ಮುಂಡಗೋಡ ತಾಲೂಕಿನಲ್ಲಿ ಕಾನೂನಿನ ಭಯವೇ ಹೊರಟು ಹೋಯ್ತಾ..? ಅಥವಾ ಆನೆ ನಡೆದದ್ದೇ ದಾರಿ ಅನ್ನುವ ಹುಂಬತನವಾ..? ಅಥವಾ ಬಂಢತನವಾ..? ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ರಾತ್ರೋ ರಾತ್ರಿ ಸಾರ್ಕಾರದ ಆಸ್ತಿಯೊಂದನ್ನ ಅನಾಮತ್ತಾಗಿ ಕೆಡವಿ ಹಾಕಲಾಗಿದೆ. ಚಿಗಳ್ಳಿಯ ದಿ. ದೇವಕಿ ಚಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯ ಕಂಪೌಂಡ್ ನೆಲಸಮ ಮಾಡಿದ್ದಾರೆ ಕಿಡಿಗೇಡಿಗಳು..! ಆದ್ರೆ, ಯಾರು ಅಂದ್ರೆ ಯಾರೂ ಈ ಬಗ್ಗೆ ಮಾತಾಡ್ತಿಲ್ಲ.. ಇಡೀ ತಾಲೂಕಾಡಳಿತವೇ ಮೌನವಹಿಸಿದೆ.. ಈ ಕ್ಷಣದವರೆಗೂ ಯಾವೊಬ್ಬ ಅಧಿಕಾರಿಗಳೂ ತುಟಿ ಬಿಚ್ಚಿಲ್ಲ.
ಇತಿಹಾಸವಿದೆ..!
ಅಂದಹಾಗೆ, ಚಿಗಳ್ಳಿಯ ಸರ್ಕಾರಿ ಪ್ರೌಢಶಾಲೆ ದಶಕಗಳ ಇತಿಹಾಸ ಹೊಂದಿರೋ ಪ್ರೌಢಶಾಲೆ. ಇದೇ ಶಾಲೆಯಲ್ಲಿ ಕಲಿತು ಇವತ್ತು ಅದೇಷ್ಟೋ ಪ್ರತಿಭಾನ್ವಿತರು ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಎಂ.ಸಿ.ಕಲಾಲರು ಈ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಬೇಕಾಗಿದ್ದ ಜಾಗವನ್ನು ದಾನ ನೀಡಿ ಉಧಾರತೆ ತೋರಿದ್ದರು. ಹೀಗಾಗಿನೇ ಕಳೆದ ಕೆಲ ದಿನಗಳ ಹಿಂದೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ದಾನಿಗಳು ಸೇರಿದಂತೆ ಹಲವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಈಗ ಅದೇ ಪ್ರೌಢಶಾಲೆಯ ಅಂಗಳದಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ತೋರಿದ್ದಾರೆ. ಇಡೀ ಪ್ರೌಢಶಾಲೆಯ ಅಂದವನ್ನೇ ಹಾಳುಗೆಡವಿದ್ದಾರೆ.
ರಾತ್ರೋ ರಾತ್ರಿ..!
ಅಸಲು, ಈ ಸರ್ಕಾರಿ ಪ್ರೌಢಶಾಲೆಯ ಅಂಗಳದ ಕಂಪೌಂಡನ್ನು ಕಳೆದ ಇಪ್ಪತ್ತು ವರ್ಷಗಳ ಹಿಂದೆಯೇ ಕಟ್ಟಲಾಗಿತ್ತು. ಆದ್ರೆ, ದುಷ್ಕರ್ಮಿಗಳು ನಿನ್ನೆ ರಾತ್ರೋ ರಾತ್ರಿ ಇಡೀ ಕಂಪೌಂಡು ಗೋಡೆಯನ್ನೇ ನೆಲಸಮಗೊಳಿಸಿ ಹೋಗಿದ್ದಾರೆ. ಹೀಗಾಗಿ, ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರಿಗೆ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಜ್ಞಾನದೇಗುಲದ ಮೇಲೆ ಅದ್ಯಾವ ಹೀನ ಮನಸ್ಥಿತಿಯವರು ಇಂತಹ ಕ್ರೌರ್ಯ ತೋರಿದ್ರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಅಧಿಕಾರಿಗಳೇ ಗಮನಿಸಿ..!
ಸರ್ಕಾರದ ಆಸ್ತಿಯೊಂದನ್ನ ಹೀಗೆ ಅನಾಮತ್ತಾಗಿ ರಾತ್ರೋ ರಾತ್ರಿ ಕೆಡವಿ ಹೋಗಿದ್ದಾರೆ ಅಂದ್ರೆ ಇದು ನಿಜಕ್ಕೂ ಖಂಡನೀಯ. ಇಂತಹ ಘಟನೆಗಳು ಮತ್ತೆ ತಾಲೂಕಿನಲ್ಲಿ ನಡೆಯದಿರಲಿ. ಈ ಘಟನೆಯಲ್ಲಿ ಅಧಿಕಾರಿಗಳು ನರಸತ್ತವರಂತೆ ವರ್ತಿಸುವದನ್ನು ಬಿಟ್ಟು ಆದಷ್ಟು ಕಠಿಣ ಕ್ರಮ ಕೈಗೊಳ್ಳುವಂತಾಗಲಿ. ಇಲ್ಲವಾದಲ್ಲಿ ಇದೇ ಘಟನೆ ಮತ್ತೊಂದು ಘಟನೆಗೆ ಪ್ರೇರಣೆಯಾದೀತು. ಅಂತಹ ಬಂಢರಿಗೆ ತಕ್ಕ ಶಾಸ್ತಿ ಮಾಡದೇ ಇದ್ದಲ್ಲಿ ಜ್ಞಾನ ದೇಗುಲಗಳ ಗತಿಯೇನು..? ಸಮಸ್ಯೆಗಳು, ವ್ಯಾಜ್ಯಗಳು ಅದೇನೇ ಇರಲಿ, ಬಗೆಹರಿಸಿಕೊಳ್ಳಲು ಕಾನೂನು ಇದೆ, ಹಿರಿಯರಿದ್ದಾರೆ, ಬಲಿಷ್ಟ ವ್ಯವಸ್ಥೆ ಇದೆ. ಅದನ್ನ ಬಿಟ್ಟು ಹೀಗೇಲ್ಲ ಸರ್ಕಾರಿ ಆಸ್ತಿಗಳನ್ನು ನಿರ್ನಾಮಗೊಳಿಸುವ ಹೀನ ಕೃತ್ಯ ಸರಿನಾ..? ದುಷ್ಟರು ಯೋಚಿಸಬೇಕಿದೆ.. ಸಂಬಂಧಪಟ್ಟ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ. ದುಷ್ಕೃತ್ಯ ಎಸಗಿದವರು ಅದ್ಯಾರೇ ಇರಲಿ, ಅದೇನೆ ಸಮಸ್ಯೆ ಇರಲಿ ತಕ್ಷಣವೇ ಬಂಧಿಸಬೇಕಿದೆ. ಇದು ಸಮಸ್ತ ಶಿಕ್ಷಣ ಪ್ರೇಮಿಗಳ ಆಗ್ರಹ.