ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?

ಯಲ್ಲಾಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಮಾಜಿ NWKSRTC ಅಧ್ಯಕ್ಷ ವಿ.ಎಸ್. ಪಾಟೀಲ್ “ಕೈ” ಪಡೆ ಸೇರುವ ಮುಹೂರ್ತ ಫಿಕ್ಸ್ ಆಗಿದೆ. ನೆವೆಂಬರ್ 4 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕಮಲ ತೊರೆದು “ಕೈ” ಹಿಡಿಯಲಿದ್ದಾರೆ ಪಾಟೀಲರು. ಅಂದಹಾಗೆ, ಇವತ್ತು ಬೆಂಗಳೂರಿನಲ್ಲಿ ಇಂತಹದ್ದೊಂದು ತೀರ್ಮಾನ ಹೊರಬಿದ್ದಿದೆ.

ಡಿಕೆಶಿ ಭೇಟಿ..!
ಅಸಲು, ಹಲವು ತಿಂಗಳುಗಳಿಂದಲೇ ಬಿಜೆಪಿ ಜೊತೆಗಿನ ಸಂಬಂಧ ಕಳೆದುಕೊಂಡಿದ್ದ ವಿಎಸ್ಪಿ, ಬಹುತೇಕ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಒಂದು ಹೆಜ್ಜೆ ಇಟ್ಟಾಗಿತ್ತು. ಆದ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಬ್ಯುಸಿಯಾಗಿದ್ದ ಕಾರಣಕ್ಕೆ ಪಕ್ಷ ಸೇರುವ ದಿನಾಂಕ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿತ್ತು. ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಹಲವು ಮುಖಂಡರ ಜೊತೆ ಡಿಕೆಶಿ ನಿವಾಸದಲ್ಲೇ ಭೇಟಿ‌ಮಾಡಿದ ವಿ.ಎಸ್.ಪಾಟೀಲ್, ಕಾಂಗ್ರೆಸ್ ಸೇರ್ಪಡೆಯ ದಿನಾಂಕ ಪಿಕ್ಸ್ ಮಾಡಿಕೊಂಡಿದ್ದಾರೆ.

ಮೊದಲು ಸೇರ್ಪಡೆ ನಂತ್ರ ಸಮಾವೇಶ..!
ಬೆಂಗಳೂರಿನಲ್ಲಿ ನಡೆದ ಡಿಕೆಶಿ ಭೇಟಿ ವೇಳೆ ಚರ್ಚಿತವಾದಂತೆ, ನವೆಂಬರ್ 4 ರಂದು ಕೆಪಿಸಿಸಿ ಕಚೇರಿಯಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಆ ನಂತರ ಯಲ್ಲಾಪುರ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡುವ ಬಹುದೊಡ್ಡ ಪ್ಲ್ಯಾನ್ ಮಾಡಲಾಗಿದೆ. ಆ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಘಟಾನುಘಟಿ ನಾಯಕರನ್ನೇ ಕರೆತರಲು ಸ್ಕೆಚ್ ರೆಡಿಯಾಗಿದೆ. ಹೀಗಾಗಿ, ಸದ್ಯ ಅಧಿಕೃತವಾಗಿ ನವೆಂಬರ್ 4 ರಂದು ಪಾಟೀಲರು ಕೈ ಹಿಡಿಯೋದು ಪಕ್ಕಾ ಎನ್ನುವಂತಾಗಿದೆ.

ಸಂಚಲನ..?
ನಿಜ, ವಿ.ಎಸ್.ಪಾಟೀಲರು ಕಾಂಗ್ರೆಸ್ ಸೇರ್ಪಡೆಯಾಗುವ ಸಂಗತಿ ಕ್ಷೇತ್ರಾದ್ಯಂತ ಮಕಾಡೆ ಮಲಗಿದ್ದ ಕಾಂಗ್ರೆಸ್ ಗೆ ಮತ್ತೆ ಜೀವ ಕೊಟ್ಟಿದೆ. ಕಾಂಗ್ರೆಸ್ಸಿನಲ್ಲಿ ಸೊರಗಿ ಹೋಗಿದ್ದ ಅದೇಷ್ಟೋ ಮುಖಂಡರುಗಳಿಗೆ ಮತ್ತೆ ಹುಮ್ಮಸ್ಸು ತಂದಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ಅಲ್ಲದೆ ಆಂತರಿಕ ಬೇಗುದಿಯಲ್ಲಿ ಬೆಂದು ಒಳಗೊಳಗೇ ಭುಸುಗುಟ್ಟುತ್ತಿರೋ ಕ್ಷೇತ್ರದೊಳಗಿನ ಕೆಲ ಕೇಸರಿ ಕಲಿಗಳಿಗೂ ಪರ್ಯಾಯ ವೇದಿಕೆ ಸಿಕ್ಕಂತಾಗಿದೆಯಂತೆ. ಹೀಗಾಗಿ, ಕ್ಷೇತ್ರದಲ್ಲಿ ಸದ್ಯ ವಿ.ಎಸ್. ಪಾಟೀಲರ ಹವಾ ಅದ್ಯಾವ ಹೊತ್ತಲ್ಲಿ ಬಿರುಗಾಳಿಯ ರೂಪ ಪಡಿಯತ್ತೊ ಕಾಯಬೇಕಿದೆ.

error: Content is protected !!