ಕಲಘಟಗಿ: ತಾಲೂಕಿನ ಅಸ್ತಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಓರ್ವ ಯುವತಿ ಬಲಿಯಾಗಿದ್ದಾಳೆ. ಕು.ಲಕ್ಷ್ಮೀ ವಿರೂಪಾಕ್ಷಪ್ಪ ಪಾಟೀಲ್(18) ಸಿಡಿಲಿಗೆ ಬಲಿಯಾದವಳಾಗಿದ್ದಾಳೆ. ನಿನ್ನೆ ರಾತ್ರಿ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಗೆ ಯುವತಿ ಬಲಿಯಾಗಿದ್ದು ದುರಂತ ಸಾವು ಕಂಡಿದ್ದಾಳೆ.
ಅಂದಹಾಗೆ, ಮೃತ ಲಕ್ಷ್ಮೀ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದಳು. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯ ಒಳಗೆ ಇದ್ದಾಗ, ಏಕಾಏಕಿ ಲಕ್ಷ್ಮೀಯ ಎದೆಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಹೀಗಾಗಿ, ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಈಕೆಯ ತಾಯಿ ಸಾವನ್ನಪ್ಪಿದ್ದಳು. ಈಗ ವಿಧಿಯು ಸಿಡಿಲಿನ ರೂಪದಲ್ಲಿ ಯುವತಿಯನ್ನು ಬಲಿ ಪಡೆದಿದೆ. ಹೀಗಾಗಿ, ಮೊದಲೇ ತೀರ್ವ ಆರ್ಥಿಕ ಸಂಕಷ್ಟದಲ್ಲಿರೋ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.