ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ ಎತ್ತಂಗಡಿಗೆ ಅದೊಂದು ಪಡೆ ಸನ್ನದ್ಧವಾಗಿದೆಯಂತೆ. ಅಂತಹದ್ದೊಂದು ರೂಮರ್ರು ತಾಲೂಕಿನ ತುಂಬ ಎದ್ದಿದೆ. ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸ್ತಿಲ್ಲ, ನಮಗೆ ಕಿಮ್ಮತ್ತು ಕೊಡ್ತಿಲ್ಲ ಅಂತಾ ಅದೊಂದು ಟೀಂ ಅದ್ಯಾರ್ಯಾರದ್ದೋ ಕಿವಿ ಕಚ್ಚಿ ಹೆಂಗಾದ್ರೂ ಸರಿ ಪಿಎಸ್ಐರನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿಕೊಂಡಿದೆಯಂತೆ.

ದಕ್ಷ ಯುವ ಪಡೆ..!
ಅಂದಹಾಗೆ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತಿಗೂ ದಕ್ಷ ಯುವ ಪಡೆ ಇದೆ. ಅದ್ಯಾವನೇ ನಾಗರಿಕ ತನ್ನ ಅಳಲು ತೋಡಿಕೊಳ್ಳಲು ಠಾಣೆಯ ಮೆಟ್ಟಿಲು ಹತ್ತಿದ್ರೆ ಸಾಕು ಸಾಂತ್ವನ ನೀಡುವ ಸ್ನೇಹಮಯ ಮನಸ್ಸುಗಳು ಇವೆ. ಮೊದಲಿನ ಹಾಗೆ, ವಿನಾಕಾರಣ ಪೊಲೀಸುಗಿರಿ ತೋರಿಸಿ ರಾತ್ರಿಯಾದ್ರೆ ಕ್ಚಾಟರ್ ಗಾಗಿ ಕಾಯುವ ವಸೂಲಿವೀರ ಖಾಕಿಗಳು ಬಹುಶಃ ಯಾರೂ ಉಳಿದಿಲ್ಲ. ಹೀಗಾಗಿ, ಅದೇನೇ ಸಮಸ್ಯೆ ಹೊತ್ತೊಯ್ದರು ಕುಳಿತು ಬಗೆಹರಿಸುವ ಹೃದಯವಂತ ಹುಡುಗ್ರು ಠಾಣೆಯಲ್ಲಿದ್ದಾರೆ. ಆದ್ರೆ, ಅವ್ರಿಗೇಲ್ಲ ಅದೊಂದೇ ಪಿಡುಗು ಜೀವ ಹಿಂಡ್ತಿದೆ‌. ಬ್ರೋಕರ್ ಗಳ ಹಾವಳಿ ಹೆಜ್ಜೆ ಹೆಜ್ಜೆಗೂ ಕಟ್ಟಿ ಹಾಕ್ತಿದೆ.

ಬ್ರೋಕರ್ ಗಳ ಅಡ್ಡ ದಂಧೆ..!
ಅಸಲು, ಮುಂಡಗೋಡ ಪೊಲೀಸ್ ಠಾಣೆಯ ಅಂಗಳದಲ್ಲಿ ಈಗ ಐರನ್ ಬಟ್ಟೆ ಹಾಕ್ಕೊಂಡು ದಂಧೆ ನಡೆಸುವ ಬ್ರೋಕರ್ ಗಳ ಹಾವಳಿ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಬೆಳಗಾಯಿತೆಂದರೆ ಸಾಕು ಪೊಲೀಸು ಠಾಣೆಯ ಅಂಗಳದಲ್ಲೇ ಕಾದು ಕುಳಿತುಕೊಳ್ಳುವ ಕೆಲ ಬ್ರೋಕರ್ ಗಳು ಪೊಲೀಸರಿಗೆ ತಲೆನೋವಾಗಿದ್ದಾರೆ. ಅದ್ಯಾರೇ ತಮ್ಮ‌ ಕಷ್ಟ ಕಾರ್ಪಣ್ಯ ಹೊತ್ತು ತಂದ್ರೆ ಸಾಕು, ಸೀದಾ ದಾಳಿ ಮಾಡುವ ಬ್ರೋಕರ್ ಗಳು ನಾನೇಲ್ಲ ಬಗೆಹರಿಸ್ತಿನಿ ನೀವು ತಲೆಕೆಡಿಸಿಕೊಳ್ಳಬೇಡಿ ಅಂತಾ ಡೀಲಿಗೆ ಕುಳಿತು ಬಿಡ್ತಾರಂತೆ. ನಿಜ ಅಂದ್ರೆ ಇದೇಲ್ಲ ಪಾಪ ಪೊಲೀಸರಿಗೆ ಗೊತ್ತೇ ಇರಲ್ಲ. ಅವ್ರ ಹೆಸರಲ್ಲೇ ಇವ್ರಿಗೆ ಇಂತಿಷ್ಟು ಅಂತಾ ಹಣದ ವ್ಯವಹಾರ ನಡೆದು ಬಿಟ್ಟಿರತ್ತೆ. “ಸಾಹೇಬ್ರಿಗೆ ನಾನು ಹೇಳ್ತಿನಿ ನನ್ನ ಮಾತು ಮೀರಂಗಿಲ್ಲ” ಅಂತಾ ಪೋಸು ಕೊಟ್ಟು ಧಿಮಾಕಿನ ಆಟ ಆಡಿ ಬಿಡ್ತಾರಂತೆ ಹೀಗಾಗಿ, ಠಾಣೆಯ ಸುತ್ತಮುತ್ತ ಗಂಜಿ ಗಿರಾಕಿಗಳದ್ದೇ ಕಾರುಬಾರು ಅನ್ನುವಂತಾಗಿದೆ.

