣ್ಣ, ದೊಡ್ಡಗೌಡರೇ ತೀರ್ಮಾನಿಸಿದ್ದಾರೆ ಘೋಷಣೆಯೊಂದೇ ಬಾಕಿ ಇದೆ ಅನ್ನೋ ಮಾತು ಆಡಿದ್ದು ಬಹುತೇಕ ಸುಳ್ಳೇ ಸುಳ್ಳಾ..? ಮೊನ್ನೆ ಮುಂಡಗೋಡಿನಲ್ಲಿ ನಡೆದ ಅದೊಂದು ಪತ್ರಿಕಾಗೋಷ್ಟಿ ಇಂತಹದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಪ್ರೊ. ನಾಗೇಶ್ ನಾಯ್ಕ್ ಎಂಬುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸತ್ಯ ಬಯಲಾಗಿದೆ.
ರಾಯ್ಕರ್ ಘೋಶಿತ ಅಭ್ಯರ್ಥಿಯಲ್ಲ..!
ಅಂದಹಾಗೆ, ಅವತ್ತಿನ ಪತ್ರಿಕಾಗೋಷ್ಟಿಯಲ್ಲಿ ದೊರೆತ ಮಾಹಿತಿ ಪ್ರಕಾರ ಕುಮಾರಣ್ಣ ಸಂತೋಷ ರಾಯ್ಕರ್ ರವರಿಗೆ ಅಭ್ಯರ್ಥಿ ಅಂತಾ ಘೋಷಣೆ ಮಾಡೇ ಇಲ್ಲ. ಬದಲಾಗಿ, ಕೆಲವು ದಿನಗಳ ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ರವರು ಸಂತೋಷ ರಾಯ್ಕರ್ ರವರನ್ನು ಸಂಬಾವ್ಯ ಅಭ್ಯರ್ಥಿ ಅನ್ನೋ ದಾಟಿಯಲ್ಲಿ ಹೆಳಿದ್ದರಂತೆ. ಅದೇಲ್ಲ ಕೆಲವು ಸ್ಥಳೀಯ ಪತ್ರಿಕೆಯಲ್ಲಿ ಪ್ರಚಾರವಾಗಿತ್ತು. ಹೀಗಾಗಿ, ಈ ವಿಷಯ ಕುಮಾರಣ್ಣನ ಎದುರು ಪ್ರಸ್ತಾಪವಾದಾಗ ಕೆಂಡಾಮಂಡಲ ಆಗಿದ್ರಂತೆ ಕುಮಾರಣ್ಣ.
ಈ ಕಾರಣಕ್ಕಾಗಿಯೇ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಜೀವಂತವಾಗಿಡಲು ನಾಗೇಶ್ ನಾಯ್ಕರನ್ನು ಕಳಿಸಲಾಗಿದೆ. ತಳಮಟ್ಟದಲ್ಲಿ ಪಕ್ಷ ಬಲಪಡಿಸಿ ಅಂತಾ ಫರ್ಮಾನು ಹೊರಡಿಸಿ ಕಳಿಸಿರೋ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪಡೆಯಲ್ಲಿ ನಾಗೇಶ್ ನಾಯ್ಕರಿಗೆ ಸ್ಥಾನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ “123 ಮಿಷನ್” ಅಡಿಯಲ್ಲಿ ತರಬೇತಿ ನೀಡಿದ್ದಾರೆ. ಹೀಗಾಗಿ, ಬಲಿಷ್ಟ ಜವಾಬ್ದಾರಿ ಹೆಗಲಿಗೇರಿಸಿಕೊಂಡು, ಕ್ಷೇತ್ರದ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯೊಂದಿಗೆ, ಖುದ್ದು ಕುಮಾರಣ್ಣನ ಆಶೀರ್ವಾದ ಪಡೆದಿರೋ ನಾಗೇಶ್ ನಾಯ್ಕರು ಸದ್ಯ ಫಿಲ್ಡಿಗೆ ಇಳಿದಿದ್ದಾರೆ. ಆದ್ರೆ, ಸದ್ಯ ಅಕ್ಷರಶಃ ಕೋಮಾ ಸ್ಥಿತಿಯಲ್ಲಿರೋ ತೆನೆ ಹೊತ್ತ ಮಹಿಳೆಗೆ ಮತ್ತೆ ಜೀವ ತುಂಬೋದು ಇವ್ರಿಂದ ಸಾಧ್ಯವಾ..? ಈ ಪ್ರಶ್ನೆ ಸಹಜವಾಗೇ ಎದ್ದಿದೆ.