ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ನವೆಂಬರ್ ಅಂತ್ಯದ ವೇಳೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಚಿಂತನೆ ನಡೆಸಿದೆ. ಬುಧವಾರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗೆ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
“ಎ” ಕೆಟೆಗರಿ
ಸಭೆಯಲ್ಲಿ ನವೆಂಬರ್ ಅಂತ್ಯದ ವೇಳೆಗೆ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕುನುಗೋಲು ನೀಡಿರುವ ವರದಿ ಆಧರಿಸಿ ಚರ್ಚೆ ಮಾಡಿದ ನಾಯಕರು ಸುಲಭವಾಗಿ ಗೆಲುವು ಸಾಧಿಸಬಹುದಾದ ಕ್ಷೇತ್ರಗಳನ್ನು ಎ ಕೆಟಗೆರಿಗೆ ಸೇರಿಸಿ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.
“ಬಿ” ಕೆಟೆಗರಿ
ಗೆಲ್ಲುವ ಅವಕಾಶಗಳು ಹೆಚ್ಚಿರುವ ಕ್ಷೇತ್ರಗಳನ್ನು ಬಿ ಕೆಟಗೆರಿಯಲ್ಲಿ ಸೇರಿಸಿದ್ದು, ಎರಡನೇ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಮತ್ತು ಗೆಲುವು ಕಷ್ಟ ಎನಿಸಿಕೊಳ್ಳುವ ಕ್ಷೇತ್ರಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ. ಬಿ ಮತ್ತು ಸಿ ಕೆಟಗೆರಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಹಾಗೂ ಮೊದಲ ನೂರು ಕ್ಷೇತ್ರಗಳಲ್ಲಿ 100% ತಂತ್ರ ರೂಪಿಸಲು ಕಾಂಗ್ರೆಸ್ ಪೂರ್ಣ ಸಿದ್ಧವಾಗುವ ಬಗ್ಗೆ ನಾಯಕರು ಚರ್ಚಿಸಿದ್ದಾರೆ.
ಕೆ.ಸಿ ವೇಣುಗೋಪಾಲ್ ವರದಿಯನ್ನು ಪಡೆದುಕೊಂಡು ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಅಭಿಯಾನಕ್ಕೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.