ಮಬನೂರಿಗೂ ಅದೇ ಕಾಟ..?
ನಿಜ ಅಂದ್ರೆ, ಇಂತಿಪ್ಪ ಬ್ರೋಕರುಗಳೇ ಈಗ ಬಸವರಾಜ್ ಮಬನೂರು ಮೇಲೆ ಕೆಂಡ ಕಾರ್ತಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಿವೆ. ಯಾಕಂದ್ರೆ, ಮುಂಡಗೋಡಿನ ಪಿಎಸ್ಐ ಬಸವರಾಜ್, ಈ ಐರನ್ನುಗಳ ಮಾತಿಗೆ ಯಾವತ್ತೂ ಮಣೆ ಹಾಕುವ ಮನುಷ್ಯನಲ್ಲ. ಈತನ ಟೇಬಲ್ಲಿನ ಮೇಲೆ ಅದ್ಯಾವುದೇ ಕೇಸು ಬಂದು ಬಿದ್ರೂ ಅದನ್ನ ತನ್ನದೇ ದೃಷ್ಟಿಕೋನದಲ್ಲಿ ಬಗೆಹರಿಸುವ ಜಾಯಮಾನದವರು. ಹೀಗಾಗಿ, ಈ ಪಿಎಸ್ಐ ಹತ್ರ ಕೇಸು ಬಗೆಹರಿಸಲು ಬ್ರೋಕರುಗಳಿಗೆ ಬಹುತೇಕ ಸಾಧ್ಯವೇ ಇಲ್ಲ. ಈ ಕಾರಣಕ್ಕಾಗೇ
ದಂಧೆಗೆ ಅಡ್ಡಿಯಾಗ್ತಿದಾನೆ ಅಂತಾ ಅಂತಹ ಕೆಲ ಹುಂಬ ಬ್ರೋಕರುಗಳೇ ಎತ್ತಂಗಡಿ ಮಾಡಿಸಲು ಪ್ಲ್ಯಾನ್ ಮಾಡಿದ್ರಾ..? ಗೊತ್ತಿಲ್ಲ.

ದುರಂತ..!
ಸ್ನೇಹಿತರೆ, ನಾನಿಲ್ಲಿ ಯಾರದ್ದೋ ಸಾಚಾತನಗಳ ವಕಾಲತ್ತು ಖಂಡಿತ ವಹಿಸ್ತಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನೊಂದವರ ಕಣ್ಣೀರು ಒರೆಸಲು ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ. ಆದ್ರೆ, ಅಂತಹ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಕೆಲ ದಂಧೆಕೋರರು ಬರೋದಾದ್ರೂ ಯಾಕೆ..? ಸಣ್ಣದೊಂದು ದೂರು ಕೊಡಲು ಬಂದ್ರೂ ಪಾಪ ಬಡವರ ಹತ್ರ ಪೊಲೀಸರ ಹೆಸರಿನಲ್ಲಿ ಯಾಕೆ ಹಣ ಪೀಕುವುದು..? ಅಸಲು, ಇದೇಲ್ಲ ಸಾರ್ವಜನಿಕರಿಗೆ ಇಡೀ ಪೊಲೀಸು ವ್ಯವಸ್ಥೆಯ ಮೇಲೆಯೇ ವಾಕರಿಕೆ ತರುವಂತೆ ಆಗಲ್ವಾ..? ಯಾರೋ ತಿಂದುಂಡು ಮುಸುರಿ ಮಾತ್ರ ಪೊಲೀಸರ ಬಾಯಿಗೆ ಒರಿಸಿದಂತೆ ಅಲ್ವಾ ಇದೇಲ್ಲ…? ಹಾಗಿದ್ರೆ ಇದನ್ನೇಲ್ಲ ಪೊಲೀಸ್ರು ಸಹಿಸ್ಕೊಬೇಕಾ..? ಖಂಡಿಸಬಾರ್ದಾ..? ಹಾಗೇ ಖಂಡಿಸಿದ್ರೆ ಅಂತವರಿಗೆ ಎತ್ತಂಗಡಿಯ ಶಿಕ್ಷೆಯಾ..? ಛೇ ಏನಿದೇಲ್ಲ ಅಂತಾ ಪ್ರಶ್ನಿಸ್ತಿದಾರೆ ಪೊಲೀಸ್ರು..

ಗಮನಿಸಿ..!
ಮುಂಡಗೋಡ ಪೊಲೀಸ್ ಠಾಣೆಯ ಅಂಗಳದಲ್ಲಿ ನಿತ್ಯವೂ ಯಾರ್ಯಾರದ್ದೋ ಕೇಸಿನ ಪೈಲು ಹಿಡಿದು ಹಲ್ಲು ಗಿಂಜುವ ಬ್ರೋಕರುಗಳ ಹಾವಳಿ ತಪ್ಪಿಸಬೇಕಿದೆ. ಆ ಸಾಹೇಬಾ ನನ್ನ ಮಾತು ಮೀರಲ್ಲ, ನಾನು ಹಾಕಿದ ಗೆರೆ ದಾಟಲ್ಲ ಅಂತಾ ಹವಾ ಮೇಂಟೇನ್ ಮಾಡುವ ಸುಳ್ಳುಬುರುಕ ಬ್ರೋಕರುಗಳನ್ನ ಮಟ್ಟ ಹಾಕಬೇಕಿದೆ. ಹಾಗಂತ, ಪೊಲೀಸರೂ ಅವ್ರಿಗೆ ಬೇಕಾದ್ರೆ ಗೌರವ ಕೊಡಲಿ ಬೇಡ ಅನ್ನಲ್ಲ. ಆದ್ರೆ, ಅಂತವರು ತರುವ ಕೇಸುಗಳನ್ನ ಯಾರ್ಯಾರದ್ದೋ ಇಶಾರೆಯಲ್ಲಿ ಕಣ್ಣು‌ಮುಚ್ಚಿ ಬಗೆಹರಿಸದೇ, ಕೂಲಂಕುಶವಾಗಿ ಚರ್ಚಿಸಿ, ವಿಚಾರಿಸಿ ಬಗೆಹರಿಸಬೇಕಿದೆ ಅಂದಾಗ ಮಾತ್ರ ಬ್ರೋಕರುಗಳಿಗೆ “ಗೂಟ” ಜಡಿಯಲು ಸಾಧ್ಯ. ಅಲ್ವಾ..? ಅಷ್ಟಕ್ಕೂ, ಇನ್ನೇನು ವಿಧಾನಸಭೆ ಚುನಾವಣೆ ಹೊತ್ತಿಗೆ ಸಹಜವಾಗೇ ನಡೆಯುವ ವರ್ಗಾವಣೆ ಇದ್ದೇ ಇರತ್ತೆ, ಅವಾಗ ಬೇಕಾದ್ರೆ ಅದೇನಾದ್ರೂ ಮಾಡ್ಕೊಳ್ಳಿ. ಆದ್ರೆ, ಹೊತ್ತಲ್ಲದ ಹೊತ್ತಲ್ಲಿ ಹೀಗೇಲ್ಲ ಯಾರ್ಯಾರದ್ದೋ ಮಸಲತ್ತುಗಳಿಗೆ ಅಧಿಕಾರಿಗಳನ್ನು ಬಲಿಕೊಡೋದು ಎಷ್ಟರ ಮಟ್ಟಿಗೆ ಸರಿ..? ಹಾಗಂತ ಪ್ರಶ್ನೆ ಮಾಡ್ತಿದಾರೆ ತಾಲೂಕಿನ ಜನ.

error: Content is protected !!